ಬಸ್ ಪ್ರಯಾಣ ದರ ಹೆಚ್ಚಿಸಿ: ಕೆನರಾ ಬಸ್ ಮಾಲೀಕರ ಸಂಘ ಆಗ್ರಹ

bus web
Published on

ಉಡುಪಿ: ಲಾಕ್‌ಡೌನ್‌ನಲ್ಲಿ ನಿಲುಗಡೆಗೊಳಿಸಿದ್ದ ಬಸ್‌ಗಳನ್ನು ಹಂತ ಹಂತವಾಗಿ ಓಡಿಸಲು ಕೆನರಾ ಬಸ್ ಮಾಲೀಕರ ಸಂಘ ನಿರ್ಣಯಿಸಿದೆ. ಡೀಸೆಲ್ ಬೆಲೆ ಹೆಚ್ಚಳ ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಿದ್ದು, ಡೀಸೆಲ್ ದರ ಪರಿಷ್ಕರಿಸುವ ಸಂದರ್ಭ ಬಸ್ ಪ್ರಯಾಣ ದರವನ್ನೂ ಪರಿಷ್ಕರಿಸಲು ಅವಕಾಶ ಕೊಡಬೇಕು ಎಂದು ಸರ್ಕಾರವನ್ನು ಸಂಘ ಆಗ್ರಹಿಸಿದೆ.

ನಗರದಲ್ಲಿ ಶನಿವಾರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಯಿತು. ಕೆಎಸ್‌ಆರ್‌ಟಿಸಿ ಪರ್ಮಿಟ್ ಮತ್ತು ದರ ಸಮರ ನಡೆಸುತ್ತಿರುವುದು ಸಾರಿಗೆ ಕ್ಷೇತ್ರದ ಬೆಳವಣಿಗೆಗೆ ಸರಿಯಾದ ಕ್ರಮವಲ್ಲ. ಈ ಬಗ್ಗೆ ಸಾರಿಗೆ ಸಚಿವರು ಮತ್ತು ಜಿಲ್ಲಾಧಿಕಾರಿ ಅವರ ಗಮನಕ್ಕೂ ತರಲಾಗಿದೆ. ಸರ್ಕಾರ ಸೂಕ್ತ ಕ್ರಮ ವಹಿಸಬೇಕು. ಆರು ತಿಂಗಳ ತೆರಿಗೆ ಮನ್ನಾ ಮಾಡುವಂತೆ ಶುಕ್ರವಾರ ಮುಖ್ಯಮಂತ್ರಿಗೆ ಮನವಿ ಮಾಡಿದ್ದೇವೆ. ಇದರ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗುವುದು. ಶಾಸಕರು, ಸಚಿವರು ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.

ಸಂಘದ ಪ್ರಧಾನ ಕಾರ್ಯದರ್ಶಿ ಕುಯಿಲಾಡಿ ಸುರೇಶ್ ನಾಯಕ್, ಉಪಾಧ್ಯಕ್ಷ ಸದಾನಂದ ಚಾತ್ರ, ಖಜಾಂಚಿ ಜ್ಯೋತಿ ಪ್ರಸಾದ ಹೆಗ್ಡೆ, ಶಿರ್ವ ವಲಯ ಅಧ್ಯಕ್ಷ ಶಿವರಾಮ ಶೆಟ್ಟಿ, ಕಿನ್ನಿಗೋಳಿ ವಲಯ ಅಧ್ಯಕ್ಷ ದುರ್ಗಾಪ್ರಸಾದ ಹೆಗ್ಡೆ, ಪದಾಧಿಕಾರಿಗಳಾದ ಪ್ರಸಾದ ಬಲ್ಲಾಳ್, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಸುಭಾಸ್ ರೈ, ಮಾಧವ ನಾಯಕ್ ಉಪಸ್ಥಿತರಿದ್ದರು.

ವಿದ್ಯಾರ್ಥಿ ಪಾಸ್ ಕಡ್ಡಾಯ: ವಿದ್ಯಾರ್ಥಿಗಳು ಕಡ್ಡಾಯವಾಗಿ ರಿಯಾಯಿತಿ ಪಾಸ್ ಪಡೆದಿರಬೇಕು. ಕಾರ್ಡ್ ಇಲ್ಲದೆ ಪ್ರಯಾಣಿಸಲು ಅವಕಾಶ ನೀಡದಂತೆ ಮತ್ತು ಕಾರ್ಡ್ ಇಲ್ಲದಿದ್ದಲ್ಲಿ ಪೂರ್ತಿ ದರ ಪಾವತಿಸಿ ಪ್ರಯಾಣಿಸಬೇಕು ಎಂದು ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net