ಬಸ್ ಟರ್ಮಿನಲ್‌ಗೆ ವಿಘ್ನ ನಿರಂತರ, ಸ್ಮಾರ್ಟ್‌ಸಿಟಿಯಿಂದ ಕೈ ತಪ್ಪುವ ಭೀತಿ

pumpwell
Published on

ಹರೀಶ್ ಮೋಟುಕಾನ ಮಂಗಳೂರು
ಮಂಗಳೂರು ಸ್ಮಾರ್ಟ್‌ಸಿಟಿ ಯೋಜನೆ ಪೂರ್ಣಗೊಳ್ಳಲು ಇನ್ನೇನು 10 ತಿಂಗಳಷ್ಟೇ ಬಾಕಿ ಇದ್ದು, ಪಂಪ್‌ವೆಲ್‌ನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬಸ್ ಟರ್ಮಿನಲ್ ಯೋಜನೆ ಇನ್ನೂ ಆರಂಭಿಕ ಪ್ರಗತಿಯನ್ನೇ ಕಂಡಿಲ್ಲ. ಈಗಾಗಲೇ ಮೂರು ಬಾರಿ ಟೆಂಡರ್ ಕರೆದರೂ, ಟೆಂಡರ್ ವಹಿಸಿಕೊಳ್ಳಲು ಯಾರೂ ಮುಂದೆ ಬಂದಿಲ್ಲ. ಇದೀಗ ಈ ಯೋಜನೆ ಸ್ಮಾರ್ಟ್‌ಸಿಟಿಯಿಂದ ಕೈ ತಪ್ಪುವ ಹಂತದಲ್ಲಿದ್ದು, ಮತ್ತೊಮ್ಮೆ ಪರಿಷ್ಕೃತ ಟೆಂಡರ್ ಕರೆಯಲು ಸ್ಮಾರ್ಟ್‌ಸಿಟಿ ಮುಂದಾಗಿದೆ.

ಸ್ಮಾರ್ಟ್‌ಸಿಟಿ ಯೋಜನೆಯ ಮೂಲಕ 445 ಕೋಟಿ ರೂ. ವೆಚ್ಚದಲ್ಲಿ ಪಂಪ್‌ವೆಲ್‌ನಲ್ಲಿ ಇಂಟಿಗ್ರೇಟೆಡ್ ಬಸ್ ಟರ್ಮಿನಲ್ ಮತ್ತು ವಾಣಿಜ್ಯ ಸಂಕೀರ್ಣ ಅಭಿವೃದ್ಧಿ ಯೋಜನೆ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿತ್ತು. ಈ ಯೋಜನೆಗೆ ಮೂರು ಬಾರಿ ಟೆಂಡರ್ ಕರೆಯಲಾಗಿದ್ದರೂ ಗುತ್ತಿಗೆ ವಹಿಸಲು ಯಾರೂ ಮುಂದೆ ಬಾರದ ಕಾರಣ ಯೋಜನೆಗೆ ಹಿನ್ನಡೆಯಾಗಿತ್ತು. ಬಸ್ ನಿಲ್ದಾಣದ ವಿನ್ಯಾಸದಲ್ಲಿ ಸ್ವಲ್ಪ ಬದಲಾವಣೆ ಮಾಡಿ, ಟೆಂಡರ್ ಮೊತ್ತವನ್ನು 445 ಕೋಟಿ ರೂ. ನಿಂದ ಶೇ.50ರಷ್ಟು ಮೊತ್ತ ಇಳಿಕೆ ಮಾಡಿ ಟೆಂಡರ್ ಕರೆಯಲು ಸ್ಮಾರ್ಟ್‌ಸಿಟಿ ನಿರ್ಧಾರ ಮಾಡಿದೆ. ಈ ಯೋಜನೆಯ ಪ್ರಕಾರ ಟರ್ಮಿನಲ್‌ನ ವಿನ್ಯಾಸದಲ್ಲೂ ಬದಲಾವಣೆಯಾಗಲಿದೆ. ವಿನ್ಯಾಸ ಯಾವ ರೀತಿ ಇರಬೇಕು ಎಂಬ ನಿಟ್ಟಿನಲ್ಲಿ ಉದ್ಯಮಿಗಳು, ತಜ್ಞರು ಸೇರಿದಂತೆ ಕೆಎಸ್‌ಆರ್‌ಟಿಸಿ, ಖಾಸಗಿ ಬಸ್ ಪ್ರಮುಖರ ಅಭಿಪ್ರಾಯವನ್ನೂ ಕೇಳಲಾಗಿದೆ.


ಪಂಪ್‌ವೆಲ್‌ನಲ್ಲಿ ಕೇಂದ್ರ ಬಸ್‌ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿ 2009ರಲ್ಲೇ ಖಾಸಗಿ ಜಮೀನು ಸ್ವಾಧೀನ ಪಡಿಸಲಾಗಿತ್ತು. ಈ ಪ್ರದೇಶಕ್ಕೆ ಮಣ್ಣು ತುಂಬಿಸುವ ಕೆಲಸವೂ ಕೆಲವು ವರ್ಷಗಳಿಂದ ನಡೆದಿದೆ. ನಾಲ್ಕು ವರ್ಷಗಳ ಹಿಂದೆ ಇಲ್ಲಿ ಇಂಟರ್‌ಲಾಕ್ ಅಳವಡಿಸಿ ತಾತ್ಕಾಲಿಕವಾಗಿ ಪ್ರಾಯೋಗಿಕ ನೆಲೆಯಲ್ಲಿ ಸರ್ವೀಸ್ ಬಸ್ ನಿಲ್ದಾಣವನ್ನು ಸ್ಥಳಾಂತರಿಸುವ ಬಗ್ಗೆ ಪ್ರಸ್ತಾವಿಸಲಾಗಿತ್ತ್ತು. ಆದರೆ ಈ ಯೋಜನೆ ಇನ್ನೂ ಆರಂಭವೇ ಕಂಡಿಲ್ಲ.


ಟೆಂಡರ್ ಪ್ರಕ್ರಿಯೆಗೂ ಬೇಕು ಹಲವು ತಿಂಗಳು
ಮಂಗಳೂರು ಸ್ಮಾರ್ಟ್‌ಸಿಟಿ ಯೋಜನೆ 2024ರ ಜೂನ್ ತಿಂಗಳಿಗೆ ಅಂತ್ಯಗೊಳ್ಳಬೇಕು. ಆದರೆ ಬಸ್ ಟರ್ಮಿನಲ್ ಯೋಜನೆಗೆ ಈಗಾಗಲೇ ಮೂರು ಬಾರಿ ಟೆಂಡರ್ ಕರೆದರೂ ವಹಿಸಿಕೊಳ್ಳಲು ಯಾರೂ ಬಂದಿಲ್ಲ. ಮತ್ತೆ ಟೆಂಡರ್ ಕರೆಯುವುದಿದ್ದರೂ ಈ ಪ್ರಕ್ರಿಯೆಗೆ ಇನ್ನೂ ಕೆಲವು ತಿಂಗಳು ಬೇಕು. ಈ ಯೋಜನೆ ಮುಂದುವರಿಯಬೇಕಾದರೆ ಟೆಂಡರ್ ಪ್ರಕ್ರಿಯೆಗೆ ವೇಗ ಸಿಗಬೇಕಿದೆ. ಇಲ್ಲವಾದರೆ ಸ್ಮಾರ್ಟ್‌ಸಿಟಿ ಯೋಜನೆಯಿಂದ ಪಂಪ್‌ವೆಲ್ ಬಸ್ ಟರ್ಮಿನಲ್ ಯೋಜನೆ ಕೈತಪ್ಪುವ ಭೀತಿಯಲ್ಲಿದೆ.


ಪಂಪ್‌ವೆಲ್ ಬಸ್ ಟರ್ಮಿನಲ್ ಯೋಜನೆಗೆ ಸ್ಮಾರ್ಟ್‌ಸಿಟಿಯಿಂದ ಈಗಾಗಲೇ ಮೂರು ಬಾರಿ ಟೆಂಡರ್ ಕರೆಯಲಾಗಿದೆ. ಆದರೆ ಟೆಂಡರ್ ವಹಿಸಿಕೊಳ್ಳಲು ಯಾರೂ ಮುಂದೆ ಬಂದಿಲ್ಲ. ಒಟ್ಟಾರೆ 445 ಕೋಟಿ ರೂ. ಇದ್ದ ಯೋಜನೆಯ ಮೊತ್ತವನ್ನು ಇಳಿಕೆ ಮಾಡಿದ್ದೇವೆ. 150ರಿಂದ 200 ಕೋಟಿ ರೂ. ವೆಚ್ಚದಲ್ಲಿ ಮತ್ತೆ ಟೆಂಡರ್ ಕರೆಯಲು ನಿರ್ಧರಿಸಿದ್ದೇವೆ. ಅದರಂತೆ ಮುಂದಿನ ದಿನಗಳಲ್ಲಿ ಪ್ರಕ್ರಿಯೆ ಸಾಗಲಿದೆ.
ಅರುಣ್ ಪ್ರಭ, ಸ್ಮಾರ್ಟ್‌ಸಿಟಿ ಜನರಲ್ ಮ್ಯಾನೇಜರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net