

ಮಂಗಳೂರು: ನಗರದ ಪಂಪ್‌ವೆಲ್ ಬಳಿಯ ಲಾಡ್ಜ್ ನ ರೂಮೊಂದರಲ್ಲಿ ಉಪ್ಪಳ ಮೂಲದ ಉದ್ಯಮಿ ಮೃತಪಟ್ಟ ಸ್ಥಿತಿಯಲ್ಲಿ ಇಂದು ಪತ್ತೆಯಾಗಿದ್ದು, ಪೊಲೀಸರು ಅಸಹಜ, ಅನುಮಾನಸ್ಪದ ಸಾವು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಮೃತ ವ್ಯಕ್ತಿಯನ್ನು ಅಬ್ದುಲ್ ಕರೀಂ ಸಿ.ಯು. (55) ಎಂದು ಗುರುತಿಸಲಾಗಿದ್ದು, ಉಪ್ಪಳ ಮೂಲದ ಈ ವ್ಯಕ್ತಿ ಮಂಗಳೂರಿನಲ್ಲಿ ಹೊಟೇಲ್ ಮತ್ತು ಇಂಟರ್‌ಲಾಕ್ ಉದ್ಯಮಿಯಾಗಿದ್ದರು ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.
ನಿನ್ನೆಯಿಂದ ಉಪ್ಪಳ ಮನೆಗೆ ಬಾರದಿದ್ದ ಹಿನ್ನೆಲೆಯಲ್ಲಿ ಕುಟುಂಬಸ್ಥರು ನಾಪತ್ತೆ ಪ್ರಕರಣ ದಾಖಲಿಸಲು ಮುಂದಾಗಿದ್ದರು ಎನ್ನಲಾಗಿದೆ. ಈ ನಡುವೆ ರೂಂನಿಂದ ಮೊಬೈಲ್ ಕರೆ ಸಾಕಷ್ಟು ಬಾರಿ ರಿಂಗಿಣಿಸುತ್ತಿದ್ದ ಕಾರಣ ರೂಂ ಬಾಯ್ ಬಾಗಿಲು ತೆರೆದು ನೋಡಿದಾಗ ವ್ಯಕ್ತಿ ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದ ಕಾರಣ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು.
‘‘ಅಸಹಜ ರೀತಿಯಲ್ಲಿ ಸಾವನ್ನಪ್ಪಿರುವ ವ್ಯಕ್ತಿಯ ರೂಂಗೆ ನಿನ್ನೆ ಮಹಿಳೆ ಮತ್ತು ಓರ್ವ ಪುರುಷ ಭೇಟಿ ನೀಡಿರುವುದು ಲಾಡ್ಜ್‌ನ ಸಿಸಿ ಕ್ಯಾಮರಾದಿಂದ ಪತ್ತೆಯಾಗಿದೆ. ಸಾವಿಗೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಕೆಲವೊಂದು ಮಾತ್ರೆಗಳು ರೂಂನಲ್ಲಿ ಕಂಡು ಬಂದಿದೆ. ಅನುಮಾನಸ್ಪದ ಹಾಗೂ ಅಸಹಜ ಸಾವು ಎಂದು ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ’’ ಎಂದು ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳ ಜತೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.