ಬಸ್ ನಿಲ್ದಾಣಕ್ಕಿಲ್ಲ ಮೂಲಸೌಕರ್ಯ

state bank
Published on

ಪ್ರಕಾಶ್ ಮಂಜೇಶ್ವರ ಮಂಗಳೂರು

ಅಡ್ಡಾದಿಡ್ಡಿ ನಿಲ್ಲುವ ಸಿಟಿ ಬಸ್‌ಗಳ ವೇಗದ ಧಾವಂತಕ್ಕೆ ಕಡಿವಾಣ ಹಾಕಲು ಬಸ್‌ಗಳು ನಿಲ್ಲುವ ಜಾಗವನ್ನೇ ಸ್ಥಳಾಂತರ ಮಾಡಲಾಗಿತ್ತಾದರೂ ಅಲ್ಲಿಗೆ ಸರಿಯಾದ ಮೂಲಸೌಕರ್ಯ ಒದಗಿಸದೆ ಮತ್ತೊಂದಷ್ಟು ಸಮಸ್ಯೆ ಮೈಮೇಲೆಳೆದುಕೊಳ್ಳಲಾಗಿದೆ.
ಮಂಗಳೂರಿನ ಸ್ಟೇಟ್‌ಬ್ಯಾಂಕ್‌ನಿಂದ ಹತ್ತಿರದ ಸರ್ವೀಸ್ ಬಸ್ ನಿಲ್ದಾಣಕ್ಕೆ ಸಿಟಿ ಬಸ್ ನಿಲ್ದಾಣ ಸ್ಥಳಾಂತರಗೊಂಡು ನಾಲ್ಕು ತಿಂಗಳು ಕಳೆದರೂ ಪರಿಸ್ಥಿತಿ ಬದಲಾಗಿಲ್ಲ. ಈಗ ಸಿಟಿ ಬಸ್‌ಗಳು ನಿಲ್ಲುವ ಸರ್ವೀಸ್ ಬಸ್ ನಿಲ್ದಾಣದಲ್ಲಿ ಬಸ್‌ಗಳನ್ನು ಕಾಯುವ ಮಹಿಳೆಯರು, ಮಕ್ಕಳು, ವೃದ್ದರು ಸಹಿತ ಎಲ್ಲ ಪ್ರಯಾಣಿಕರಿಗೆ ಮಳೆ- ಬಿಸಿಲಿನಿಂದ ರಕ್ಷಣೆ ಇಲ್ಲ. ಎರಡು ಸಾಲುಗಳಲ್ಲಿ ಮಾತ್ರ ಪ್ರಯಾಣಿಕರು ನಿಲ್ಲುವಲ್ಲಿ ಛಾವಣಿ ವ್ಯವಸ್ಥೆ ಇದ್ದು, ಉಳಿದ ಕಡೆ ಬಸ್ ಕಾಯುವವರು ಬಸ್‌ಗಳ ಬದಿಯಲ್ಲಿ ನಿಂತು ಬಿಸಿಲಿನಿಂದ ರಕ್ಷಣೆ ಪಡೆಯಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಬಿಸಿಲು ಕಡಿಮೆಯಾಗುತ್ತಿದ್ದಂತೆ ಈ ಪ್ರದೇಶವನ್ನು ಭಿಕ್ಷುಕರು ತುಂಬಿಕೊಳ್ಳುತ್ತಾರೆ.

ಬಸ್ ನಿಲ್ದಾಣದ ಮಗ್ಗುಲಿನಲ್ಲಿ ಶೌಚಗೃಹವೊಂದಿದ್ದು, ಇದನ್ನು ಪ್ರವೇಶಿಸಲು ಸಾಲಾಗಿ ಒತ್ತೊತ್ತಾಗಿ ನಿಂತ ಬಸ್‌ಗಳ ಎಡೆಯಿಂದ ಸಾಗಬೇಕು. ಹೆಣ್ಣುಮಕ್ಕಳು ಬಳಸಲು ಕಷ್ಟ ಎಂಬ ಪರಿಸ್ಥಿತಿ ಇಲ್ಲಿದೆ. ಶುಚಿತ್ವದ ಸ್ಥಿತಿ ಹೇಗಿದೆ ಎಂದರೆ ಯಾರಾದರೂ ಬಳಸಲು ಹಿಂಜರಿಯುವಂತೆ ಇದೆ. ಹೆಚ್ಚಿರುವ ಪ್ರಯಾಣಿಕರನ್ನು ಲಕ್ಷೃದಲ್ಲಿಟ್ಟುಕೊಂಡು ಇಲ್ಲಿ ವಿಶಾಲ ಹೊಸ ಸುಸಜ್ಜಿತ ಶೌಚಗೃಹ ಆಗಬೇಕಿದೆ. ಹುಸಿಯಾದ ಜಿಲ್ಲಾಡಳಿತದ ಭರವಸೆ

ಸಿಟಿ ಬಸ್ ನಿಲ್ದಾಣವನ್ನು ಇಲ್ಲಿಗೆ ಸ್ಥಳಾಂತರಿಸುವ ಸಂದರ್ಭ ಶೀಘ್ರದಲ್ಲೇ ಬಸ್ ನಿಲ್ದಾಣದಲ್ಲಿ ಅಗತ್ಯ ಮೂಲಸೌಕರ್ಯ ಕಲ್ಪಿಸುವ ಕುರಿತು ಜಿಲ್ಲಾಡಳಿತ ಭರವಸೆ ನೀಡಿತ್ತು. ಆದರೆ ಈ ವಿಷಯದಲ್ಲಿ ಆಗಿರುವ ಪ್ರಗತಿ ಜೀರೋ ಎನ್ನುತ್ತಾರೆ ಬಸ್ ಮಾಲೀಕರ ಸಂಘದ ಮಾಜಿ ಜಿಲ್ಲಾಧ್ಯಕ್ಷ ಜಯಶೀಲ ಅಡ್ಯಂತಾಯ. ರಾಜ್ಯದಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಿದ್ದಾಗ ಜಿಲ್ಲಾಧಿಕಾರಿ ಹಾಗೂ ನಗರ ಪೊಲೀಸ್ ಆಯುಕ್ತರು ಮುತುವರ್ಜಿ ವಹಿಸಿ ಸ್ಟೇಟ್‌ಬ್ಯಾಂಕ್ ಸಮೀಪದ ಸಿಟಿ ಬಸ್ ನಿಲ್ದಾಣವನ್ನು ಸರ್ವೀಸ್ ಬಸ್ ನಿಲ್ದಾಣದಲ್ಲಿ ವಿಲೀನ ಮಾಡಿದ್ದರು. ಬಸ್ ನಿಲ್ದಾಣ ಸ್ಥಳಾಂತರಕ್ಕೆ ಮೊದಲು ಸರ್ವೀಸ್ ಬಸ್ ನಿಲ್ದಾಣದಲ್ಲಿ ಸಿಟಿ ಬಸ್‌ಗಳಿಗೆ ಹಾಗೂ ಪ್ರಯಾಣಿಕರು ಮತ್ತು ಸಿಬ್ಬಂದಿಗೆ ಮೂಲಸೌಕರ್ಯಗಳನ್ನು ಒದಗಿಸುವಂತೆ ಸಿಟಿ ಬಸ್ ಮಾಲೀಕರ ಸಂಘಟನೆ ಬೇಡಿಕೆ ಇಟ್ಟಿತ್ತು. ಸ್ಟೇಟ್‌ಬ್ಯಾಂಕ್ ಸಮೀಪ ಈ ಹಿಂದೆ ಬಸ್‌ಗಳು ಮಾರ್ಗದಲ್ಲೇ ನಿಲ್ಲುತ್ತಿದ್ದು, ಇದರಿಂದ ಸಂಚಾರ ವ್ಯವಸ್ಥೆಗೆ ಸಮಸ್ಯೆಯಾಗುತ್ತದೆ, ಸರ್ವೀಸ್ ಬಸ್ ನಿಲ್ದಾಣದಲ್ಲೇ ಇತರ ಸಿಟಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಕೂಡ ಅಗತ್ಯ ವ್ಯವಸ್ಥೆ ಒದಗಿಸುವ ಪ್ರಯತ್ನದಲ್ಲಿ ನಾವು ಜತೆಗಿದ್ದೇವೆ ಎಂದು ಪೊಲೀಸ್ ಆಯುಕ್ತರು ಸಿಟಿ ಬಸ್ ಮಾಲೀಕರಿಗೆ ಭರವಸೆ ನೀಡಿದ್ದರು. ಆದರೆ ಅವೆಲ್ಲವೂ ಭರವಸೆಯಾಗಿಯೇ ಉಳಿದಿದೆ. ಸುಧಾರಣೆ ಆಗಿದೆಯೇ? ಇಲ್ಲವೇ?
ಸಿಟಿ ಬಸ್ ನಿಲ್ದಾಣ ಸ್ಥಳಾಂತರಿಂದ ಜನರಿಗೆ ಅನುಕೂಲವಾಗಿದೆ. ಈ ಹಿಂದೆ ಸ್ಟೇಟ್‌ಬ್ಯಾಂಕ್ ಸಮೀಪ ಸಿಟಿ ಬಸ್‌ಗಳು ರಸ್ತೆಯಲ್ಲೇ ನಿಲ್ಲುತ್ತಿದ್ದು, ಅವುಗಳ ನಡುವೆ ಜನ ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ಇತ್ತು. ಈ ಹಿಂದೆ ಸ್ಟೇಟ್‌ಬ್ಯಾಂಕ್‌ನಿಂದ ಕಾರ್ಯಾರಿಸುತ್ತಿದ್ದ 226 ಸಿಟಿ ಬಸ್‌ಗಳನ್ನು ಈಗ ಸರ್ವೀಸ್ ಬಸ್ ನಿಲ್ದಾಣಕ್ಕೆ ಸ್ಥಳಾಂತರಿಸಲಾಗಿದೆ. ಇಷ್ಟು ಬಸ್‌ಗಳು ದಿನಂಪ್ರತಿ 2,500 ಟ್ರಿಪ್‌ಗಳನ್ನು ಮಾಡುತ್ತವೆ. ಇದರ ಜತೆ 25 ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಕೂಡ ಸರ್ವೀಸ್ ಬಸ್ ನಿಲ್ದಾಣಕ್ಕೆ ಶಿಫ್ಟ್ ಮಾಡಲಾಗಿದೆ.

ಹಿಂದೆ ಸ್ಟೇಟ್‌ಬ್ಯಾಂಕ್‌ನಿಂದ ಕ್ಲಾಕ್ ಟವರ್ ತನಕ ಸಿಟಿ ಬಸ್‌ಗಳು ರಸ್ತೆಯಲ್ಲೇ ನಿಲ್ಲುವ ಪರಿಸ್ಥಿತಿ ಇತ್ತು. ಈಗ ಬಸ್ ನಿಲ್ದಾಣದಲ್ಲೇ ನಿಲ್ಲಲು ಅವಕಾಶವಾಗಿದೆ. ಬಸ್ ನಿಲ್ದಾಣದ ಒಳಗೆ ಸಿಟಿ ಬಸ್‌ಗಳು ನಿಲ್ಲಲು ಅವಕಾಶ ಒದಗಿಸುವುದರಿಂದ ಪ್ರಯಾಣಿಕರಿಗೆ ಅನುಕೂಲವಾಗಿದೆ. ಆದರೆ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು, ಜಿಲ್ಲಾಡಳಿತದ ಗಮನ ಸೆಳೆಯುವ ಪ್ರಯತ್ನಗಳನ್ನು ಇನ್ನಷ್ಟು ಮಾಡುತ್ತೇವೆ.

ಅಜೀಜ್ ಪರ್ತಿಪ್ಪಾಡಿ, ಸಿಟಿ ಬಸ್ ಮಾಲೀಕರ ಸಂಘದ ಜಿಲ್ಲಾಧ್ಯಕ್ಷರು.

ಫೋಟೋ
ಎಂಎನ್‌ಜಿ- ಎಯುಜಿ 10- ಬಸ್ ಸ್ಟಾೃಂಡ್ 1- 4
ಬಸ್ ನಿಲ್ದಾಣದ ಅವ್ಯವಸ್ಥೆ
……….
ಎಂಎನ್‌ಜಿ- ಎಯುಜಿ 10- ಅಜೀಝ್ ಪರ್ತಿಪ್ಪಾಡಿ
ಅಜೀಜ್ ಪರ್ತಿಪ್ಪಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net