ಬಸ್ ಪ್ರಯಾಣ ದರ ಏರಿಕೆಗೆ ಎಬಿವಿಪಿ ಖಂಡನೆ

6Jaggu1
ಬಸ್ ಪ್ರಯಾಣ ದರ ಏರಿಕೆ ಖಂಡಿಸಿ ಎಬಿವಿಪಿ ಕಾರ್ಯಕರ್ತರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ಮಂಜುನಾಥ ಹಂಚಿನಮನಿ, ರೋಹಿತ್ ಅಲಕುಂಟೆ, ಸಚಿನ್ ಹಿರೇಮಠ, ರೋಹಿತ ಆಲ್ಕುಂತೆ, ಕುಶಲ ಘೋಡಗೆರಿ ಇತರರಿದ್ದರು.
Published on

ಬೆಳಗಾವಿ: ರಾಜ್ಯ ಸರ್ಕಾರದ ಬಸ್ ಪ್ರಯಾಣ ದರ ಏರಿಕೆ ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ನಿಂದ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಯಿತು.

ಚನ್ನಮ್ಮ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ‌್ಯಾಲಿ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಶೇ.15ರಷ್ಟು ಬಸ್ ಪ್ರಯಾಣ ದರ ಹೆಚ್ಚಿಸಲಾಗಿದೆ. ಮೊದಲೇ ಶಕ್ತಿ ಯೋಜನೆಯಿಂದ ಸಾರಿಗೆ ಬಸ್ ಅವಲಂಬಿಸಿದ್ದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಈಗ ಗ್ಯಾರಂಟಿ ಯೋಜನೆ ನಿರ್ವಹಿಸಲು ಬಸ್ ಪ್ರಯಾಣ ದರ ಹೆಚ್ಚಿಸಿರುವುದು ಖಂಡನೀಯ. ಒಂದೆಡೆ ಸರ್ಕಾರ ಮಹಿಳೆಯರಿಗೆ ಉಚಿತ ಭಾಗ್ಯಗಳನ್ನು ನೀಡಿ ಇನ್ನೊಂದೆಡೆ ಪುರುಷರಿಂದ ಕಸಿದುಕೊಳ್ಳುವ ಕೆಲಸ ಮಾಡುತ್ತಿದೆ. ಈ ಮೋಸ ಸರ್ಕಾರ ನಿಲ್ಲಿಸಬೇಕು. ಬಸ್‌ನಲ್ಲಿ ಪ್ರಯಾಣಿಸುವ ಪುರುಷರಿಗೆ ತೊಂದರೆಯಾಗುತ್ತಿವೆ. ಸ್ವತಃ ಸಚಿವರು ಒಮ್ಮೆ ಸಾರಿಗೆ ಬಸ್‌ನಲ್ಲಿ ಪ್ರಯಾಣಿಸಿ ನೋಡಲಿ ಎಂದರು.

ಶಕ್ತಿ ಯೋಜನೆಯಿಂದಾಗಿ ವಿದ್ಯಾರ್ಥಿಗಳಿಗೆ ಬಸ್‌ನಲ್ಲಿ ಪ್ರಯಾಣಿಸುವುದು ಕಷ್ಟಕರವಾಗಿದೆ. ಸಮಯಕ್ಕೆ ಸರಿಯಾಗಿ ಶಾಲಾ ಕಾಲೇಜುಗಳಿಗೆ ಬರಲು ಸಾಧ್ಯವಾಗುತ್ತಿಲ್ಲ. ಬಸ್‌ನಲ್ಲಿ ಮಧ್ಯಮ ಮತ್ತು ಬಡ ಜನರೇ ಹೆಚ್ಚಾಗಿ ಪ್ರಯಾಣಿಸುತ್ತಾರೆ. ಶೇ.15ರಷ್ಟು ಟಿಕೆಟ್ ದರ ಹೆಚ್ಚಿಸಿರುವುದು ಜನಸಾಮಾನ್ಯರ ಮೇಲೆ ಹೊರೆಯಾಗಿದೆ. ಈ ಕೂಡಲೇ ರಾಜ್ಯ ಸರ್ಕಾರ ತನ್ನ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಎಬಿವಿಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಮಂಜುನಾಥ ಹಂಚಿನಮನಿ, ಎಬಿವಿಪಿ ಮಹಾನಗರ ಪ್ರಮುಖ ರೋಹಿತ್ ಅಲಕುಂಟೆ, ಸಚಿನ್ ಹಿರೇಮಠ, ರೋಹಿತ ಆಲ್ಕುಂತೆ, ಕುಶಲ ಘೋಡಗೆರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net