

ಶಿವಮೊಗ್ಗ: ಸ್ಮಾರ್ಟ್‌ಸಿಟಿ ಶಿವಮೊಗ್ಗದಲ್ಲಿ ನಿತ್ಯವೂ ಸಾವಿರಾರು ವಾಹನಗಳ ಸಂಚಾರವಿದ್ದು ಲಕ್ಷಾಂತರ ಜನರು ಬಂದು ಹೋಗುತ್ತಾರೆ. ಹಾಗಾಗಿ ಸುಗಮ ಸಂಚಾರಕ್ಕಾಗಿ ಜಿಲ್ಲಾಡಳಿತ ಮಹಾನಗರ ಪಾಲಿಕೆ ವ್ಯಾಪ್ತಿಯ 117 ಕಡೆ ನಿಲ್ದಾಣಗಳನ್ನು ಗುರುತಿಸಿ ಸಾರಿಗೆ ಬಸ್‌ಗಳ ನಿಲುಗಡೆಗೆ ಆದೇಶಿಸಿತ್ತು. ಆದರೆ ಆದೇಶ ಹೊರಬಿದ್ದು ಎಂಟು ತಿಂಗಳಾದರೂ ಪಾಲನೆ ಆಗುತ್ತಿಲ್ಲ. ಮಾರ್ಗಮಧ್ಯೆ, ಪ್ರಮುಖ ವೃತ್ತ ಅಥವಾ ರಸ್ತೆಗಳಲ್ಲೇ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದು ಮುಂದುವರಿದಿದ್ದು ಆದೇಶಕ್ಕೆ ಕಿಮ್ಮತ್ತೇ ಇಲ್ಲದಂತಾಗಿದೆ.
ಸಾರ್ವಜನಿಕರ ಹಿತದೃಷ್ಟಿಯಿಂದ ಶಿವಮೊಗ್ಗ ಸ್ಮಾರ್ಟ್‌ಸಿಟಿ ಯೋಜನೆಯಡಿ ನಗರದ ನೂರಕ್ಕೂ ಅಧಿಕ ಕಡೆ ಸುಗಮ ಸಂಚಾರಕ್ಕೆ ಅನುವು ಮಾಡುವ ಮೂಲಕ ಸಂಚಾರ ದಟ್ಟಣೆಗೆ ತಗ್ಗಿಸಲು ಜಿಲ್ಲಾಡಳಿತ ಮುಂದಾಗಿತ್ತು. ಅದಕ್ಕಾಗಿ ಸ್ಮಾರ್ಟ್‌ಸಿಟಿ ಮತ್ತು ಪೊಲೀಸ್ ಇಲಾಖೆ ಸಹಯೋಗದಲ್ಲಿ ಬಸ್ ನಿಲ್ದಾಣ ಗುರುತಿಸಿತ್ತು. ನಿಗದಿತ ಜಾಗದಲ್ಲೇ ಬಸ್‌ಗಳ ನಿಲುಗಡೆಗೆ ಸೂಚಿಸಿತ್ತು. ಆದರೆ ನಿಯಮ ಇದುವರೆಗೂ ಕಾರ್ಯಗತಗೊಂಡಿಲ್ಲ.
ಶಿವಮೊಗ್ಗ ಪೂರ್ವ ಮತ್ತು ಪಶ್ಚಿಮ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಪ್ರತಿದಿನ 61 ನಗರ ಸಾರಿಗೆ ಬಸ್‌ಗಳು ಸಂಚರಿಸುತ್ತಿವೆ. ವಿವಿಧ ಜಿಲ್ಲೆ ಮತ್ತು ತಾಲೂಕು ಕೇಂದ್ರಗಳು ಹಾಗೂ ಗ್ರಾಮಾಂತರ ಭಾಗಗಳಿಂದ 600ಕ್ಕೂ ಅಧಿಕ ಬಸ್‌ಗಳು ಖಾಸಗಿ ಬಸ್ ನಿಲ್ದಾಣಕ್ಕೆ ಬಂದು ಹೋಗುತ್ತಿವೆ. ಚಾಲಕರು ಜಿಲ್ಲಾಡಳಿತ ಅಧಿಕೃತವಾಗಿ ಹೊರಡಿಸಿದ ನಿಲ್ದಾಣಗಳನ್ನು ಬಿಟ್ಟು ಪ್ರಯಾಣಿಕರು ಕೈ ತೋರಿಸಿದ ಕಡೆಗಳಲ್ಲಿ ರಸ್ತೆ ಮಧ್ಯೆ ನಿಲ್ಲಿಸಿ ಹತ್ತಿಸಿಕೊಳ್ಳುತ್ತಿದ್ದು, ಹಿಂದೆ ಬರುವ ವಾಹನಗಳಿಗೆ ಸಮಸ್ಯೆಯಾಗುತ್ತಿದೆ. ಸಾರ್ವಜನಿಕರಿಗೂ ಕಿರಿಕಿರಿ ಉಂಟಾಗುತ್ತಿದೆ. ಈ ಬಗ್ಗೆ ಸಂಚಾರ ಠಾಣೆಗಳು ಮತ್ತು ಜಿಲ್ಲಾ ಕಂಟ್ರೋಲ್ ರೂಂಗೂ ದೂರು ಬಂದಿದ್ದು, ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮಹತ್ವದ ಆದೇಶ ಹೊರಡಿಸಿತ್ತು. ಆದರೆ ಖಾಸಗಿ ಮತ್ತು ನಗರ ಸಾರಿಗೆ ಬಸ್‌ಗಳ ಚಾಲಕರು ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ ಎಂಬುದು ವಿಪರ್ಯಾಸ.
ಚಾಲಕರಿಗೆ ಮುಟ್ಟದ ದಂಡದ ಬಿಸಿ
ಸಂಚಾರ ವ್ಯವಸ್ಥೆ ಸುಗಮಗೊಳಿಸುವ ನಿಟ್ಟಿನಲ್ಲಿ ಸಾರಿಗೆ ಬಸ್‌ಗಳ ನಿಲುಗಡೆಗೆ ಗುರುತಿಸಿದ ನಿಲ್ದಾಣ ಹೊರತುಪಡಿಸಿ ಪ್ರಯಾಣಿಕರು ಕಂಡಲ್ಲಿ ನಿಲ್ಲಿಸಿದರೆ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಲಾಗಿತ್ತು. ಆದರೆ ಎಂಟು ತಿಂಗಳಲ್ಲಿ ಬೆರಳೆಣಿಕೆಯಷ್ಟು ಕೇಸ್‌ಗಳನ್ನು ದಾಖಲಿಸಿ ದಂಡ ವಿಧಿಸಲಾಗಿದೆ. ಅಣತಿ ದೂರದಲ್ಲೇ ನಿಲ್ದಾಣಗಳಿದ್ದರೂ ಪ್ರಯಾಣಿಕರು ಮಾರ್ಗಮಧ್ಯೆಯೇ ನಿಲ್ಲಿಸಿ ಬಸ್ ಹತ್ತುವುದು ಕಡಿಮೆ ಆಗುತ್ತಿಲ್ಲ. ರಾಜ್ಯ ಸರ್ಕಾರದ ಶಕ್ತಿ ಯೋಜನೆ ಪರಿಣಾಮವಾಗಿ ಕೆಲವರು ದಂಡಕ್ಕೂ ಅಂಜಿಕೊಳ್ಳುತ್ತಿಲ್ಲ.
ಎಲ್ಲೆಲ್ಲಿ ನಿಲ್ದಾಣ ಗುರುತಿಸಲಾಗಿದೆ?
ಶಿವಮೊಗ್ಗದ ಬಿ.ಎಚ್.ರಸ್ತೆ, ಹೊಳೆಹೊನ್ನೂರು ರಸ್ತೆ, ಎನ್.ಆರ್.ಪುರ ರಸ್ತೆ, ಬಾಲರಾಜ್ ಅರಸ್ ರಸ್ತೆ, ಹೊನ್ನಾಳಿ ರಸ್ತೆ, ಸವಳಂಗ ರಸ್ತೆ, ವಿನೋಬನಗರ 100 ಅಡಿ ರಸ್ತೆ, ಮಿಳ್ಳಘಟ್ಟ ಕ್ರಾಸ್‌ನಿಂದ ಗೋಪಾಲಗೌಡ ಬಡಾವಣೆ, ಗೋಪಾಲಗೌಡ 100 ಅಡಿ ರಸ್ತೆ, ವಿಜಯನಗರ ಮುಖ್ಯ ರಸ್ತೆ, ತುಂಗಾನಗರ 100 ಅಡಿ ಮುಖ್ಯ ರಸ್ತೆ, ಸಾಗರ ರಸ್ತೆ, ಸೋಮಿನಕೊಪ್ಪ ರಸ್ತೆ, ಜೈಲ್ ರಸ್ತೆ, ಬೊಮ್ಮನಕಟ್ಟೆ ರಸ್ತೆ, ಎನ್.ಟಿ.ರಸ್ತೆ, ಬೈಪಾಸ್ ರಸ್ತೆಯಲ್ಲಿ ಸ್ಮಾರ್ಟ್‌ಸಿಟಿಯಿಂದ ನಿರ್ಮಿಸಿರುವ ಶೆಲ್ಟರ್‌ಗಳು ಸೇರಿ 117 ಕಡೆ ನಿಲ್ದಾಣಗಳನ್ನು ಗುರುತಿಸಲಾಗಿದೆ.
ಎಲ್ಲೆಲ್ಲಿ ಕಿರಿಕಿರಿ?
ಶಿವಮೊಗ್ಗದ ಮಿಳ್ಳಘಟ್ಟ ಕ್ರಾಸ್(ಸಾಗರ ರಸ್ತೆ), ಅಶೋಕ ವೃತ್ತ, ಅಮೀರ್ ಅಹಮ್ಮದ್ ವೃತ್ತ(ನೆಹರು ರಸ್ತೆ), ಸೀನಪ್ಪ ವೃತ್ತ, ಮಹಾವೀರ ವೃತ್ತ, ಶಿವಪ್ಪ ನಾಯಕ ವೃತ್ತ, ಲಕ್ಷ್ಮೀ ಟಾಕೀಸ್, ಸವಳಂಗ ರಸ್ತೆ ನಂದಿ ವಿದ್ಯಾಸಂಸ್ಥೆ ಮುಂಭಾಗ, ವಿನೋಬನಗರ 100 ಅಡಿ ರಸ್ತೆ, ಎನ್.ಟಿ.ರಸ್ತೆ, ಆಯನೂರು ಗೇಟ್(ಎರಡು ಬದಿ), ಸರ್ಕಿಟ್‌ಹೌಸ್ ವೃತ್ತ, ಎಂಆರ್‌ಎಸ್, ಬೈಪಾಸ್ ವೃತ್ತ, ಮೆಗ್ಗಾನ್ ಆಸ್ಪತ್ರೆ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಸಿಟಿ ಸೆಂಟರ್ ಮಾಲ್ ಎದುರು ಸೇರಿ ಹಲವೆಡೆ ನಿತ್ಯವೂ ಟ್ರಾಫಿಕ್ ಕಿರಿಕಿರಿ ಉಂಟಾಗುತ್ತಿದೆ.ಮಹಾನಗರ ಪಾಲಿಕೆ ವ್ಯಾಪ್ತಿಯ 117 ಕಡೆ ಬಸ್ ನಿಲ್ದಾಣ ಗುರುತಿಸಿ ಆದೇಶ ಹೊರಡಿಸಲಾಗಿತ್ತು. ಹಲವರು ನಿಯಮ ಪಾಲನೆ ಮಾಡುತ್ತಿಲ್ಲ ಎಂಬುದು ಗಮನಕ್ಕೆ ಬಂದಿದೆ. ಕೆಲವು ಬಸ್‌ಗಳ ಚಾಲಕರಿಗೆ ದಂಡದ ಬಿಸಿ ಮುಟ್ಟಿಸಲಾಗಿದೆ. ಆದೇಶವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಲಾಗುವುದು.ಜಿ.ಕೆ.ಮಿಥುನ್‌ಕುಮಾರ್, ಎಸ್ಪಿ