

ವಿರಾಜಪೇಟೆ: ಗ್ರಾಹಕರಿಂದಾಗಿ ಸಂಘ-ಸಂಸ್ಥೆಗಳ ವ್ಯವಹಾರಗಳು ಬಲಿಷ್ಠವಾಗಲಿದ್ದು, ಹೀಗಾಗಿ ಸಿಬ್ಬಂದಿ ಗ್ರಾಹಕರ ನಡುವೆ ಉತ್ತಮ ಬಾಂಧವ್ಯ ವೃದ್ಧಿಸಬೇಕು ಎಂದು ನಿವೃತ್ತ ವಾಯು ಸೇನಾಧಿಕಾರಿ ಬಾಳೆಯಡ ಶಂಭು ಮಂದಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ವಿರಾಜಪೇಟೆ ನಗರದ ಗಾಂಧಿನಗರದ ಲಯನ್ಸ್ ಕ್ಲಬ್ ಕಟ್ಟಡದಲ್ಲಿ ಬುಧವಾರ ಶ್ರೀ ಪಾವನಿ ಸೌಹಾರ್ದ ಸಹಕಾರಿ ಸಂಘ ಉದ್ಘಾಟಿಸಿ ಮಾತನಾಡಿದರು.
ಮಂದಪ್ಪ ಅವರು ಸಹಕಾರಿ ಕ್ಷೇತ್ರವು ಗ್ರಾಹಕ, ಠೇವಣಿದಾರ ಮತ್ತು ಅಡಳಿತ ಮಂಡಳಿ, ಸಿಬ್ಬಂದಿಯನ್ನು ಅಡಕಗೊಂಡಿರುವ ಸಂಸ್ಥೆಯಾಗಿದೆ. ಕಾನೂನು ಮತ್ತು ಸಂಸ್ಥೆಯ ನಿಬಂಧನೆಗಳಿಗೆ ಅನುಗುಣವಾಗಿ ಗ್ರಾಹಕರು ಸಾಲ ಪಡೆದು ಕ್ರಮಬದ್ದವಾಗಿ ಹಿಂದಿರುಗಿಸಲು ಶಕ್ತರಾಗಿರಬೇಕು. ಸಂಸ್ಥೆಯು ಗ್ರಾಹಕರು ಮತ್ತು ಠೇವಣಿದಾರರನ್ನು ಸರಿಸಮಾನವಾಗಿ ಕಾಣುವಂತಾಗಬೇಕು. ಇದರಿಂದ ಸಂಘದ ಎಳ್ಗೆ ಸಾಧ್ಯ ಎಂದು ಮನಗಾಣಬೇಕು ಎಂದು ಹೇಳಿದರು.
ಪಟ್ಟಣ ಸಹಕಾರ ಬ್ಯಾಂಕ್‌ನ ಮಾಜಿ ಅಧ್ಯಕ್ಷ, ಉದ್ಯಮಿ ಕೋಲತಂಡ ಬೋಪಯ್ಯ ಮಾತನಾಡಿ, ಸಹಕಾರ ಸಂಘದ ಉನ್ನತಿಗಾಗಿ ಸದಸ್ಯರ ಪರಿಪೂರ್ಣ ಸಹಕಾರ ಅತ್ಯವಶ್ಯಕ. ಸಹಕಾರ ಸಂಘ ಠೇವಣಿದಾರರನನ್ನು ಗುರುತಿಸಿ ಸಂಸ್ಥೆಯಲ್ಲಿ ಠೇವಣಿಗಾಗಿ ಪ್ರೇರಿಸಬೇಕು. ಹೆಚ್ಚು ಉಳಿತಾಯ ಖಾತೆಗಳನ್ನು ತೆರೆಯಬೇಕು. ಇದರಿಂದ ಮುಂದಿನ ದಿನಗಳಲ್ಲಿ ಆರ್‌ಬಿಐನಿಂದ ಅಂಗೀಕಾರ ದೊರಕಲು ಅವಕಾಶಗಳು ದೊರಕುತ್ತದೆ. ಬಡ್ಡಿ ದರ, ಮತ್ತು ವಿವಿಧ ಸಾಲದ ಯೋಜನೆ ಹೆಚ್ಚು ಪ್ರಚಾರವಾಗಬೇಕು. ಠೇವಣಿಗಳ ಕ್ರೋಢಿಕರಣಕ್ಕೆ ಸಂಸ್ಥೆಯ ನಿರ್ದೇಶಕರು ಪರಿಶ್ರಮ ವಹಿಸಿ ಕ್ರಿಯಾಶೀಲತೆಯೊಂದಿಗೆ ಸಂಸ್ಥೆ ಮುನ್ನಡೆಸಬೇಕು ಎಂದು ಹೇಳಿದರು.
ಶ್ರೀ ಪಾವನಿ ಸೌಹಾರ್ದ ಸಹಕಾರಿ ಸಂಘ ವಿರಾಜಪೇಟೆ ಆಡಳಿತ ಮಂಡಳಿಯ ಅಧ್ಯಕ್ಷರಾದ ಪಟ್ಟಡ ರೀನಾ ಪ್ರಕಾಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉದ್ಯಮಿ ಮಲ್ಲಿಕಾರ್ಜುನಾ, ಶ್ರೀ ಪಾವನಿ ಸೌಹಾರ್ದ ಸಹಕಾರಿ ಸಂಘ ವಿರಾಜಪೇಟೆ ಉಪಧ್ಯಕ್ಷ ಎ.ಡಿ.ಗಣಪತಿ ಆಚೆಡ, ಸಿಇಒ ಪಟ್ಟಡ ಪ್ರಕಾಶ್ ಇದ್ದರು.