

ವಿಜಯವಾಣಿ ಸುದ್ದಿಜಾಲ ಧಾರವಾಡ
ಉದ್ಯಮದ ಮೂಲಕ ದೇಶ ಕಟ್ಟುವ ಕಾಯಕಕ್ಕೆ ಯುವಕರಲ್ಲಿ ಉದ್ಯಮದ ಬಗ್ಗೆ ಆಸಕ್ತಿ ಹುಟ್ಟಿಸಲು ಮುಂಬೈನಿಂದ ಪ್ರಾರಂಭವಾದ ಉದ್ಯಮ ಜಾಗೃತಿ ಯಾತ್ರೆಯು ತಾಲೂಕಿನ ಕಲಕೇರಿ ಗ್ರಾಮದ ಸಂಗೀತ ಶಾಲೆಗೆ ಸೋಮವಾರ ಭೇಟಿ ನೀಡಿತು.
ಪ್ರತಿ ವರ್ಷ ನಡೆಯುವ ಜಾಗೃತಿ ಯಾತ್ರೆಯಲ್ಲಿ ಸುಮಾರು 50ರಷ್ಟು ಹೊಸ ಉದ್ಯಮಿಗಳು ಹೊರ ಹೊಮ್ಮುತ್ತಿದ್ದು, ಈಗಾಗಲೇ 500ಕ್ಕೂ ಹೆಚ್ಚು ನವೋದ್ಯಮಿಗಳನ್ನು ನಿರ್ಮಾಣ ಮಾಡಿದೆ. ಅನೇಕರು ದೇಶ ನಿರ್ಮಾಣ ಚಟುವಟಿಕೆಗಳ ನೇರ ಉದ್ಯಮದಲ್ಲಿ ತೊಡಗಿದ್ದಾರೆ. ನ.16ರಿಂದ ಮುಂಬೈನಿಂದ ಆರಂಭವಾದ ಯಾತ್ರೆಯು ದೇಶದ ಹಲವು ಪ್ರದೇಶಗಳಲ್ಲಿ ಸಂಚರಿಸಿ ನವೆಂಬರ್ ಅಂತ್ಯಕ್ಕೆ ಸಂಪನ್ನವಾಲಿದೆ.
ಈ ಬಾರಿ ಯಾತ್ರೆಯಲ್ಲಿ ಆಗಮಿಸಿದ್ದ 550 ಯುವಕರ ಪಡೆ ಕಲಕೇರಿ ಸಂಗೀತ ಶಾಲೆಯ ಸಂಪೂರ್ಣ ಮಾಹಿತಿ ಪಡೆಯುವುದರ ಜತೆಗೆ ಮಕ್ಕಳ ಹಾಡು, ತಬಲಾ, ವಯೋಲಿನ್ ನಿನಾದ ಆಲಿಕೆ, ನೃತ್ಯ ವೀಕ್ಷಿಸಿ ಖುಷಿ ಪಟ್ಟರು. ಶಾಲೆಯ ಚಟುವಟಿಕೆಗಳ ಅಧ್ಯಯನ ನಡೆಸಿ, ಮಕ್ಕಳಿಗೆ ನೀಡುವ ಉಚಿತ ಸಂಗೀತ, ಪಾಠಾಭ್ಯಾಸದ ಮಾಹಿತಿ ಸಹ ಪಡೆದರು. ನಂತರ ಆಹ್ಲಾದಕರ ವಾತಾವರಣದಲ್ಲಿ ಉದ್ಯಮದಲ್ಲಿನ ಅಭಿವೃದ್ಧಿ ವಿಷಯಗಳ ಕುರಿತು ಸಂವಾದ, ಸಮಾಲೋಚನೆ ನಡೆಸಿದರು.
ಏನಿದು ಜಾಗೃತಿ ಯಾತ್ರೆ?: ಮುಂಬೈನಲ್ಲಿ 2008ರಲ್ಲಿ ಯಾವುದೇ ಲಾಭದ ಉದ್ದೇಶವಿಲ್ಲದೆ ಸಮಾನ ಮನಸ್ಕರಿಂದ ಜಾಗೃತಿ ಯಾತ್ರೆ ಆರಂಭವಾಗಿದೆ. ಇದೊಂದು ರೈಲು ಪ್ರಯಾಣವಾಗಿದ್ದು, 15 ದಿನಗಳಲ್ಲಿ ಸುಮಾರು 8,000 ಕಿ.ಮೀ. ದೂರ 12 ನಗರಗಳ ಮೂಲಕ ಹಾದು ಹೋಗುತ್ತದೆ. ನ. 16 ರಿಂದ ಮುಂಬೈನಿಂದ ಆರಂಭವಾದ ಯಾತ್ರೆ ದೇಶದ ದೊಡ್ಡ ದೊಡ್ಡ ನಗರಗಳಲ್ಲಿ ನಡೆಯುತ್ತಿರುವ ಬೆಳವಣಿಗೆ ಕುರಿತು ಮಾಹಿತಿ ಪಡೆದು ತಮ್ಮ ಕನಸು ನನಸು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಡಿ. 1ರವರೆಗೆ 12 ನಗರಗಳನ್ನು ತಲುಪಲಿದೆ.