

ದೇವದುರ್ಗ: ಬಸ್ ಪ್ರಯಾಣ ದರ ಶೇ.15 ಹೆಚ್ಚಿಸಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ತಾಲೂಕು ಆಡಳಿತ ಸೌಧ ಮುಂದೆ ಭಾರತ ಕಮ್ಯೂನಿಷ್ಟ್ ಪಕ್ಷ(ಎಂ)ದ ಮುಖಂಡರು ಗುರುವಾರ ಪ್ರತಿಭಟನೆ ನಡೆಸಿದರು.
ಇಂಧನ ಬೆಲೆ ಹೆಚ್ಚಳ ಮತ್ತು ಸಿಬ್ಬಂದಿ ವೆಚ್ಚ ನೆಪದಲ್ಲಿ ಬಸ್ ಪ್ರಯಾಣ ದರ ಏರಿಕೆ ಮಾಡಿದ್ದು ಅವೈಜ್ಞಾನಿಕ ನಿರ್ಧಾರ. ಸಾರ್ವಜನಿಕ ಸಾರಿಗೆಗೆ ಡೀಸೆಲ್ ದರಗಳನ್ನು ಕಡಿಮೆ ಬೆಲೆಗೆ ನೀಡುವುದು ಸರ್ಕಾರದ ಜವಾಬ್ದಾರಿ. ಸಾರಿಗೆ ನಿಗಮಗಳಿಗೆ ಪೂರೈಸುವ ಡೀಸೆಲ್ ದರ ಮುಕ್ತ ಮಾರುಕಟ್ಟೆಗಿಂತ ದುಬಾರಿಯಾಗಿದೆ. ಸರ್ಕಾರ ವೆಚ್ಚ ಕಡಿಮೆ ಮಾಡಬೇಕೆಂದಿದ್ದರೆ ಡೀಸೆಲ್ ಸಬ್ಸಿಡಿ ದರದಲ್ಲಿ ಪೂರೈಸಬೇಕು ಎಂದು ಆಗ್ರಹಿಸಿದರು.
ಈಗಾಗಲೇ ನಾಲ್ಕು ನಿಗಮಗಳಲ್ಲಿ ಸಿಬ್ಬಂದಿಗೆ ಮೂರು ವರ್ಷಗಳ ವೇತನ ಬಾಕಿ ಉಳಿಸಿಕೊಂಡಿದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಬಜೆಟ್ ಬೆಂಬಲ ನೀಡುವುದು ಸರ್ಕಾರದ ಕರ್ತವ್ಯ. ಸಾರ್ವಜನಿಕ ಹಿತದೃಷ್ಟಿಯಿಂದ ಸಾರಿಗೆಯನ್ನು ಲಾಭ ನಷ್ಟದ ಲೆಕ್ಕದಲ್ಲಿ ನೋಡಬಾರದು. ಬಸ್‌ಗಳ ಓಡಾಟ ಗ್ರಾಮೀಣ ಭಾಗಕ್ಕೆ ಅನುಕೂಲವಾಗಿದ್ದು ಲಾಭ, ನಷ್ಟದ ಲೆಕ್ಕಾಚಾರ ಹಾಕುವುದು ವ್ಯವಹಾರ ಅಲ್ಲ. ದರ ಹೆಚ್ಚಳ ಬಡವರಿಗೆ ಹೊರೆಯಾಗಿದೆ ಎಂದು ದೂರಿದರು.
ಕೂಡಲೇ ಬಸ್ ಪ್ರಯಾಣ ದರ ಏರಿಕೆ ನಿರ್ಧಾರ ವಾಪಸ್ ಪಡೆಯಬೇಕು. ನೌಕರರ ಬಾಕಿ ವೇತನ ಪಾವತಿಸಬೇಕು. ಸಾರಿಗೆ ಸಂಸ್ಥೆಗಳಿಗೆ ಸಬ್ಸಿಡಿ ದರದಲ್ಲಿ ಡೀಸೆಲ್ ಪೂರೈಸಬೇಕು ಎಂದು ಆಗ್ರಹಿಸಿದರು. ತಾಲೂಕು ಕಾರ್ಯದರ್ಶಿ ನರಸಣ್ಣ ನಾಯಕ, ಮುಖಂಡರಾದ ಶಬ್ಬೀರ್ ಜಾಲಹಳ್ಳಿ, ಹನಮಂತ ಗುರಿಕಾರ, ಮೌನೇಶ, ದುರುಗಪ್ಪ, ಹನುಮಂತ, ಮುಕ್ಕನಗೌಡ, ರಂಗನಾಥ, ಬಸವರಾಜ ಇದ್ದರು.