

ಹರಪನಹಳ್ಳಿ: ಬಸ್ ನಿಲುಗಡೆಗೆ ಒತ್ತಾಯಿಸಿ ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಶುಕ್ರವಾರ ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್‌ನಿಂದ ಸಾರಿಗೆ ನಿರೀಕ್ಷಕ ಶಂಕರ್‌ಗೆ ಮನವಿ ಸಲ್ಲಿಸಿದರು.
ಎಐವೈಎಫ್ ರಾಜ್ಯ ಕಾರ್ಯದರ್ಶಿ ಎಚ್.ಎಂ.ಸಂತೋಷ್ ಮಾತನಾಡಿ, ಶಿಕ್ಷಣಕ್ಕಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಹಾಗೂ ಆದರ್ಶ ವಿದ್ಯಾಲಯ ಸೇರಿ ವಿವಿಧ ಶಾಲಾ-ಕಾಲೇಜುಗಳಿಗೆ ಬರುತ್ತಾರೆ. ಆದರೆ, ಬಸ್ ನಿಲುಗಡೆ ಮಾಡದ ಕಾರಣ ಪರದಾಡುವಂತಾಗಿದೆ.
ಪ್ರತಿನಿತ್ಯ ಹರಿಹರ ಮಾರ್ಗವಾಗಿ ತೆರಳುವ ಬಸ್ ಚಾಲಕರು ಮತ್ತು ಕಂಡಕ್ಟರ್‌ಗಳಿಗೆ ಕಾಲೇಜು ಬಳಿ ನಿಲುಗಡೆ ಮಾಡಿ ಎಂದು ಕೋರಿದರೂ ನಿಲ್ಲಿಸುತ್ತಿಲ್ಲ. ಹೀಗಾಗಿ ವಿದ್ಯಾರ್ಥಿಗಳು ತರಗತಿಗಳಿಗೆ ತಡವಾಗಿ ತೆರಳುವಂತಾಗಿದೆ. ಇದರಿಂದ ಅವರ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತಿದೆ.
ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಹರಿಹರ, ಶಿವಮೊಗ್ಗ ಮಾರ್ಗವಾಗಿ ಸಂಚರಿಸುವ ಬಸ್‌ಗಳು ಪಾಲಿಟೆಕ್ನಿಕ್ ಕಾಲೇಜು ಬಳಿ ನಿಲುಗಡೆ ಮಾಡಬೇಕು. ಅಲ್ಲಿ ಕೋರಿಕೆ ಮೇರೆಗೆ ನಿಲುಗಡೆ ನಾಮಫಲಕ ಹಾಕಬೇಕು. ನಿರ್ಲಕ್ಷೃವಹಿಸಿದರೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಬಸ್ ನಿಲ್ದಾಣದಲ್ಲಿ ಮೂಲಸೌಕರ್ಯ ಒದಗಿಸಬೇಕು. ಶುದ್ಧ ನೀರಿನ ಘಟಕ ದುರಸ್ತಿ ಮಾಡಿಸಬೇಕು. ದ್ವಿಚಕ್ರ ವಾಹನಗಳ ನಿಲುಗಡೆಗೆ ಮನಬಂದಂತೆ ಹಣ ಸುಲಿಗೆ ಮಾಡಲಾಗುತ್ತಿದ್ದು, ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.