ಉದ್ಯಮಿ ಸಂತೋಷ ಸಾವು, ಮೂವರ ಸೆರೆ

17Creima
ಬಂಧಿತರನ್ನು ವಿಚಾರಣೆಗೆ ಕರೆದೊಯ್ಯುತ್ತಿರುವ ಪೊಲೀಸರು
Published on

ಬೆಳಗಾವಿ: ಮಹಾಂತೇಶ ನಗರ ನಿವಾಸಿ, ಉದ್ಯಮಿ ಸಂತೋಷ ಪದ್ಮಣ್ಣವರ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಳಮಾರುತಿ ಠಾಣೆ ಪೊಲೀಸರು ಗುರುವಾರ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಮೃತ ಸಂತೋಷ ಪತ್ನಿ ಉಮಾ (41), ಉಮಾ ಅವರ ಫೇಸ್‌ಬುಕ್ ಸ್ನೇಹಿತರಾದ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಶನಿವಾರಪೇಟೆ ಗ್ರಾಮದ ಶೋಭಿತಗೌಡ (30) ಮತ್ತು ಪವನ (27) ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳ ವೈದ್ಯಕೀಯ ಪರೀಕ್ಷೆ ನಡೆಸಿದ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ. ಮೃತ ಸಂತೋಷ ಅವರ ಪುತ್ರಿ ಸಂಜನಾ, ಇದು ಅಸಹಜ ಸಾವು ಎಂದು ಶಂಕಿಸಿ ತಾಯಿ ಉಮಾ ವಿರುದ್ಧ ದೂರು ದಾಖಲಿಸಿದ್ದರು. ತನಿಖೆ ನಡೆಸಿದ್ದ ಪೊಲೀಸರು ಸದಾಶಿವನಗರದ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡಿದ್ದ ಸಂತೋಷ ಅವರ ಮೃತದೇಹವನ್ನು ಹೊರ ತೆಗೆದು ಬುಧವಾರ ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಿದ್ದರು.

ಮುಂದುವರಿದ ತನಿಖೆ: ಸಂತೋಷ ಪತ್ನಿ ಉಮಾ ಹಾಗೂ ಸ್ನೇಹಿತರಾದ ಶೋಭಿತಗೌಡ, ಪವನ ಮತ್ತು ಮನೆ ಕೆಲಸದವರು ಕೂಡಿಕೊಂಡು ಉಸಿರುಗಟ್ಟಿಸಿ ಕೊಲೆ ಮಾಡಿರುವ ಬಗ್ಗೆ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದರು. ಸಂತೋಷ ಅವರಿಗೆ ನಿದ್ರೆ ಮಾತ್ರೆ ಹಾಕಿ ಉಸಿರುಗಟ್ಟಿಸಿ ಕೊಲೆ ಮಾಡಲು ಯತ್ನಿಸಿದರೂ ಸಂತೋಷ ಮೃತಪಟ್ಟಿರಲ್ಲವಂತೆ. ಕೊನೆಗೆ ಸ್ನೇಹಿತರ ಸಹಾಯರಿಂದ ಉಮಾ ಸಂತೋಷನನ್ನು ಕೊಲೆ ಮಾಡಿರುವುದಾಗಿ ಬಂಧಿತ ಆರೋಪಿಗಳು ಪೊಲೀಸರ ಮುಂದೆ ತಪ್ಪು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮನೆ ಕೆಲಸದವರಾದ ನಂದಾ ಕುರಿಯಾ, ಪ್ರಕಾಶ ಕುರಿಯಾ ಅವರ ಹೆಸರು ಎಫ್‌ಐಆರ್‌ನಲ್ಲಿ ದಾಖಲಾಗಿದ್ದು, ಅವರನ್ನೂ ಬಂಧಿಸಿ ವಿಚಾರಣೆ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net