ಖಾಲಿ ಇರುವ ಶಾಲಾ ಮೈದಾನದಲ್ಲಾದ್ರೂ ಸಂತೆ ಮಾಡ್ರಿ...

18myk1
Published on

ಕೃಷ್ಣಮೂರ್ತಿ ಪಿ.ಎಚ್. ಮಾಯಕೊಂಡ

ಮಾಯಕೊಂಡ ಗ್ರಾಮದಲ್ಲಿ ಸುಮಾರು 22 ಎಕರೆ ಎಪಿಎಂಸಿ ವಿಶಾಲ ಪ್ರಾಂಗಣ ನಾಲ್ಕೈದು ದಶಕಗಳಿಂದ ಪಾಳು ಬಿದ್ದಿದ್ದರೂ ವಾರದ ಸಂತೆ ಕಿಷ್ಕಿಂಧೆಯಂತಹ ರಸ್ತೆಯ ಇಕ್ಕೆಲಗಳಲ್ಲಿ ನಡೆಯುತ್ತಿದೆ.

8 ರಿಂದ 10 ಹಳ್ಳಿಗಳ ಜನರು ಇಲ್ಲಿಗೆ ವಾರದ ಸಂತೆಗೆ ಬರುತ್ತಿದ್ದರೂ ವ್ಯವಸ್ಥಿತ ಹಾಗೂ ಸುಸಜ್ಜಿತ ಸಂತೆ ಮೈದಾನಗಳೇ ಇಲ್ಲ.

ರೈತ ಸಂಪರ್ಕ ಕೇಂದ್ರದ ಬಳಿಯ ಕಟ್ಟೆಗಳ ಮೇಲೆ ಮತ್ತು ಹೊಸದುರ್ಗ- ದಾವಣಗೆರೆ ಜಿಲ್ಲಾ ಮುಖ್ಯರಸ್ತೆ ಬದಿಯಲ್ಲಿ ವ್ಯಾಪಾರಸ್ಥರು ತರಕಾರಿ, ಹಣ್ಣು, ಸೊಪ್ಪು ಮಾರಾಟ ಮಾಡುತ್ತಾರೆ. ಇದು ಮುಖ್ಯರಸ್ತೆ ಆಗಿರುವುದರಿಂದ ಎಷ್ಟೋ ಬಾರಿ ವಾಹನಗಳು ರಸ್ತೆ ಬದಿಯ ವಸ್ತುಗಳ ಮೇಲೆ ಹರಿದು ಹೋದ ಉದಾಹರಣೆಗಳಿವೆ. ಹಾಗಾಗಿ ಸಂತೆಕಟ್ಟೆಯನ್ನು ಕಲ್ಪಿಸಿದರೆ ಒಳಿತು ಎನ್ನುತ್ತಾರೆ ವರ್ತಕರು.

ಗಾಂಧಿನಗರ ಬಡಾವಣೆ ಸಮೀಪ 40 ರಿಂದ 50 ವರ್ಷಗಳಿಂದ ಬಳಕೆಯಾಗದೆ ಪಾಳು ಬಿದ್ದ ಎಪಿಎಂಸಿ ಪ್ರಾಂಗಣದಲ್ಲಾಗಲೀ ಅಥವಾ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣಕ್ಕೆ ಮೀಸಲಿಟ್ಟ ಬಾಲಕರ ಪ್ರಾಥಮಿಕ ಹಳೆ ಶಾಲಾ ಮೈದಾನದಲ್ಲಾಗಲಿ ತಾತ್ಕಾಲಿಕವಾಗಿ ಸಂತೆ ಮಾಡಿದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ.

ಕ್ರಮ ಕೈಗೊಳ್ಳದ ಗ್ರಾಪಂ: ವಾರದ ಸಂತೆಗೆ ಪರ್ಯಾಯ, ಸುಸಜ್ಜಿತ ಹಾಗೂ ಕಾಯಂ ಸ್ಥಳವನ್ನು ನಿಗದಿಪಡಿಸದೇ ಗ್ರಾಪಂ ನಿರ್ಲಕ್ಷ್ಯ ತೋರುತ್ತಿದೆ. ಅಲ್ಲದೆ ಸಂತೆ ನಡೆಯುವ ರಸ್ತೆಯಲ್ಲಿ ಜನದಟ್ಟಣೆ ಹೆಚ್ಚಾಗಿದ್ದು ಅಪಘಾತವಾಗುವ ಸಂಭವವಿದೆ. ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

ಎಪಿಎಂಸಿ ಮಾರುಕಟ್ಟೆಯ ಪ್ರಾಂಗಣದಲ್ಲಿ 5 ವರ್ಷಗಳ ಹಿಂದೆ ಎರಡು ವಾರ ಸಂತೆ ಮಾಡಿಸಿದ್ದೆವು. ಆದರೆ ಈ ಸ್ಥಳ ಹೊರವಲಯದಲ್ಲಿರುವುದರಿಂದ ಜನರು ಬರುತ್ತಿರಲಿಲ್ಲ. ಹಾಗಾಗಿ ಗ್ರಾಪಂ ಹಾಗೂ ಕೆಎಸ್​ಆರ್​ಟಿಸಿ ಅಧಿಕಾರಿಗಳೊಂದಿಗೆ ರ್ಚಚಿಸಿ ತಾತ್ಕಾಲಿಕವಾಗಿ ಬಾಲಕರ ಹಳೆಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಸಂತೆ ನಡೆಸಲು ಮನವಿ ಮಾಡಲಾಗುವುದು. | ರಾಜಶೇಖರ್ ಸಂಡೂರು, ಮಾಜಿ ಅಧ್ಯಕ್ಷ, ಕನ್ನಡ ಯುವಶಕ್ತಿ ಕೇಂದ್ರ ಮಾಯಕೊಂಡ. ವಾರದ ಸಂತೆಯನ್ನು ಬಾಲಕರ ಪ್ರಾಥಮಿಕ ಹಳೆ ಶಾಲೆಯ ಮೈದಾನಕ್ಕೆ ಸ್ಥಳಾಂತರಿಸಿದರೆ ಅಡಚಣೆಯಿಲ್ಲದೆ ಸಂತೆ ಮಾಡಲು ಹಾಗೂ ಬೇರೆ ಊರಿಂದ ಬಂದು ಹೋಗುವವರಿಗೆ ಅನುಕೂಲವಾಗುತ್ತದೆ. | ರೇಖಾವತಿ, ಗೃಹಿಣಿ, ಹುಚ್ಚವ್ವನಹಳ್ಳಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net