

ನೆಲಮಂಗಲ: ಉದ್ಯಮಿಯೊಬ್ಬರನ್ನು ಅಪಹರಣ ಮಾಡಿದ ದುಷ್ಕರ್ಮಿಗಳು ಚಿತ್ರಹಿಂಸೆ ನೀಡಿ, ವಿವಿಧ ಬ್ಯಾಂಕ್ ಖಾತೆಗಳಿಗೆ 15 ಲಕ್ಷ ರೂಪಾಯಿ ವರ್ಗಾವಣೆ ಮಾಡಿಸಿಕೊಂಡು ಸಕಲೇಶಪುರದ ರೆಸಾರ್ಟ್‌ನಲ್ಲಿ ಬಿಟ್ಟು ಕಾಲ್ಕಿತ್ತಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಕೊಲ್ಪೆ ಗ್ರಾಮದ ನಿವಾಸಿ, ಉದ್ಯಮಿ ಇಕ್ಬಾಲ್ ಅಪಹರಣಕ್ಕೊಳಗಾದವರು.
ಇಕ್ಬಾಲ್ ಪೆಟ್ರೋಲ್ ಬಂಕ್ ಹಾಗೂ ಟ್ರಾನ್ಸ್ ಪೋರ್ಟ್ ನಡೆಸುತ್ತಿದ್ದು, ಜ.24ರಂದು ದೇವನಹಳ್ಳಿಯ ಖಾಸಗಿ ಹೋಟೆಲ್‌ಗೆ ಕೆಲಸದ ನಿಮಿತ್ತ ತೆರಳಿ ರಾತ್ರಿ ಬೆಂಗಳೂರಿನ ಸ್ನೇಹಿತ ಕರೀಮ್ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಎಲ್ಲ ಕೆಲಸ ಮುಗಿಸಿ ಜ.25ರಂದು ಬೆಳಗ್ಗೆ ಕರೀಮ್‌ನಿಂದ 1.23 ಲಕ್ಷ ರೂಪಾಯಿ ಪಡೆದುಕೊಂಡು ರಾತ್ರಿ 10 ಗಂಟೆಗೆ ರಾಷ್ಟ್ರೀಯ ಹೆದ್ದಾರಿ 75ರ ಕುಣಿಗಲ್ ವೃತ್ತದ ಬಳಿ ಇರುವ ಹೋಟೆಲ್‌ನಲ್ಲಿ ಊಟ ಮುಗಿಸಿ ಮಂಗಳೂರು ಮಾರ್ಗವಾಗಿ ತೆರಳುತ್ತಿದ್ದಾಗ ಮಾರ್ಗಮಧ್ಯದ ಹೆದ್ದಾರಿಯಲ್ಲಿ ದುಷ್ಕರ್ಮಿಗಳು ಇಕ್ಬಾಲ್ ಅವರ ಕಾರು ಅಡ್ಡಗಟ್ಟಿ ಮಾರಕಾಸ್ರಗಳಿಂದ ಬೆದರಿಸಿ ಅದೇ ಕಾರಿನಲ್ಲಿ ಅಪಹರಿಸಿದ್ದಾರೆ. ಅಲ್ಲದೆ ಅವರ ಬ್ಯಾಂಕ್ ಖಾತೆಯಿಂದ ಮೊಬೈಲ್ ಮೂಲಕ ಪ್ರತಿದಿನ 5 ಲಕ್ಷ ರೂಪಾಯಿಯಂತೆ ಒಟ್ಟು 15 ಲಕ್ಷ ರೂಪಾಯಿ ವರ್ಗಾವಣೆ ಮಾಡಿಕೊಂಡು, ಜ.26ರಂದು ಸಕಲೇಶಪುರದಲ್ಲಿದ್ದ ಇಕ್ಬಾಲ್ ಸಹೋದರನ ರೆಸಾರ್ಟ್‌ಗೆ ತೆರಳಿ ಸಹೋದರನನ್ನು ಕೊಲೆ ಮಾಡುವುದಾಗಿ ಬೆದರಿಸಿ ಆತನಿಂದಲೂ 13 ಲಕ್ಷ ರೂ. ನಗದು ಪಡೆದುಕೊಂಡು, ನಂತರ ಇಕ್ಬಾಲ್‌ನನ್ನು ರೆಸಾರ್ಟ್ ಬಳಿಯೇ ಬಿಟ್ಟು ಕಾರು ಹಾಗೂ ಮೊಬೈಲ್ ದೋಚಿಕೊಂಡು ಪರಾರಿಯಾಗಿದ್ದಾರೆ.
ದುಷ್ಕರ್ಮಿಗಳಿಂದ ಬೆದರಿಕೆ
ಪೊಲೀಸರಿಗೆ ದೂರು ನೀಡಿದರೆ ಕಾರು, ಮೊಬೈಲ್ ಕೊಡುವುದಿಲ್ಲ ಎಂದು ಎರಡು ದಿನಗಳ ಕಾಲ ಚಿತ್ರ ಹಿಂಸೆ ನೀಡಿದ್ದಾರೆ. ಉಡುಪಿಯ ಗರುಡ ಗ್ಯಾಂಗ್ ಎಂದು ಹೇಳಿಕೊಂಡು ಕೊಲ್ಲುವುದಾಗಿಯೂ ಬೆದರಿಕೆ ಹಾಕಿದರು. ಮೂರು ಮಂದಿ ಹಲ್ಲೆ ಮಾಡಿ ವಿಕೃತವಾಗಿ ನಡೆದುಕೊಂಡರು ಎಂದು ಗ್ರಾಮಾಂತರ ಠಾಣೆಗೆ ನೀಡಿರುವ ದೂರಿನಲ್ಲಿ ಇಕ್ಬಾಲ್ ಉಲ್ಲೇಖಿಸಿದ್ದಾರೆ. ಪೊಲೀಸರು ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಿ ಶೋಧ ಕಾರ್ಯ ಆರಂಭಿಸಿದ್ದಾರೆ.
ನಡುರಸ್ತೆಯಲ್ಲೇ ಬರ್ಬರ ಹತ್ಯೆಸರ್ಜಾಪುರ: ದೊಮ್ಮಸಂದ್ರ ಸಂತೆ ಬೀದಿಯಲ್ಲಿ ದುಷ್ಕರ್ಮಿಗಳ ತಂಡ ವ್ಯಕ್ತಿಯೊಬ್ಬರನ್ನು ಲಾಂಗು, ಮುಚ್ಚುಗಳಿಂದ ಹಲ್ಲೆ ಮಾಡಿ ಬರ್ಬರ ಹತ್ಯೆ ಮಾಡಿದೆ.
ದೊಮ್ಮಸಂದ್ರ ನಿವಾಸಿ ವೆಂಕಟೇಶ್ (35) ಕೊಲೆಯಾದವ. ಹತ್ತು ವರ್ಷದ ಹಿಂದೆ ಕೊಲೆ ಪ್ರಕರಣವೊಂದರಲ್ಲಿ ಜೈಲಿಗೆ ಹೋಗಿ ಬಂದಿದ್ದ ವೆಂಕಟೇಶ್, ರೌಡಿಸಂ ಬಿಟ್ಟು ಸಣ್ಣಪುಟ್ಟ ರಿಯಲ್ ಎಸ್ಟೇಟ್ ವ್ಯವಹಾರ ಮಾಡಿಕೊಂಡು ಪತ್ನಿ ಇಬ್ಬರು ಮಕ್ಕಳ ಜತೆ ಜೀವನ ಸಾಗಿಸುತ್ತಿದ್ದ. ಮಂಗಳವಾರ ತಡರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದಾಗ ಕಾರು ಮತ್ತು ಮೂರು ಬೈಕ್‌ಗಳಲ್ಲಿ ಹಿಂಬಾಲಿಸಿ ಬಂದಿದ್ದ ಹಂತಕರು, ಮನೆ ಸಮೀಪದಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ, ಅಡಿಷನಲ್ ಎಸ್.ಪಿ ನಾಗೇಶ್, ಆನೇಕಲ್ ಉಪ ವಿಭಾಗದ ಡಿವೈಎಸ್ಪಿ ಮೋಹನ್ ಕುಮಾರ್, ಸರ್ಜಾಪುರ ಪೊಲೀಸ್ ಠಾಣೆಯ ಆರಕ್ಷಕ ವೃತ್ತ ನಿರೀಕ್ಷಕರಾದ ಪಿ.ಜಿ.ನವೀನ್‌ಕುಮಾರ್, ಇನ್‌ಸ್ಪೆಕ್ಟರ್ ಮಹಾಜನ್ ಮತ್ತು ಸಿಬ್ಬಂದಿ ಸ್ಥಳ ಪರಿಶೀಲಿಸಿದ್ದು, ಸರ್ಜಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜಮೀನು ಸರ್ವೇ ವಿಚಾರಕ್ಕೆ ಹಲ್ಲೆನೆಲಮಂಗಲ: ಜಮೀನು ಸರ್ವೇ ಮಾಡುವುದನ್ನು ಪ್ರಶ್ನಿಸಿದ ರೈತ ಕುಟುಂಬದ ಮೇಲೆ ಐದಾರು ಮಂದಿ ಹಲ್ಲೆ ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ. ಟಿ.ಬೇಗೂರು ಬಳಿಯ ತಿರುಮಾಲಪುರ ನಿವಾಸಿ ಚಂದ್ರಶೇಖರ್, ಪತ್ನಿ ಪಾರ್ವತಿ, ಪುತ್ರ ಮನೋಜ್ ಹಲ್ಲೆಗೊಳಗಾದವರು. ಗ್ರಾಮದ ನಿವಾಸಿಯೂ ಆದ ಕೆಎಸ್‌ಆರ್‌ಟಿಸಿ ಚಾಲಕ ಸಿದ್ದರಾಜು ಮಂಗಳವಾರ ಮಧ್ಯಾಹ್ನ ಜಮೀನು ಸರ್ವೇ ಮಾಡಿಸಲು ಮುಂದಾದಾಗ ಪಕ್ಕದ ಜಮೀನಿನ ಚಂದ್ರಶೇಖರ್ ನಮಗೆ ನೋಟಿಸ್ ನೀಡದೆ ಸರ್ವೇ ಮಾಡುವುದು ಬೇಡ. ನನ್ನ ಸಹೋದರನ ಬಳಿ ಚರ್ಚಿಸಿ ತಿಳಿಸುತ್ತೇನೆ. ಬಳಿಕ ಸರ್ವೇ ಮಾಡಿಸಿ ಎಂದಾಗ ಸಿದ್ದರಾಜು ಹಾಗೂ ಚಂದ್ರಶೇಖರ್ ನಡುವೆ ಮಾತಿನ ಚಕಮಕಿ ನಡೆದಿದ್ದು, ಚಂದ್ರಶೇಖರ್ ಮೇಲೆ ಸಿದ್ದರಾಜು ಹಲ್ಲೆ ಮಾಡಿದ್ದಾರೆ. ಆಗ ಸ್ಥಳೀಯರು ಜಗಳ ನಿಯಂತ್ರಿಸಿದ್ದಾರೆ. ಸಂಜೆ ಚಂದ್ರಶೇಖರ್ ಪತ್ನಿ ಕೆಲಸ ಮುಗಿಸಿಕೊಂಡು ಮನೆಗೆ ಬಂದಾಗ ಹಲ್ಲೆಯಾಗಿರುವುದು ತಿಳಿದು ಕುಟುಂಬದವರೆಲ್ಲ ಸಿದ್ದರಾಜು ಮನೆಗೆ ತೆರಳಿ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಮತ್ತೆ ಗಲಾಟೆ ನಡೆದು ಚಂದ್ರಶೇಖರ್ ಹಾಗೂ ಪತ್ನಿ, ಪುತ್ರನ ಮೇಲೆ ಐದಾರು ಮಂದಿ ಹಲ್ಲೆ ಮಾಡಿದ್ದಾರೆ. ಗಾಯಗೊಂಡ ಮೂವರನ್ನೂ ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದು, ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.