ಸಾವಿನಲ್ಲೂ ಒಂದಾದ ಉದ್ಯಮಿ ದಂಪತಿ

udp-16-ashwini shetty
Published on

ಉಡುಪಿ: ಅಂಬಲಪಾಡಿಯಲ್ಲಿ ಸೋಮವಾರ ನಡೆದ ಬೆಂಕಿ ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಉದ್ಯಮಿ ಪತ್ನಿ ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲದ ಆಸ್ಪತ್ರೆಯಲ್ಲಿ ಮಂಗಳವಾರ ಮೃತಪಟ್ಟಿದ್ದಾರೆ.

ಉದ್ಯಮಿ ರಮಾನಂದ ಶೆಟ್ಟಿ ಪತ್ನಿ ಅಶ್ವಿನಿ (43) ಮೃತರು. ಎಸಿ ಶಾರ್ಟ್​ ಸಕ್ಯೂರ್ಟ್​ ನಿಂದ ಇವರ ಮನೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಬೆಂಕಿಯ ಕೆನ್ನಾಲಿಗೆ ಸಿಲುಕಿದ ಪತಿ ಸ್ಥಳದಲ್ಲೇ ಮೃತಪಟ್ಟಿದ್ದರು. ಗಂಭೀರ ಗಾಯಗೊಂಡಿದ್ದ ಅಶ್ವಿನಿ ಅವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಹುಅಂಗಾಂಗ ವೈಲ್ಯದಿಂದ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಪಂದುಬೆಟ್ಟುವಿನ ಹಿರಿಯರ ಮನೆಯಲ್ಲಿ ಇಬ್ಬರ ಅಂತ್ಯಸಂಸ್ಕಾರ ನೆರವೇರಿತು.

ಸಾವಿನಲ್ಲೂ ಒಂದಾದ ದಂಪತಿ
ರಮಾನಂದ ಶೆಟ್ಟಿ ಮತ್ತು ಅಶ್ವಿನಿ 2 ದಶಕದ ಹಿಂದೆ ಮನೆಯವರ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾಗಿದ್ದು, ಇಬ್ಬರು ಮಕ್ಕಳೊಂದಿಗೆ ಸಮೃದ್ಧ ಜೀವನ ನಡೆಸುತ್ತಿದ್ದರು. ಅಶ್ವಿನಿ ಸಾಮಾಜಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದು, ತಮ್ಮದೇ ಆದ ಯುಟ್ಯೂಬ್​ ಜಾನೆಲ್​ ಮೂಲಕ ಸಾವಿರಾರು ಮಂದಿ ಅಭಿಮಾನಿಗಳನ್ನು ಹೊಂದಿದ್ದರು. ಕೆಲವು ವರ್ಷಗಳಿಂದ ರಾಜಕೀಯದಲ್ಲೂ ಸಕ್ರಿಯವಾಗಿದ್ದು, ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದ ಕಾರ್ಯದರ್ಶಿಯಾಗಿ, ಉಡುಪಿ ನಗರ ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿಯೂ ಜವಾಬ್ದಾರಿ ನಿರ್ವಹಿಸುತ್ತಿದ್ದರು.

ವಿಜಯೇಂದ್ರ ಸಂತಾಪ

ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ಅಶ್ವಿನಿ ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತೀವ್ರ ಸಂತಾಪ ಸೂಚಿಸಿದ್ದಾರೆ. ಅಶ್ವಿನಿ ಅವರು ಮಹಿಳಾ ಮೋರ್ಚಾದ ಮೂಲಕ ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದಿದ್ದಾರೆ. ಅಶ್ವಿನಿ ಆರ್​. ಶೆಟ್ಟಿ ನಿಧನಕ್ಕೆ ಉಡುಪಿ ಜಿಲ್ಲಾ ಬಿಜೆಪಿ ತೀವ್ರ ಸಂತಾಪ ವ್ಯಕ್ತಪಡಿಸಿದೆ. ಪಕ್ಷದ ಸಂಘಟನಾತ್ಮಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದ ಅಶ್ವಿನಿ ಅವರ ಅಗಲುವಿಕೆ ಪಕ್ಷ ಹಾಗೂ ಮಹಿಳಾ ಮೋರ್ಚಾ ತಂಡಕ್ಕೆ ತುಂಬಲಾರದ ನಷ್ಟವೆನಿಸಿದೆ ಎಂದು ಕಿಶೋರ್​ ಕುಮಾರ್​ ಕುಂದಾಪುರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net