

ಮಂಗಳೂರು/ಉಡುಪಿ: ಕೆಎಸ್‌ಆರ್‌ಟಿಸಿ ನೌಕರರು ಮುಷ್ಕರಕ್ಕೆ ಮುಂದಾಗಿರುವ ಹಿನ್ನೆಲೆಯಲ್ಲಿ ಉಭಯ ಜಿಲ್ಲೆಗಳಲ್ಲಿ ಸರ್ಕಾರಿ ಬಸ್ ಸಂಚಾರ ಸ್ಥಗಿತ ಬಹುತೇಕ ಖಚಿತವಾಗಿದೆ. ಆದರೆ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಖಾಸಗಿ ಬಸ್‌ಗಳನ್ನು ಓಡಿಸಲಾಗುವುದು ಎಂದು ರಾಜ್ಯ ಬಸ್ ಮಾಲೀಕರ ಒಕ್ಕೂಟ ತಿಳಿಸಿದೆ.
ವೇತನ ಪರಿಷ್ಕರಣೆ ಬೇಡಿಕೆ ಬಗ್ಗೆ ಎಲ್ಲ ಸಂಘಟನೆಗಳ ನಿಲುವು ಏಕರೀತಿಯಾಗಿದ್ದರೂ, ಮುಷ್ಕರಕ್ಕೆ ಕರೆ ನೀಡಿರುವ ಸಂಘಟನೆಯ ಎಲ್ಲ ನಿಲುವುಗಳ ಬಗ್ಗೆ ಇತರ ಕಾರ್ಮಿಕ ಸಂಘಟನೆಗಳು ಸಹಮತ ಹೊಂದಿಲ್ಲ. ಆದರೆ ಕೆಎಸ್‌ಆರ್‌ಟಿಸಿ ನೌಕರರ ಪೈಕಿ ಹೆಚ್ಚಿನವರು ಉತ್ತರ ಕರ್ನಾಟಕದವರು. ಅವರು ಮುಷ್ಕರಕ್ಕೆ ಬೆಂಬಲವಾಗಿರುವ ಹಿನ್ನೆಲೆಯಲ್ಲಿ ಬುಧವಾರ ನಿಗಮಗಳ ಬಸ್ ಸಂಚಾರ ಸುಲಭವಿಲ್ಲ. ರಾಜ್ಯದ ಇತರ ಜಿಲ್ಲೆಗಳಲ್ಲಿ ಮುಷ್ಕರ ಬಿಗಿಗೊಂಡರೆ ಒಟ್ಟು ಸಂಚಾರ ವ್ಯವಸ್ಥೆಯಲ್ಲಿ ವ್ಯತ್ಯಯವಾಗಲಿದೆ.
ಮಂಗಳೂರು ಮತ್ತು ಪುತ್ತೂರು ಕೆಎಸ್‌ಆರ್‌ಟಿಸಿ ವಿಭಾಗಗಳಲ್ಲಿ ನೂರಾರು ಬಸ್‌ಗಳು ಗ್ರಾಮಾಂತರ, ನಗರ ಹಾಗೂ ದೂರದ ಊರುಗಳಿಗೆ ಸಂಚರಿಸುತ್ತಿದ್ದು, ಈ ಪೈಕಿ ಮಂಗಳವಾರವೇ ಕೆಲವು ನೌಕರರು ಕರ್ತವ್ಯದಿಂದ ವಿಮುಖರಾಗಿದ್ದರಿಂದ ಕೆಲವು ರೂಟ್‌ಗಳಲ್ಲಿ ಬಸ್‌ಗಳ ಟ್ರಿಪ್ ಕಡಿತಗೊಳಿಸಲಾಗಿತ್ತು. ಬುಧವಾರ ಎರಡೂ ವಿಭಾಗಗಳಲ್ಲಿ ಹೆಚ್ಚಿನ ನೌಕರರು ಮುಷ್ಕರದಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದಾರೆ. ಕೆಲವು ನೌಕರ ಸಂಘಟನೆಗಳು ಮುಷ್ಕರದಲ್ಲಿ ಭಾಗವಹಿಸದೆ ಇರಲು ನಿರ್ಧರಿಸಿದ್ದು, ಇವರನ್ನು ಬಳಸಿ ಬಸ್‌ಗಳನ್ನು ಓಡಿಸಲು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
‘ಕಾಸರಗೋಡು ಮತ್ತು ಮಂಗಳೂರು ನಡುವೆ ಕೇರಳ ಮತ್ತು ರಾಜ್ಯಗಳ ತಲಾ ಶೇ.50 ಬಸ್‌ಗಳು ಇರುವುದರಿಂದ ಸಮಸ್ಯೆಯಾಗದು. ನಿಗಮದ ಬಸ್‌ಗಳ ಓಡಾಟಕ್ಕೆ ಪೂರ್ಣ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ಎಸ್.ಅರುಣ್ ಪ್ರತಿಕ್ರಿಯಿಸಿದ್ದಾರೆ.
‘ಹೊರಜಿಲ್ಲೆಗಳ ಕೆಲವು ನೌಕರರು ಮಂಗಳವಾರವೇ ಕರ್ತವ್ಯಕ್ಕೆ ಹಾಜರಾಗಿಲ್ಲ. ಆದರೂ ನಾವು ಸ್ಥಳೀಯರು ಮತ್ತು ಇತರ ನೌಕರರನ್ನು ಬಳಸಿ ಶೇ.75ರಷ್ಟು ಬಸ್‌ಗಳನ್ನು ಓಡಿಸಿದ್ದೇವೆ. ಬುಧವಾರವೂ ಇದೇ ರೀತಿ ಬಸ್ ಸಂಚಾರಕ್ಕೆ ಸಿದ್ಧತೆ ನಡೆಸಿದ್ದೇವೆ’ ಎಂದು ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ ತಿಳಿಸಿದ್ದಾರೆ.
ಪ್ರಯಾಣಿಕರಿಗೆ ತೊಂದರೆಯಾಗದಂತೆ ಕ್ರಮ: ಸಾರ್ವಜನಿಕರಿಗೆ ತೊಂದರೆಯಾಗದಂತೆ ಹೆಚ್ಚುವರಿ ಬಸ್ಸುಗಳನ್ನು ಓಡಿಸಲಾಗುವುದು ಎಂದು ರಾಜ್ಯ ಖಾಸಗಿ ಬಸ್ ಮಾಲೀಕರ ಒಕ್ಕೂಟ ತಿಳಿಸಿದೆ. ಖಾಸಗಿ ಬಸ್ಸು ಮಾಲೀಕರ ಒಕ್ಕೂಟ ರಾಜ್ಯ ಸರ್ಕಾರದ ಪರವಾಗಿದ್ದು, ಒಕ್ಕೂಟದ ನಿರ್ಣಯದಂತೆ ಪ್ರಯಾಣಿಕರ ಹಿತದೃಷ್ಟಿಯಿಂದ ನಾವು ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮುಷ್ಕರಕ್ಕೆ ಬೆಂಬಲ ನೀಡುತ್ತಿಲ್ಲ. ರಾಜ್ಯಾದ್ಯಂತ 8 ಸಾವಿರ ಸರ್ವಿಸ್ ಬಸ್ಸುಗಳು, 20 ಸಾವಿರ ಮ್ಯಾಕ್ಸಿಕ್ಯಾಬ್, 4 ಸಾವಿರ ಆಲ್ ಇಂಡಿಯಾ ಸರ್ವಿಸ್ ಬಸ್‌ಗಳು ನಾಳೆಯಿಂದ ಪ್ರಯಾಣಿಕರಿಗೆ ಸಾರಿಗೆ ಸೇವೆ ನೀಡಲು ಸಿದ್ಧವಿದೆ ಎಂದು ಒಕ್ಕೂಟದ ಖಜಾಂಚಿ ಕುಯಿಲಾಡಿ ಸುರೇಶ್ ನಾಯಕ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದಲ್ಲಿ ತಮಿಳುನಾಡು ಮಾದರಿಯಲ್ಲಿ ಶೇ.60 ಮತ್ತು ಶೇ.40ರಂತೆ ಸರ್ಕಾರಿ ಮತ್ತು ಖಾಸಗಿ ಸೇವೆಗೆ ಪರ್ಮಿಟ್ ಕೊಡಬೇಕು. ಸರ್ಕಾರಕ್ಕೆ ಖಾಸಗಿ ಬಸ್‌ಗಳಿಂದ ತೆರಿಗೆ ರೂಪದಲ್ಲಿ ಆದಾಯವಿದೆ. ಈವರೆಗೆ ನಾವು ಸರ್ಕಾರದ ಅನುದಾನವಿಲ್ಲದೆ ಬಸ್ಸುಗಳನ್ನು ಓಡಿಸುತ್ತಿದ್ದೇವೆ ಎಂದು ಹೇಳಿದರು.
ಜಿಲ್ಲಾ ಬಸ್ ಮಾಲೀಕರ ಸಂಘದ ಮುಖಂಡರಾದ ಪ್ರದೀಪ್ ಕೆ. ಚಂದನ್ ವಳಕಾಡು, ಸುದಾಕರ್ ಕೆ.ಕಲ್ಮಾಡಿ ಸುದ್ದಿಗೋಷ್ಠಿಯಲ್ಲಿದ್ದರು.
ದ.ಕ. 30 ಬಸ್‌ಗಳಿಗೆ ಅನುಮತಿ: ಮಂಗಳೂರು ಆರ್‌ಟಿಒ ಕಚೇರಿಯಲ್ಲಿ ಖಾಸಗಿ ಬಸ್ ಮಾಲೀಕರ ತುರ್ತು ಸಭೆ ಕರೆದು ಕೆಎಸ್ಸಾರ್ಟಿಸಿ ಬಸ್‌ಗಳು ಸಾಗುವ ಎಲ್ಲ ಮಾರ್ಗಗಳಲ್ಲಿ ಖಾಸಗಿ ಬಸ್‌ಗಳಿಗೆ ತಾತ್ಕಾಲಿಕ ಪರ್ಮಿಟ್ ನೀಡಲು ತೀರ್ಮಾನಿಸಲಾಯಿತು. ಮುಖ್ಯವಾಗಿ ಮಂಗಳೂರು-ಧರ್ಮಸ್ಥಳ, ಮಂಗಳೂರು-ಸುಬ್ರಹ್ಮಣ್ಯ ರೂಟ್‌ನಲ್ಲಿ ಸರ್ಕಾರಿ ಬಸ್ ಓಡಾಟ ನಿಲ್ಲಿಸಿದರೆ ಅಲ್ಲಿಗೆ ಖಾಸಗಿ ಬಸ್‌ಗಳು ತಾತ್ಕಾಲಿಕ ಪರ್ಮಿಟ್‌ನಲ್ಲಿ ಓಡಾಟಕ್ಕೆ ಸಿದ್ಧತೆ ನಡೆಸಿವೆ. ‘ಕಾಂಟ್ರಾಕ್ಟ್ ಕ್ಯಾರಿಯೇಜ್ ಬಸ್ ಜತೆಗೆ ಸುಮಾರು 30 ಖಾಸಗಿ ಬಸ್‌ಗಳ ಓಡಾಟಕ್ಕೆ ಜಿಲ್ಲಾಡಳಿತ ಅನುಮತಿ ನೀಡಿದೆ’ ರಾಜ್ಯ ಖಾಸಗಿ ಬಸ್ ಮಾಲೀಕರ ಒಕ್ಕೂಟದ ಅಧ್ಯಕ್ಷ ರಾಜವರ್ಮ ಬಲ್ಲಾಳ್ ತಿಳಿಸಿದ್ದಾರೆ.