ಸಂಚಾರ ವ್ಯವಸ್ಥೆ ವ್ಯತ್ಯಯ

ksrtc
Published on

ಮಂಗಳೂರು: ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ಹೆಚ್ಚಿನ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸಿಲ್ಲ. ಪರಿಣಾಮ, ಗ್ರಾಮೀಣ ಭಾಗಗಳಲ್ಲಿ ಪ್ರಯಾಣಿಕರು ಬಸ್ ಇಲ್ಲದೆ ಕಷ್ಟ ಅನುಭವಿಸಬೇಕಾಯಿತು. ಜಿಲ್ಲಾಡಳಿತ ವಿಶೇಷ ಅನುಮತಿ ಜೊತೆ ಕೆಎಸ್‌ಆರ್‌ಟಿಸಿ ಬಸ್ ಮಾರ್ಗಗಳಲ್ಲಿ ಗಣನೀಯ ಸಂಖ್ಯೆಯಲ್ಲಿ ಖಾಸಗಿ ಬಸ್‌ಗಳು ಸಂಚರಿಸಿದ ಕಾರಣ, ನಗರ ಭಾಗಗಳಲ್ಲಿ ಜನರು ಹೆಚ್ಚು ಕಷ್ಟಪಡಬೇಕಾಗಿ ಬರಲಿಲ್ಲ.

ಮಂಗಳೂರು ವಿಭಾಗದಿಂದ ಎರಡು ಬಸ್‌ಗಳಷ್ಟೇ ರಸ್ತೆಗಿಳಿದಿವೆ. ಬಿಜೈ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಖಾಸಗಿ ಬಸ್‌ಗಳು ಬುಧವಾರ ಬಂದಿವೆ. ಬಿಜೈ ನಿಲ್ದಾಣದಿಂದ ಮೈಸೂರಿಗೆ 2, ಹಾಸನಕ್ಕೆ ಒಂದು ಖಾಸಗಿ ಬಸ್ ಸಂಚರಿಸಿದೆ. ಆದರೆ ಸಾರಿಗೆ ಮುಷ್ಕರದ ಪ್ರಚಾರದಿಂದ ಸಾರ್ವಜನಿಕರ ಓಡಾಟ ಕಡಿಮೆ ಇದ್ದು, ಖಾಸಗಿ ಬಸ್‌ಗಳು ಕೂಡ ಪ್ರಯಾಣಿಕರ ಕೊರತೆ ಅನುಭವಿಸಿವೆ.

ಸ್ಟೇಟ್‌ಬ್ಯಾಂಕ್‌ನಿಂದ ಧರ್ಮಸ್ಥಳಕ್ಕೆ 10, ಸುಬ್ರಹ್ಮಣ್ಯಕ್ಕೆ 2 ಖಾಸಗಿ ಬಸ್‌ಗಳು ಪ್ರಯಾಣಿಸಿವೆ. ಪ್ರಯಾಣಿಕರ ಕೊರತೆ ಕಾರಣ ಸುಬ್ರಹ್ಮಣ್ಯಕ್ಕೆ ತೆರಳಬೇಕಿದ್ದ ಇನ್ನೊಂದು ಖಾಸಗಿ ಬಸ್ಸನ್ನು ಧರ್ಮಸ್ಥಳಕ್ಕೆ ಕಳುಹಿಸಲಾಗಿದೆ. ಸ್ಥಳೀಯ ಚಾಲಕ, ನಿರ್ವಾಹಕರ ಮನವೊಲಿಸಿ ಬೆಂಗಳೂರಿಗೆ ಒಂದು ರಾಜಹಂಸ ಬಸ್ ಹಾಗೂ ಮುಡಿಪುವಿಗೆ ಒಂದು ನರ್ಮ್ ಬಸ್ ಓಡಿಸಲಾಗಿದೆ.

ಶೇ.85ರಷ್ಟು ಹೊರ ಜಿಲ್ಲೆಯ ನೌಕರರು: ಮಂಗಳೂರು ಮತ್ತು ಪುತ್ತೂರು ಕೆಎಸ್‌ಆರ್‌ಟಿಸಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಶೇ.85ರಷ್ಟು ನೌಕರರು ಉತ್ತರ ಕರ್ನಾಟಕ ಭಾಗದವರು. ಅವರು ಭಾನುವಾರವೇ ತಮ್ಮ ಊರುಗಳಿಗೆ ರಜೆ ಮೇಲೆ ತೆರಳಿದ್ದಾರೆ. ರಜೆ ರದ್ದು, ವೇತನ ಕಡಿತದ ಎಚ್ಚರಿಕೆಯನ್ನೂ ಅವರು ನಿರ್ಲಕ್ಷಿಸಿದ್ದಾರೆ. ಉಳಿದ ಶೇ.15 ಸ್ಥಳೀಯರು ಕೂಡ ಕರ್ತವ್ಯಕ್ಕೆ ಹಾಜರಾಗಿಲ್ಲ. ಕೆಎಸ್‌ಆರ್‌ಟಿಸಿ ಡಿಪೋ ಹಾಗೂ ತಾಂತ್ರಿಕ ವಿಭಾಗಗಳ ನೌಕರರು ಕರ್ತವ್ಯದಿಂದ ದೂರ ಉಳಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಷ್ಕರ ಮುಂದುವರಿದರೆ ಇನ್ನಷ್ಟು ಖಾಸಗಿ ಬಸ್: ಮುಷ್ಕರದ ಪ್ರಥಮ ದಿನ ಧರ್ಮಸ್ಥಳ ಮತ್ತು ಸುಬ್ರಹ್ಮಣ್ಯ ಕೆಎಸ್‌ಆರ್‌ಟಿಸಿ ರೂಟ್‌ಗಳಲ್ಲಿ ಖಾಸಗಿ ಬಸ್‌ಗಳನ್ನು ಓಡಿಸಿದ್ದು, ಮುಷ್ಕರ ಮುಂದುವರಿದರೆ, ಮತ್ತಷ್ಟು ಖಾಸಗಿ ಬಸ್‌ಗಳನ್ನು ಸಂಚಾರಕ್ಕೆ ಇಳಿಸಲು ಬಸ್ ಮಾಲೀಕರು ನಿರ್ಧರಿಸಿದ್ದಾರೆ. ಸಾರ್ವಜನಿಕರಿಗೆ ಸುಗಮ ಸೇವೆ ಸಲುವಾಗಿ ಖಾಸಗಿ ಬಸ್ ಹಾಗೂ ಟೆಂಪೋಗಳಿಗೆ ತಾತ್ಕಾಲಿಕ ಪರವಾನಗಿ ನೀಡುವಂತೆ ಆರ್‌ಟಿಒಗೆ ಜಿಲ್ಲಾಡಳಿತ ಸೂಚನೆ ನೀಡಿದೆ. ಸುಮಾರು 60ಕ್ಕೂ ಅಧಿಕ ಟೂರಿಸ್ಟ್ ಬಸ್‌ಗಳಿಗೆ ತಾತ್ಕಾಲಿಕ ಪರವಾನಿಗೆ ನೀಡುವಂತೆ ಬಸ್ ಮಾಲೀಕರು ಸಾರಿಗೆ ಇಲಾಖೆಯನ್ನು ಕೋರಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್ ಬಂದ್ ಹಿನ್ನೆಲೆ ಬುಧವಾರ ಮಂಗಳೂರು ವಿವಿಯ ಎಲ್ಲ ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿತ್ತು.

ಬಸ್ ನಿಲ್ದಾಣಗಳಲ್ಲಿ ಹೆಲ್ಪ್ ಡೆಸ್ಕ್: ಜಿಲ್ಲೆಯ ಎಲ್ಲ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳಲ್ಲಿ ಹೆಲ್ಪ್ ಡೆಸ್ಕ್ ತೆರೆಯಲು ಜಿಲ್ಲಾಡಳಿತ ತೀರ್ಮಾನಿಸಿದೆ. ಮಂಗಳೂರು, ಉಡುಪಿ, ಕುಂದಾಪುರ, ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ಸೇರಿದಂತೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣವಿರುವ ಕಡೆ ಸಾರ್ವಜನಿಕರಿಗೆ ಅನುಕೂಲವಾಗಲು ಹೆಲ್ಪ್ ಡೆಸ್ಕ್ ತೆರೆಯಬೇಕು. ಪ್ರಯಾಣಿಕರನ್ನು ಅವರ ಊರಿಗೆ ತಲುಪಿಸಲು ವ್ಯವಸ್ಥೆ ಮಾಡಬೇಕು. ಸಾರಿಗೆ ಅಧಿಕಾರಿಗಳು ಪ್ರಯಾಣ ದರ ನಿಗದಿ ಮಾಡಿ ತಾತ್ಕಾಲಿಕ ರಹದಾರಿ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಸೂಚನೆ ನೀಡಿದ್ದಾರೆ.

ಪರ್ಯಾಯ ವ್ಯವಸ್ಥೆಗೆ ಡಿಸಿ ಸೂಚನೆ: ಮುಷ್ಕರ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಸಾರಿಗೆ ವ್ಯವಸ್ಥೆಯಲ್ಲಿ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ. ಕೆ.ವಿ ಸೂಚನೆ ನೀಡಿದರು. ಖಾಸಗಿ ವಾಹನಗಳಲ್ಲಿ ಪ್ರಯಾಣಿಕರಿಂದ ದುಬಾರಿ ದರ ಪಡೆಯುವಂತಿಲ್ಲ. ವಾಹನಗಳಲ್ಲಿ ಸಂಚರಿಸುವಾಗ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಚಾಲಕರು ಹಾಗೂ ನಿರ್ವಾಹಕರು ಎಚ್ಚರ ವಹಿಸಬೇಕು. ತಪ್ಪಿದ್ದಲ್ಲಿ ವಾಹನ ಮಾಲೀಕರಿಂದಲೇ ದಂಡ ವಸೂಲಿ ಮಾಡಲಾಗುವುದು ಎಂದರು. ಜಿಲ್ಲೆಯಲ್ಲಿ ಶಾಲೆ, ಕಾಲೇಜು ವಿದ್ಯಾರ್ಥಿಗಳ ಮಾಹಿತಿ ನೀಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಸೂಚನೆ ನೀಡಿದರು.

ಪುತ್ತೂರಲ್ಲಿ ಖಾಸಗಿ ಬಸ್, ಕಾರುಗಳಲ್ಲೇ ಸಂಚಾರ: ವಲಯ ವ್ಯಾಪ್ತಿಯಲ್ಲಿಯೂ ಕೆಎಸ್‌ಆರ್‌ಟಿಸಿ ಬಸ್ಸುಗಳು ರಸ್ತೆಗೆ ಇಳಿಯಲಿಲ್ಲ. ಪರಿಣಾಮ, ಗ್ರಾಮಾಂತರ ಭಾಗಗಳಲ್ಲಿ ಪ್ರಯಾಣಿಕರು ಪರದಾಡಬೇಕಾಯಿತು. ಬೇರೆ ಊರುಗಳಿಂದ ಬಂದ ಪ್ರಯಾಣಿಕರು ಊರಿಗೆ ತೆರಳಲು ಖಾಸಗಿ ವಾಹನಗಳನ್ನು ಅವಲಂಬಿಸಿದರು. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಬಳಿ ಖಾಸಗಿ ಟೂರಿಸ್ಟ್ ವಾಹನಗಳು ಪ್ರಯಾಣಿಕರನ್ನು ಕರೆದೊಯ್ದವು. ಕಾವು, ಈಶ್ವರಮಂಗಲ, ಉಪ್ಪಿನಂಗಡಿ, ಮಂಗಳೂರು, ವಿಟ್ಲ, ಪಾಣಾಜೆ ಕಡೆಗಳಿಗೆ ಖಾಸಗಿ ಬಸ್‌ಗಳು ಸಂಚಾರ ಮಾಡಿವೆ. ವಿಟ್ಲ ಕಡೆ ಟೂರಿಸ್ಟ್ ಕಾರುಗಳು ಬಾಡಿಗೆಗೆ ಸಂಚರಿಸಿದವು. ಸುಳ್ಯ, ಬೆಳ್ತಂಗಡಿ ಹಾಗೂ ಮಂಗಳೂರಿಗೆ ಖಾಸಗಿ ಬಸ್ ಸಂಚಾರ ಹೆಚ್ಚು ಚುರುಕಿನಿಂದಿತ್ತು. ಬಹುತೇಕ ಜನ ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಮುಂದೆ ಬಸ್ಸುಗಳಿಗೆ ಕಾಯುತ್ತಿದ್ದರು. ಆದರೆ, ಖಾಸಗಿ ಬಸ್‌ಗಳು ಸಾರ್ವಜನಿಕರಿಗೆ ಸೇವೆ ನೀಡಿದವು. ಈ ಮಧ್ಯೆ ಕೇರಳ ಸರ್ಕಾರದ ಸರ್ಕಾರಿ ಬಸ್ ಎಂದಿನಂತೆ ಪುತ್ತೂರಿನಿಂದ ಓಡಾಟ ನಡೆಸುತ್ತಿದ್ದು, ವಿಟ್ಲ ಸೇರಿದಂತೆ ಹಲವು ಭಾಗದ ಜನರು ಇದರ ಸದುಪಯೋಗ ಪಡೆದುಕೊಂಡರು.

ಉಡುಪಿ ಕೆಎಸ್‌ಆರ್‌ಟಿಸಿ ಸ್ತಬ್ಧ: ಉಡುಪಿ ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸೇವೆ ಸಂಪೂರ್ಣ ಸ್ತಬ್ಧಗೊಂಡಿದೆ. ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಬಸ್ಸುಗಳಿಲ್ಲದೆ ಬಿಕೋ ಎನ್ನುತ್ತಿತ್ತು. ಪರ್ಯಾಯವಾಗಿ ಖಾಸಗಿ ಬಸ್ ಸೇವೆಯ ಪ್ರಮಾಣ ಹೆಚ್ಚಿಸಿದ ಕಾರಣ, ಸಾರ್ವಜನಿಕರಿಗೆ ಮುಷ್ಕರ ಬಿಸಿ ಅಷ್ಟಾಗಿ ತಟ್ಟಿಲ್ಲ.

ಉಡುಪಿ 120, ಕುಂದಾಪುರ 108 ಸರ್ಕಾರಿ ಬಸ್ಸುಗಳು ಸಂಚರಿಸಲಿಲ್ಲ. ಧಾರವಾಡ, ಹುಬ್ಬಳ್ಳಿ, ಹಾವೇರಿ, ರಾಯಚೂರು, ಚಿತ್ರದುರ್ಗ, ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಕುಮಟಾ ಕಡೆಗೆ ಸಂಚರಿಸುವ ಪ್ರಯಾಣಕರಿಗೆ ಸಮಸ್ಯೆಯಾಯಿತು. ದೂರದ ಊರುಗಳಿಗೆ ಬಸ್ ವ್ಯವಸ್ಥೆ ಇರಲಿಲ್ಲ. ಉಡುಪಿ ಡಿಪೋ ಕೆಎಸ್ಸಾರ್ಟಿಸಿಯ ಎಲ್ಲ 55 ರೂಟ್ ಬಸ್ಸುಗಳು, ಕುಂದಾಪುರ ಡಿಪೋ 45 ರೂಟ್ ಬಸ್ಸುಗಳು ಸ್ಥಗಿತವಾಗಿದ್ದವು. ಚಾಲಕ, ನಿರ್ವಾಹಕ ಸಹಿತ ಎಲ್ಲ 380 ಸಿಬ್ಬಂದಿ ಮುಷ್ಕರದಲ್ಲಿ ಭಾಗಿಯಾಗಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ನಿಟ್ಟೂರಿನ ಕೆಎಸ್ಸಾರ್ಟಿಸಿ ಡಿಪೋದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ತುಕಡಿ ಮತ್ತು ಹೊಯ್ಸಳ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು.

ಹೆಚ್ಚುವರಿ 22 ಖಾಸಗಿ ಬಸ್ಸುಗಳು: ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಒಳಗೆ ಪ್ರವೇಶ ಮಾಡಿದ ಖಾಸಗಿ ಬಸ್ಸುಗಳು, ಪ್ರಯಾಣಿಕರಿಗೆ ಸೇವೆ ನೀಡಿದವು. 22 ಹೆಚ್ಚುವರಿ ಖಾಸಗಿ ಬಸ್ಸುಗಳು ರಸ್ತೆಗಿಳಿದಿವೆ ಎಂದು ಬಸ್ ಮಾಲೀಕರ ಒಕ್ಕೂಟದ ಖಜಾಂಚಿ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದರು. ಜನರಿಗೆ ಸಮಸ್ಯೆಯಾಗದಂತೆ ಸರಿಯಾದ ಸಮಯಕ್ಕೆ, ಎಂದಿನ ದರದಂತೆ ಖಾಸಗಿಯಿಂದ ಸಾರಿಗೆ ಸೇವೆ ನೀಡಲಾಗಿದೆ. ಶಿರಸಿ, ಕುಮಟಾ, ಭಟ್ಕಳ ಭಾಗಕ್ಕೆ ಹಗಲು ಬಸ್ ಇಲ್ಲದ ಕಾರಣ ಹಲವಾರು ಪ್ರಯಾಣಿಕರು ಪರದಾಡುವಂತಾಗಿದೆ. ಗುರುವಾರ ಪರಿಶೀಲಿಸಿ, ಬಸ್ ವ್ಯವಸ್ಥೆ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net