

ಹುಬ್ಬಳ್ಳಿ: ವ್ಯಾಪಾರ-ವಹಿವಾಟುಗಳಲ್ಲಿ ಗಟ್ಟಿ ನಿಲುವು ತಾಳಬೇಕು. ಅದರಲ್ಲೂ ಮನಸ್ಥಿತಿ ಬದಲಾಗದ ಹೊರತು ವ್ಯಾಪಾರ ವೃದ್ಧಿಯಾಗದು ಎಂದು ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅಭಿಪ್ರಾಯಪಟ್ಟರು.
ನಗರದ ಬಿವಿಬಿ ಕಾಲೇಜ್ನ ಬಯೋಟೆಕ್ ಸೆಮಿನಾರ್ ಹಾಲ್ನಲ್ಲಿ ಸೋಮವಾರ ಉತ್ತರ ಕರ್ನಾಟಕದ ವೀರಶೈವ ಲಿಂಗಾಯತ ವಾಣಿಜ್ಯ ಮತ್ತು ಉದ್ಯಮಿಗಳ (ಎನ್ಕೆವಿಎಲ್ಐಸಿ) ಸಮಾರಂಭ ಹಾಗೂ ಬಿಜಿನೆಸ್ ಆಪ್ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಮ್ಮ ಸಮಾಜ ದೊಡ್ಡದು. ಸಿದ್ಧಗಂಗಾ ಮಠದ ಶ್ರೀಗಳು ಉಲ್ಲೇಖಿಸಿದಂತೆ ವೀರಶೈವ ಲಿಂಗಾಯತ ಹಿಂದು ಧರ್ಮದ ಒಂದು ಭಾಗ. ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿ ಆಗಿದ್ದಾಗ ವೀರಶೈವ ಲಿಂಗಾಯತ ಸಮಾಜದವರಿಂದ ನಾನು ಮುಖ್ಯಮಂತ್ರಿ ಆದೆ ಎಂದು ಹೇಳಿದ್ದರು. ಇಷ್ಟೊಂದು ತಾಕತ್ತು ಇರುವ ಸಮಾಜ ನಮ್ಮದು. ನಮ್ಮದೇ ಸಮಾಜದ ವೀರೇಂದ್ರ ಪಾಟೀಲ, ಬಿ.ಎಸ್. ಯಡಿಯೂರಪ್ಪ ಅವರಿಗೆ ಅನ್ಯಾಯವಾಯಿತು. ಬೇರೆ ಸಮಾಜದವರನ್ನು ಇದರಲ್ಲಿ ಹೀಗಳೆಯುವುದಿಲ್ಲ. ಆದರೆ, ಸಮಾಜದವರು ಉನ್ನತ ಸ್ಥಾನಕ್ಕೇರಲು ನಾವೆಲ್ಲರೂ ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.
ವ್ಯಾಪಾರ ಮತ್ತು ಒಕ್ಕಲುತನದಲ್ಲಿ ನಾವು ಕಿಂಗ್. ನಾನು ಉದ್ಯಮ ಆರಂಭಿಸಿದಾಗ ನಮ್ಮವರೇ ನಮಗೆ ಸಹಾಯ ಮಾಡಲಿಲ್ಲ. ಆದರೂ ಬೆಳೆದೆ. ಕಾಶ್ಮೀರದಲ್ಲೂ ವಿಆರ್ಎಲ್ ಕಚೇರಿ ಆರಂಭಿಸಿದೆ. ವ್ಯಾಪಾರದಲ್ಲಿ ನಾನು ಬಂದರೆ ಕೆಲವರಲ್ಲಿ ನಡುಕು ಹುಟ್ಟುತ್ತಿತ್ತು. ನೀವು ಬೆಳೆದರೂ ಹಾಗೆಯೇ ಬೆಳೆಯಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮುಂದೆ ನಾವು ಮೀಸಲಾತಿಗಾಗಿ ಭಿಕ್ಷೆ ಬೇಡಬಾರದು. ನಮ್ಮ ಕಾಲ ಮೇಲೆ ನಾವು ನಿಲ್ಲಬೇಕು. ಇದಕ್ಕಾಗಿಯೇ ನಿಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕೆಸಿಸಿಐ ಮಾಜಿ ಅಧ್ಯಕ್ಷ ಶಂಕರಣ್ಣ ಮುನವಳ್ಳಿ ಮಾತನಾಡಿ, ನಾವೆಲ್ಲರೂ ಹೇಳಿದ ಹಾಗೆಯೇ ನಡೆದುಕೊಳ್ಳಬೇಕು. ನಮ್ಮದೇ ಶಿಕ್ಷಣ ಸಂಸ್ಥೆಯಲ್ಲಿ ಅನೇಕ ಸಮಾಜದ ವಿದ್ಯಾರ್ಥಿಗಳೂ ಇದ್ದಾರೆ. ನಾವು ಬೆಳೆಯುವುದರ ಜತೆಗೆ ಇನ್ನೊಬ್ಬರೂ ಬೆಳೆಯಬೇಕೆನ್ನುವವರು ನಾವು. ಹಾಗಾಗಿ ನಾವು ಉದ್ಯಮ ಸ್ಥಾಪಿಸಿ, ಇತರರಿಗೂ ಮಾದರಿಯಾಗಿ ನಿಲ್ಲಬೇಕು ಎಂದರು.
ಅಶೋಕ ಆಯರ್ನ್ ಗ್ರೂಪ್ ಜಂಟಿ ವ್ಯವಸ್ಥಾಪಕ ನಿರ್ದೇಶಕ ಜಯಂತ ಹುಂಬರವಾಡಿ ಮಾತನಾಡಿ, ಬಸವಣ್ಣನವರ ತತ್ವದಂತೆ ‘ಕಾಯಕವೇ ಕೈಲಾಸ’ ಎಂಬುದನ್ನು ಅನುಸರಿಸಬೇಕು. ಇದರಿಂದ ನಿಮ್ಮ ಉದ್ಯಮ ರಂಗ ಯಶಸ್ಸು ಕಾಣಲಿದೆ. ಹಾರ್ಡ್ವರ್ಕ್ ಜತೆಗೆ ಸ್ಮಾರ್ಟ್ ವರ್ಕ್ ಇರಬೇಕು. ಮುಂದಿನ ದಿನಗಳಲ್ಲಿ ಭಾರತದಲ್ಲಿ ಯುವಕರ ಪಡೆಯದ್ದೇ ಮೇಲುಗೈ. ಹೀಗಾಗಿ, ಉದ್ಯಮರಂಗದಲ್ಲಿ ನಾವು ಇನ್ನಷ್ಟು ವಿಸ್ತಾರ ಕಾಣಬೇಕು ಎಂದು ಹೇಳಿದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಬೇರೆ ಸಮಾಜದವರಲ್ಲೂ ಒಗ್ಗಟ್ಟು ಇದೆ. ಆರ್ಥಿಕವಾಗಿ ಹಿಂದುಳಿದವರ ಏಳ್ಗೆಗೆ ಅವರು ಶ್ರಮಿಸುತ್ತಿದ್ದಾರೆ. ನಾವೂ ಕೂಡ ಇದೇ ಮಾರ್ಗವನ್ನು ಅನುಸರಿಸಬೇಕು. ಐಎಎಸ್, ಕೆಎಎಸ್ ಅಧಿಕಾರಿಗಳನ್ನು ನಮ್ಮ ಸಮಾಜದಿಂದ ಬೆಳೆಸಬೇಕು ಎಂದು ಸಲಹೆ ನೀಡಿದರು.
ಮಾಜಿ ಎಂಎಲ್ಸಿ ಮೋಹನ ಲಿಂಬಿಕಾಯಿ, ಜೆಡಿಎಸ್ ಮಹಾನಗರ ಜಿಲ್ಲಾಧ್ಯಕ್ಷ ಗುರುರಾಜ ಹುಣಸೀಮರದ, ಉದ್ಯಮಿಗಳಾದ ಸಂತೋಷ ಕೆಂಚಾಂಬ, ಉಮೇಶ ಪಾಟೀಲ ಮಾತನಾಡಿದರು.
ಎನ್ಕೆವಿಎಲ್ಐಸಿ ಸಂಸ್ಥಾಪಕ ಅಧ್ಯಕ್ಷ ರಮೇಶ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷ ನಾಗರಾಜ ಎಲಿಗಾರ, ಕಾರ್ಯದರ್ಶಿ ಜಿ.ಜಿ. ದ್ಯಾವನಗೌಡ್ರ, ಉದ್ಯಮಿಗಳಾದ ಎಸ್.ಪಿ. ಸಂಶಿಮಠ, ಗಿರೀಶ ನಲವಡಿ, ವಿಜಯಕುಮಾರ ಪಾಟೀಲ, ಇತರರು ಇದ್ದರು.