

ಸವಣೂರ: ತಾಲೂಕಿನ ಗೋನಾಳ, ಇಚ್ಚಂಗಿ, ಹೊಸರಿತ್ತಿ, ಕಲಕೋಟಿ, ಶಿಗ್ಲಿ, ನಾಯಿಕೆರೂರ, ಕಡಕೋಳ, ಹತ್ತಿಮತ್ತೂರ, ಜೇಕಿನಕಟ್ಟಿ, ಕಾರಡಗಿ ಮಾರ್ಗಗಳಲ್ಲಿ ರಸ್ತೆಗಳು ತುಂಬಾ ಹದಗೆಟ್ಟಿವೆ. ಹಾಗಾಗಿ, ಅ.20ರಿಂದ ಈ ಮಾರ್ಗದಲ್ಲಿ ಸಂಚರಿಸುವ ಸವಣೂರ ಘಟಕದ ಎಲ್ಲ ಬಸ್‌ಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಪಡಿಸಿ ಸಾರಿಗೆ ಸಂಸ್ಥೆ ಆದೇಶ ಹೊರಡಿಸಿದೆ. ಈ ಮೂಲಕ ಮುಖ್ಯಮಂತ್ರಿಯವರ ಕ್ಷೇತ್ರದಲ್ಲೇ ಸಾರಿಗೆ ಬಸ್‌ಗಳು ಮೌನ ಪ್ರತಿಭಟನೆ ಮುಂದಾಗಿವೆ. ಈ ಭಾಗದ ರಸ್ತೆ ತೀರಾ ಹದಗೆಟ್ಟಿದೆ. ಒಂದು ಕಡೆ ಸಂಚರಿಸಿದರೆ ವಾಪಸ್ ಮತ್ತೊಂದು ಕಡೆಗೆ ಹೋಗುವುದೇ ಅನುಮಾನ ಎಂಬಂತಾಗಿದೆ. ರಸ್ತೆಗಳಲ್ಲಿ ಮೊಣಕಾಲು ಉದ್ದದಷ್ಟು ದೊಡ್ಡ ದೊಡ್ಡ ಗುಂಡಿಗಳು ಸೃಷ್ಟಿಯಾಗಿವೆ. ಮಳೆ ಬಂದರಂತೂ ವಾಹನ ಸವಾರರ ಕಷ್ಟ ಹೇಳತೀರದು. ರಸ್ತೆ ಗುಂಡಿಗಳಿಂದ ಇಲ್ಲಿ ಆಗಾಗ ಅಪಘಾತಗಳು ಸಾಮಾನ್ಯ ಎಂಬಂತಾಗಿದೆ. ಈ ಭಾಗದಲ್ಲಿ ಸಂಚರಿಸುವ ಸಾರಿಗೆ ಬಸ್ ಚಾಲಕರು, ನಿರ್ವಾಹಕರು ನಿತ್ಯ ನರಕದರ್ಶನ ಮಾಡುತ್ತಾರೆ. ಆಗಾಗ ಬಸ್‌ಗಳು ದುರಸ್ತಿಗೆ ಒಳಗಾಗುವುದು ಸಾಮಾನ್ಯವಾಗಿದೆ. ಬಸ್‌ನಲ್ಲಿ ಸಂಚರಿಸುವ ಮಹಿಳೆಯರು, ಮಕ್ಕಳು, ವೃದ್ದರು ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ.
ಮುಖ್ಯಮಂತ್ರಿಯವರ ಕ್ಷೇತ್ರದ ರಸ್ತೆಗಳಿಗೆ ಇಂತಹ ದುಸ್ತಿತಿ ಬಂದಿದ್ದರೂ ಅಧಿಕಾರಿಗಳಾಗಲೀ, ಸ್ಥಳೀಯ ಜನಪ್ರತಿನಿಧಿಗಳಾಗಲೀ ಇತ್ತ ಕಡೆ ನೋಡುತ್ತಿಲ್ಲ. ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಇದರಿಂದ ಏನಾದರೂ ಅವಘಡ ಸಂಭವಿಸಿದರೆ ಯಾರು ಹೊಣೆ ಎಂಬ ಚಿಂತೆಗೀಡಾದ ಸಾರಿಗೆ ಸಂಸ್ಥೆಯ ಸವಣೂರ ಘಟಕ ವ್ಯವಸ್ಥಾಪಕರು ಇಂತಹದ್ದೊಂದು ನೋಟಿಸ್ ಹೊರಡಿಸಿದ್ದಾರೆ.
ಕೋಟ್:
ಸವಣೂರು ತಾಲೂಕಿನ ಕೆಲ ಹಳ್ಳಿಗಳ ರಸ್ತೆಗಳು ತೀರಾ ಹಾಳಾಗಿವೆ. ಇದರಿಂದ ಅನೇಕ ಬಸ್‌ಗಳು ದುರಸ್ತಿಗೆ ಒಳಗಾಗಿವೆ. ಬಸ್‌ನಲ್ಲಿ ಶಾಲಾ- ಕಾಲೇಜು ವಿದ್ಯಾರ್ಥಿಗಳು ನಿತ್ಯ ಸಂಚರಿಸುತ್ತಾರೆ. ಏನಾದರೂ ಅನಾಹುತ ಸಂಭವಿಸುವ ಭೀತಿಯೂ ಇದೆ. ಹಾಗಾಗಿ, ಈ ಭಾಗದಲ್ಲಿ ತಾತ್ಕಾಲಿಕವಾಗಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ.
ವಿ.ಎಸ್.ಜಗದೀಶ, ವಿಭಾಗೀಯ ನಿಯಂತ್ರಕ, ಸಾರಿಗೆ ಇಲಾಖೆ