

ಮಂಡ್ಯ: ತಾಲೂಕಿನ ಹೊನಗಾನಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಹಕ್ಕುಪತ್ರ ವಿತರಣಾ ಸಮಾರಂಭದ ವೇಳೆ ಬಸ್ ನಿಲ್ದಾಣ ಮಾಡಿಕೊಡುವಂತೆ ಗ್ರಾಮಸ್ಥರು ಮಾಡಿದ ಮನವಿಗೆ ಶಾಸಕ ರವಿಕುಮಾರ್ ಗಣಿಗ ಸ್ಪಂದಿಸಿದ್ದಾರೆ. ಅದರಂತೆ 5 ಲಕ್ಷ ರೂ ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದರು.
ನಿವೇಶನ ಹಂಚಿಕೆ ಕಾರ್ಯಕ್ರಮದಲ್ಲಿ ಶಾಸಕ ರವಿಕುಮಾರ್ ಭಾಗವಹಿಸಿದ್ದರು. ಈ ವೇಳೆ ಬಸ್ ನಿಲ್ದಾಣದ ಅವಶ್ಯಕತೆ ಬಗ್ಗೆ ಗ್ರಾಮಸ್ಥರು ತಿಳಿಸಿದ್ದರು. ಆ ವೇಳೆ ಸ್ಪಂದನೆ ನೀಡಿದ್ದ ಶಾಸಕ, ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಈ ಹಿನ್ನೆಲೆಯಲ್ಲಿ ಗ್ರಾಮದ ಮುಖಂಡರು ರವಿಕುಮಾರ್ ಗಣಿಗ ಅವರನ್ನು ಅಭಿನಂದಿಸಿದರು.
ಇದಲ್ಲದೆ ತಾಲೂಕಿನ ಕೆರಗೋಡು ಹೋಬಳಿಯ ಕೆರಗೋಡು, ಮಾರಗೌಡನಹಳ್ಳಿ ಗ್ರಾಮದಲ್ಲಿ 1.55 ಕೋಟಿ ರೂ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು. ಬಳಿಕ ಮಾತನಾಡಿದ ಅವರು, ಹೊನಗಾನಹಳ್ಳಿ ಗ್ರಾಮದ ಸಮೀಪ 5 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸಾರ್ವಜನಿಕ ಬಸ್ ನಿಲ್ದಾಣ, ಕೆರಗೋಡು ಗ್ರಾಮದ ಪರಿಶಿಷ್ಟ ಜಾತಿ ಕಾಲನಿಯಲ್ಲಿ ಅಂದಾಜು 50 ಲಕ್ಷ ರೂ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಮತ್ತು ಮಾರಗೌಡನಹಳ್ಳಿ ಪರಿಶಿಷ್ಟ ಜಾತಿ ಕಾಲನಿ ವ್ಯಾಪ್ತಿಯ ರಸ್ತೆ ಅಭಿವೃದ್ಧಿಗೆ 1 ಕೋಟಿ ರೂ. ವಿನಿಯೋಗಿಸಲಾಗುತ್ತಿದೆ ಎಂದು ತಿಳಿಸಿದರು.
ಮಂಡ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ದಿ ಕಾರ್ಯಗಳು ಹಂತ ಹಂತವಾಗಿ ವೇಗದಲ್ಲಿ ಸಾಗುತ್ತಿವೆ. ಇನ್ನು ಕಾವೇರಿ ನೀರಾವರಿ ನಿಗಮದಿಂದ 100 ಕೋಟಿ ರೂ ಬಿಡುಗಡೆಗೆ ಸಹಕಾರ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಈ ಅನುದಾನದಲ್ಲಿ 7 ಕೋಟಿ ರೂಗಳನ್ನು ಹೇಮಾವತಿ ನಾಲೆ ಹಾಗೂ 93 ಕೋಟಿ ರೂಗಳನ್ನು ವಿಶ್ವೇಶ್ವರಯ್ಯ ನಾಲೆ ಅಭಿವೃದ್ದಿಗೆ ಬಳಸಲಾಗುವುದು. ಕಾವೇರಿ ನೀರಾವರಿ ನಿಗಮದಿಂದ ಕ್ಷೇತ್ರ ವ್ಯಾಪ್ತಿಯ ವಿವಿಧ ನಾಲೆಗಳ ಅಭಿವೃದ್ದಿಗಾಗಿ 250 ಕೋಟಿ ರೂ ಅಂದಾಜು ಟೆಂಡರ್ ಪ್ರಕ್ರಿಯೆ ಮುಗಿಯಲಿದೆ. ಮುಂದಿನ ದಿನಗಳಲ್ಲಿ ವಸತಿ ರಹಿತರಿಗಾಗಿ ಮನೆ ಕಟ್ಟಿ, ಹಕ್ಕು ಪತ್ರಗಳನ್ನು ಹಂತ ಹಂತವಾಗಿ ನೀಡಲಾಗುವುದು ಎಂದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಕುಮಾರ್, ಸುರೇಶ್, ಪ್ರಕಾಶ್ ಇತರರಿದ್ದರು.