ತಿಪಟೂರು ಸರ್ಕಾರಿ ಪಿಯು ಕಾಲೇಜಲ್ಲಿ ಅವ್ಯವಹಾರ ; ಎಸಿಬಿಯಲ್ಲಿ ಎಫ್‌ಐಆರ್ ದಾಖಲು; ಪ್ರಾಚಾರ್ಯ, ಎಫ್‌ಡಿಎ ಆರೋಪಿಗಳು

TIPTUR_PUC
Published on

ತುಮಕೂರು: 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ರಾಜ್ಯದ 2ನೇ ಅತೀ ದೊಡ್ಡ ಸರ್ಕಾರಿ ಪದವಿ ಪೂರ್ವ ಕಾಲೇಜು ಎಂಬ ಹೆಗ್ಗಳಿಕೆ ಹೊಂದಿರುವ ತಿಪಟೂರು ಸರ್ಕಾರಿ ಕಾಲೇಜು ಕೆಟ್ಟ ಕಾರಣಕ್ಕೆ ಸುದ್ದಿಯಾಗಿದೆ. ವಿದ್ಯಾರ್ಥಿಗಳಲ್ಲಿ ಶಿಸ್ತು ಮೂಡಿಸಲು ಹೆಸರಾಗಿರುವ, ನಿವೃತ್ತಿಯ ಅಂಚಿನಲ್ಲಿರುವ ಪ್ರಾಚಾರ್ಯ ಅಲ್ಲಮಪ್ರಭು ಹಾಗೂ ಪ್ರಥಮ ದರ್ಜೆ ಸಹಾಯಕ ಸುನೀಲ್‌ಕೂರ್ಗಿ ವಿರುದ್ಧ ಲಕ್ಷಾಂತರ ರೂ. ದುರುಪಯೋಗದ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಎಸಿಬಿಯಲ್ಲಿ ಬುಧವಾರ ಎಫ್‌ಐಆರ್ ದಾಖಲಾಗಿದೆ.

ಕಾಲೇಜು ಅಭಿವೃದ್ಧಿ ನಿಧಿಯ ಹೆಸರಿನಲ್ಲಿ ಅಕ್ರಮವಾಗಿ ವಿದ್ಯಾರ್ಥಿಗಳಿಂದ ಲಕ್ಷಾಂತರ ರೂ. ವಸೂಲಿ ಮಾಡಿರುವ ಆರೋಪದ ಜತೆಗೆ ಈ ಹಣವನ್ನು ಅತಿಥಿ ಉಪನ್ಯಾಸಕರ ವೇತನ ನೀಡುವ ನೆಪದಲ್ಲಿ ಲೂಟಿ ಮಾಡಲಾಗಿದೆ ಎಂದು ನ್ಯೂ ಜೈಭಾರತ್ ಸಂಘಟನೆಯ ಸಮಿಉಲ್ಲಾ ದಾಖಲೆಯ ಸಮೇತ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಪಿಯು ಇಲಾಖೆ ಅನುಮತಿ ಪಡೆದು ಎಫ್‌ಐಆರ್ ದಾಖಲಿಸಲಾಗಿದೆ. 2018ರಿಂದ 20ರವರೆಗೆ ಪಿಯು ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಿಗೆ ಗೌರವಧನ ನೀಡಲು ಮಂಜೂರು ಮಾಡಿರುವ ಅನುದಾನವನ್ನು ಪ್ರಾಚಾರ್ಯ ಹಾಗೂ ಎಫ್‌ಡಿಎ ತಮ್ಮ ಕುಟುಂಬ ಸದಸ್ಯರು ಹಾಗೂ ಅನರ್ಹ ವ್ಯಕ್ತಿಗಳ ಹೆಸರಿನಲ್ಲಿ ಬಿಲ್ ಮಾಡಿಕೊಂಡು 40ಲಕ್ಷಕ್ಕೂ ಹೆಚ್ಚು ಹಣವನ್ನು ವಂಚಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ದೂರಿನ ಹಿನ್ನೆಲೆಯಲ್ಲಿ ವಿಚಾರಣೆಗಾಗಿ ಎಸಿಬಿ ಪೊಲೀಸರು ಡಿ.17ರಂದು ಕಾಲೇಜಿಗೆ ಭೇಟಿ ನೀಡಿದಾಗ ಆರೋಪಿಗಳಾದ ಪ್ರಾಚಾರ್ಯ ಅಲ್ಲಮಪ್ರಭು ಹಾಗೂ ಎಫ್‌ಡಿಎ ಸುನೀಲ್ ಕೂರ್ಗಿ ಗೈರಾಗಿದ್ದರು ಎನ್ನಲಾಗಿದೆ.

ಪ್ರಾಚಾರ್ಯರ ಮೇಲೆ ಏನಿದು ಆರೋಪ?: ಆರೋಪ 1: ಪಿಯು ಶಿಕ್ಷಣ ಇಲಾಖೆ ಇತ್ತೀಚಿನ ಸುತ್ತೋಲೆ ಹಾಗೂ ಮಾರ್ಗಸೂಚಿಯಲ್ಲಿ ಸರ್ಕಾರಿ ಕಾಲೇಜುಗಳು ಸರ್ಕಾರಿ ಶುಲ್ಕ ಹೊರತುಪಡಿಸಿ ಕಾಲೇಜು ಅಭಿವೃದ್ಧಿ ಹೆಸರಿನಲ್ಲಿ ಹೆಚ್ಚುವರಿ ಶುಲ್ಕ ವಸೂಲಿಗೆ ಅವಕಾಶವಿಲ್ಲ. ಆದರೆ, ತಿಪಟೂರು ಕಾಲೇಜಿನಲ್ಲಿ ಪ್ರತಿ ವರ್ಷ 2 ಸಾವಿರ ವಿದ್ಯಾರ್ಥಿಗಳಿಂದ ತಲಾ ರೂ. 2000ಕ್ಕೂ ಹೆಚ್ಚು ಶುಲ್ಕ ವಸೂಲಾಗಿದ್ದು ವಿವಿಧ ನೆಪ ಹೇಳಿಕೊಂಡು ಖುರ್ಚು ಕೂಡ ಮಾಡಲಾಗಿದೆ.

ಆರೋಪ 2: ಕಾಲೇಜಿನಲ್ಲಿ ಖಾಲಿ ಇರುವ ಮೂರು ಉಪನ್ಯಾಸಕ ಹುದ್ದೆಗೆ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಂಡಿದ್ದು ಇವರಿಗೆ ಆಯಾ ತಿಂಗಳು ಕಾಲೇಜು ಅಭಿವೃದ್ಧಿ ಸಮಿತಿಯ ಚೆಕ್ ಮೂಲಕ ವೇತನ ನೀಡಲಾಗಿದೆ ಆದರೆ, ಇದೇ ಉಪನ್ಯಾಸಕರಿಗೆ ಪಿಯು ಶಿಕ್ಷಣ ಇಲಾಖೆ ಕೂಡ 2018-19ನೇ ಸಾಲಿನಲ್ಲಿ 81 ಸಾವಿರ, 1.26ಲಕ್ಷ ರೂ., 3.01ಲಕ್ಷ ರೂ., ಹಾಗೂ 2019-20ನೇ ಸಾಲಿನಲ್ಲಿ 40500ರೂ. ಬಿಡುಗಡೆ ಮಾಡಿದ್ದು ಹಣ ದುರುಪಯೋಗ ಸ್ಪಷ್ಟವಾಗಿದೆ.

ಆರೋಪ 3: ಪ್ರಾಚಾರ್ಯ ಅಲ್ಲಮಪ್ರಭು ಮತ್ತು ಎಫ್‌ಡಿಎ ಸುನಿಲ್ ಕೂರ್ಗಿ ಸೇರಿಕೊಂಡು ಸರ್ಕಾರದಿಂದ ಬಂದ ಹಣವನ್ನು ಭೈರೇಶ್(ಪ್ರಾಚಾರ್ಯ ಬಾಮೈದ), ಜಿ.ಎಸ್.ಪ್ರಿಯಾಂಕ(ಸುನೀಲ್ ಪತ್ನಿ), ಟಿ.ಎಂ.ರಶ್ಮಿ(ಸುನೀಲ್ ಸಹೋದರಿ), ಬಿ.ಎನ್.ಚೇತನ್(ಡಿ ಗ್ರೂಪ್ ನೌಕರ), ಪಿ.ಇ.ಶರತ್(ಸಿಡಿಸಿ ನೇಮಿಸಿರುವ ಡಾಟ ಎಂಟ್ರಿ ಆಪರೇಟರ್) ಮತ್ತು ಸಿ.ಸಿ.ಭಾರತಿ(ಸಿಡಿಸಿ ನೇಮಿಸಿರುವ ಅತಿಥಿ ಉಪನ್ಯಾಸಕಿ) ಖಾತೆಗೆ ತಿಪಟೂರು ತಾಲೂಕು ಖಜಾನೆ ಕೆ2 ಮೂಲಕ ಪಾವತಿಯಾಗಿದೆ. ನಗದು ರೂಪದಲ್ಲಿಯೂ ಲಕ್ಷಾಂತರ ರೂ. ವ್ಯವಹಾರ ನಡೆಸಲಾಗಿದ್ದು 40 ಲಕ್ಷಕ್ಕೂ ಹೆಚ್ಚು ಹಣ ದುರುಪಯೋಗವಾಗಿದೆ ಎನ್ನಲಾಗಿದೆ.

ಬಡ ಮಕ್ಕಳೇ ಓದುವ ಸರ್ಕಾರಿ ಕಾಲೇಜಿನಲ್ಲಿಯೂ ಹಣ ತಿನ್ನುವ ಹೆಗ್ಗಣಗಳಿವೆ ಎಂಬುದನ್ನು ದಾಖಲೆಗಳ ಸಮೇತ ಬಯಲು ಮಾಡಲಾಗಿದೆ, ಸರ್ಕಾರದಿಂದ ಸಾಕಷ್ಟು ವೇತನ ಬಂದರೂ ಬಡಮಕ್ಕಳ ಲಕ್ಷಾಂತರ ರೂ. ಹಣ ನುಂಗಿರುವ ತಪ್ಪಿತಸ್ಥರಿಗೆ ಶಿಕ್ಷೆಯಾಗಲೇ ಬೇಕು ಎಂಬ ಹಿನ್ನೆಲೆಯಲ್ಲಿ ಎಸಿಬಿಗೆ ದೂರು ನೀಡಿದ್ದು, ಹೋರಾಟ ಮುಂದುವರಿಯಲಿದೆ. ಸಮೀಉಲ್ಲಾ ನ್ಯೂ ಜೈಭಾರತ್ ಸಂಘಟನೆ ಕಾಲೇಜಿನ ಅವ್ಯವಹಾರದ ಬಗ್ಗೆ ಸಮೀಉಲ್ಲಾ ಎಂಬುವವರು ನೀಡಿರುವ ದೂರಿನ ಹಿನ್ನೆಲೆಯಲ್ಲಿ ಪ್ರಾಚಾರ್ಯ ಅಲ್ಲಮಪ್ರಭು ಎಂಬುವವರ ಮೇಲೆ ಡಿ.16ರಂದು ಪ್ರಕರಣ ದಾಖಲಾಗಿದ್ದು, ವಿಚಾರಣೆ ಆರಂಭಿಸಲಾಗಿದೆ. ಗುರುವಾರ ಕಾಲೇಜಿಗೂ ಭೇಟಿ ನೀಡಿ ಮಾಹಿತಿ ಪಡೆಯಲಾಗಿದೆ. ವಿ.ಪ್ರವೀಣ್‌ಕುಮಾರ್ ಪಿಐ, ಎಸಿಬಿ ತುಮಕೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net