ಹೈವೇಯಲ್ಲೇ ಬಸ್‌ಗಳ ಠಿಕಾಣಿ!

gan (26)
Published on

ವಿಜಯವಾಣಿ ಸುದ್ದಿಜಾಲ ಕುಂದಾಪುರ

ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲೇ ಬಸ್‌ಗಳನ್ನು ನಿಲುಗಡೆಗೊಳಿಸುವುದರಿಂದ ನಿತ್ಯವೂ ಒಂದಿಲ್ಲೊಂದು ಅಪಘಾತವಾಗುತ್ತಲೇ ಇದೆ. ಜತೆಗೆ ಹೆದ್ದಾರಿಗೆ ಅಳವಡಿಸಿದ ಬ್ಯಾರಿಕೇಡನ್ನು ರಾತ್ರಿ ವೇಳೆ ಬದಿಗೆ ಸರಿಸದೇ ಇರುವುದರಿಂದ ಅವಘಡಗಳು ಹೆಚ್ಚುತ್ತಲೇ ಇವೆ.

ಖಾಸಗಿ ಬಸ್ಸುಗಳು ಹೆದ್ದಾರಿಯಲ್ಲೇ ನಿಲುಗಡೆಗೊಳಿಸುತ್ತಿದ್ದು, ಅಪಘಾತಗಳಿಗೆ ಇದು ಪ್ರಮುಖ ಕಾರಣವಾಗಿದೆ. ಸ್ಥಳೀಯವಾಗಿ ಯಾವುದೇ ಬಸ್ ನಿಲ್ದಾಣಗಳಲ್ಲದಿರುವುದರಿಂದ ಪ್ರಯಾಣಿಕರೂ ಹೆದ್ದಾರಿಯಲ್ಲೇ ಬಸ್‌ಗೆ ಕಾಯುತ್ತಿರುತ್ತಾರೆ. ಹೆದ್ದಾರಿಯಲ್ಲಿ ಬಸ್ ನಿಲುಗಡೆಗೊಳಿಸದಂತೆ ಸ್ಥಳೀಯ ಪೊಲೀಸ್ ಠಾಣೆಯಿಂದ ಈಗಾಗಲೇ ಸೂಚನೆ ನೀಡಿಲಾಗಿತ್ತು. ಜತೆಗೆ ಕುಂದಾಪುರದಿಂದ ಕೋಟೇಶ್ವರದ ತನಕ ಸರ್ವೀಸ್ ರಸ್ತೆಯಲ್ಲಿ ಖಾಸಗಿ ಬಸ್ ಸಂಚರಿಸಲು ಸ್ಥಳೀಯ ಸಂಚಾರಿ ಠಾಣೆ ಪೊಲೀಸರು ಕ್ರಮಕೈಗೊಂಡಿದ್ದರೂ ಇಕ್ಕಟ್ಟು ರಸ್ತೆ, ವಾಹನ ಅಡ್ಡಾದಿಡ್ಡಿ ಪಾರ್ಕಿಂಗ್‌ನಿಂದ ವ್ಯವಸ್ಥೆ ವಿಫಲವಾಯಿತು.

ಡಿವೈಡರ್‌ಗಳಿಂದಲೇ ಅಪಘಾತ: ಬೈಂದೂರಿನ ಶಿರೂರಿನಿಂದ ಉಡುಪಿ ತನಕ ರಾಷ್ಟ್ರೀಯ ಹೆದ್ದಾರಿಯ ವಿವಿಧೆಡೆಗಳಲ್ಲಿ ಡಿವೈಡರ್‌ಗಳ ಸಮೀಪವೇ ಬ್ಯಾರಿಕೇಡ್ ಇಡಲಾಗುತ್ತಿದ್ದು, ಇಲ್ಲಿ ನಿತ್ಯವೂ ಅಪಘಾತ ನಡೆಯುತ್ತದೆ. ಇತ್ತೀಚೆಗೆಷ್ಟೇ ಅಂಕದಕಟ್ಟೆ ಸಮೀಪ ಸಂಚರಿಸುತ್ತಿದ್ದ ಲಾರಿಯೊಂದು ಬ್ಯಾರಿಕೇಡ್ ಕಾಣದೆ ಸಮೀಪದ ಡಿವೈಡರ್ ಏರಿ ಸರ್ವೀಸ್ ರಸ್ತೆಗೆ ಇಳಿದಿತ್ತು. ಆದರೂ ಅಪಾಯಕಾರಿ ರೂಪದಲ್ಲಿರುವ ಬ್ಯಾರಿಕೇಡ್ ಸ್ಥಳ ಬದಲಾಯಿಸುವ ಕುರಿತು ಸಂಬಂಧಿತ ಇಲಾಖೆ ಚಿಂತಿಸಿಲ್ಲ.

ಸೂಕ್ತ ನಕ್ಷೆಯಿಲ್ಲದೆ ಹೈವೇ ಕಾಮಗಾರಿ

ಹೆದ್ದಾರಿ ನಿರ್ಮಾಣ ಸಂದರ್ಭ ಸೂಕ್ತ ನಕ್ಷೆ ರೂಪಿಸದೇ ಇರುವುದರಿಂದ ಸ್ಥಳೀಯ ಊರು, ಜಂಕ್ಷನ್, ಶಾಲೆ ಸಹಿತ ಪ್ರಮುಖ ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುವಲ್ಲಿ ಅಸಾಧ್ಯವಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಕುಂದಾಪುರ ನಗರ ಸಂಪರ್ಕಿಸಲು ನೇರ ರಸ್ತೆಯೇ ಇಲ್ಲದಿರುವುದರಿಂದ ವಾಹನ ಸವಾರರು ಪ್ರಾಯಾಸಪಡುತ್ತಿದ್ದಾರೆ. ಜತೆಗೆ ವಿಭಜಕ ಬದಲಾಯಿಸಲು ಸೂಕ್ತ ತಿರುವು ವ್ಯವಸ್ಥೆ ಇಲ್ಲದಿದ್ದು, ವಾಹನ ಸವಾರರು ಮತ್ತೊಂದು ಬದಿಗೆ ತೆರಳಬೇಕಾದರೆ 200 ಮೀಟರ್ ಹೆಚ್ಚುವರಿ ದೂರ ಕ್ರಮಿಸಬೇಕಾದ ದುಸ್ಥಿತಿ ಇದೆ.

ಹೆದ್ದಾರಿಯಲ್ಲಿ ಬಸ್‌ಗಳು ಪ್ರಯಾಣಿಕರು ಹತ್ತಿ ಇಳಿಸುವುದರಿಂದ ಅಪಘಾತಗಳು ಸಂಭವಿಸದಂತೆ ಎಚ್ಚರ ವಹಿಸಬೇಕಿದೆ. ಬಸ್‌ನವರಿಗೆ ಈಗಾಗಲೇ ಸೂಚನೆ, ಎಚ್ಚರಿಕೆ ನೀಡಲಾಗಿದೆ. ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. - ಪ್ರಸಾದ್, ಎಸ್‌ಐ, ಕುಂದಾಪುರ ಸಂಚಾರ ಠಾಣೆ https://www.vijayavani.net/the-misdeeds-of-drug-traffickers-in-udupi https://www.vijayavani.net/dravida-brahmin-parishad-mahasabha

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net