

ಮಡಿಕೇರಿ:
ಗ್ರಾಮೀಣ ಪ್ರದೇಶದ ಬಸ್ ತಂಗುದಾಣ, ಸಾರ್ವಜನಿಕ ಶೌಚಗೃಹ ಎಂದರೆ ಸಾಮಾನ್ಯವಾಗಿ ಕಣ್ಣೆದುರು ಮೂಡಿ ಬರುವ ಕಲ್ಪನೆ ಅಷ್ಟಕಷ್ಟೇ ಎನ್ನುವಂತಿರುತ್ತದೆ. ಕೂರಲು ಸಾಧ್ಯವಾಗದ ಆಸನಗಳು, ಮೂಗು ಮುಚ್ಚಿಕೊಂಡು ನಿಲ್ಲಬೇಕಾದ ದುಸ್ಥಿತಿ, ಸುತ್ತಲೂ ಕಳೆಗಿಡಗಳು.. ಹೀಗೆ ಅಸಹ್ಯ ಮೂಡಿಸುವಂಥ ವಾತಾವರಣ ಇರುತ್ತದೆ. ಆದರೆ ಭಾಗಮಂಡಲ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಒಂದು ಬಸ್ ತಂಗುದಾಣ ಮತ್ತು ಸಾರ್ವಜನಿಕ ಶೌಚಗೃಹ ವಿಭಿನ್ನವಾಗಿ ಗಮನ ಸೆಳೆಯುತ್ತಿದೆ.
ಭಾಗಮಂಡಲ ಗ್ರಾ.ಪಂ. ವ್ಯಾಪ್ತಿಯ ಕೋರಂಗಾಲ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ಬಳಿ ಇರುವ ಬಸ್ ತಂಗುದಾಣ ಮತ್ತು ಶೌಚಗೃಹ ಸ್ವಚ್ಛತೆಯ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಜನಪರ ಕಾಳಜಿ ಇರುವ ಉತ್ಸಾಹಿ ಜನಪ್ರತಿನಿಧಿಯೊಬ್ಬ ಮನಸ್ಸು ಮಾಡಿದರೆ ಯಾವ ರೀತಿಯಲ್ಲಿ ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸಬಹುದು ಎನ್ನುವುದಕ್ಕೆ ಮಾದರಿ ಆಗಿರುವ ಈ ಬಸ್ ತಂಗುದಾಣ ಮತ್ತು ಶೌಚಗೃಹಕ್ಕೆ ಆಗಮಿಸಿದವರಿಗೂ ಶುಚಿತ್ವದ ಪಾಠ ಮಾಡುತ್ತಿದೆ. ಇದು ನಿರ್ಮಾಣ ಆಗಿ ಸುಮಾರು ಒಂದೂವರೆ ವರ್ಷ ಆಗಿದ್ದರೂ ಇನ್ನೂ ಹೊಚ್ಚ ಹೊಸದರಂತೆ ಕಂಡುಬರುತ್ತಿರುವುದರ ಹಿಂದೆ ಭಾಗಮಂಡಲ ಗ್ರಾ.ಪಂ. ಅಧ್ಯಕ್ಷ ಕಾಳನ ರವಿ ಅವರ ಇಚ್ಚಾಶಕ್ತಿಯೂ ಆಡಗಿದೆ.
ಕೋರಂಗಾಲ ಗ್ರಾಮದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯಲ್ಲಿ ಕೊಡಗು ಮಾತ್ರವಲ್ಲದೆ ಅಕ್ಕಪಕ್ಕದ ಜಿಲ್ಲೆಗಳ ವಿದ್ಯಾರ್ಥಿಗಳೂ ಓದುತ್ತಿದ್ದಾರೆ. ಹಾಗಾಗಿ ಇಲ್ಲಿ ಪೋಷಕರು ಸೇರಿದಂತೆ ವಿವಿಧ ಕಾರಣಗಳಿಗೆ ಜನರ ಓಡಾಟ ಕಂಡುಬರುತ್ತದೆ. ಸ್ಥಳೀಯ ನಿವಾಸಿಗಳೂ ಬಸ್‌ಗಾಗಿ ಕಾಯಲು ಇದೇ ಸ್ಥಳ ಅವಲಂಭಿಸಿದ್ದಾರೆ. ಈ ಮೊದಲು ಇಲ್ಲಿ ಬಸ್ ತಂಗುದಾಣ ಇಲ್ಲದಿರುವಾಗ ಸಾಕಷ್ಟು ಸಮಸ್ಯೆ ಆಗುತ್ತಿತ್ತು. ಬಸ್‌ಗಾಗಿ ಕಾಯುವವರು ಮಳೆಗಾಲದ ಝಡಿ ಮಳೆ, ಬೇಸಿಗೆಯ ಬಿಸಿಲಿನಲ್ಲಿ ಪರಿತಾಪ ಪಡುತ್ತಿದ್ದರು. ಇದನ್ನು ಗಮನಿಸಿದ ಗ್ರಾ.ಪಂ. ಅಧ್ಯಕ್ಷ ಕಾಳನ ರವಿ ಇಲ್ಲಿಗೊಂದು ಬಸ್ ತಂಗುದಾಣ ಕಟ್ಟಿಸಿಕೊಡಲು ಯೋಚಿಸಿದರು.
ಭಾಗಮಂಡಲದAಥ ಗ್ರಾ.ಪಂ.ಗಳಿಗೆ ಇರುವ ಕಡಿಮೆ ಆದಾಯದಲ್ಲಿ ದೊಡ್ಡ ಮಟ್ಟದ ಯೋಜನೆಗಳನ್ನು ರೂಪಿಸುವುದು ಕಷ್ಟ. ಆದರೂ ಧೈರ್ಯ ಮಾಡಿದ ಕಾಳನ ರವಿ ಬಸ್ ತಂಗುದಾಣದ ಜತೆಯಲ್ಲೇ ಶೌಚಗೃಹ ನಿರ್ಮಾಣದ ಚಿಂತನೆಯನ್ನೂ ನಡೆಸಿ ಕಾರ್ಯರೂಪಕ್ಕೆ ಇಳಿಸಿದರು. ಪಂಚಾಯಿತಿ ಅನುದಾನ 75 ಸಾವಿರ ರೂ., ಕಾವೇರಿ ನೀರಾವರಿ ನಿಗಮದ ಅನುದಾನ 2 ಲಕ್ಷ ರೂ. ಹಾಗೂ ದಾನಿಗಳ ಸಹಕಾರದಿಂದ ಒಟ್ಟು 5.20 ಲಕ್ಷ ರೂ. ವೆಚ್ಚದಲ್ಲಿ ಒಂದೂವರೆ ವರ್ಷದ ಹಿಂದೆ ಇಲ್ಲಿ ಈ ಸುಸಜ್ಜಿತ ಬಸ್ ತಂಗುದಾಣ ಮತ್ತು ಶೌಚಗೃಹ ನಿರ್ಮಿಸಲಾಯಿತು.
ಸಾಮಾನ್ಯವಾಗಿ ಬಸ್ ತಂಗುದಾಣ ಮತ್ತು ಶೌಚಗೃಹ ನಿರ್ಮಾಣ ಮತ್ತು ಉದ್ಘಾಟನೆಗೆ ಇರುವ ಉತ್ಸಾಹ ನಂತರದ ನಿರ್ವಹಣೆ ವಿಷಯಕ್ಕೆ ಬಂದಾಗ ಇರುವುದಿಲ್ಲ. ಹಾಗಾಗಿ ಹೆಚ್ಚಿನ ಕಡೆಗಳಲ್ಲಿ ಗ್ರಾಮೀಣ ಬಸ್ ತಂಗುದಾಣಗಳು ಪ್ರಯಾಣಿಕರು ಉಪಯೋಗಿಸಲು ಆಗದ ಸ್ಥಿತಿಯಲ್ಲಿ ಕಂಡುಬರುತ್ತದೆ. ಇದಕ್ಕೆ ಇಂಥ ತಂಗುದಾಣಗಳನ್ನು ಬಳಸುವವರ ಕೊಡುಗೆಯೂ ಇರುತ್ತದೆ. ಒಂದು ಕಡೆ ಸ್ಥಳೀಯ ಆಡಳಿತ ನಿರ್ಲಕ್ಷಿಸಿದರೆ ಮತ್ತೊಂದು ಕಡೆ ಪ್ರಯಾಣಿಕರೂ ಆದಷ್ಟು ಕೆಡಿಸಿಬಿಟ್ಟಿರುತ್ತಾರೆ. ಆದರೆ ಕೋರಂಗಾಲದ ಬಸ್ ತಂಗುದಾಣಕ್ಕೆ ಅಂಥ ಸ್ಥಿತಿ ಬರಲಿಲ್ಲ.
ಗ್ರಾ.ಪಂ. ಅಧ್ಯಕ್ಷ ಕಾಳನ ರವಿ ವಾರಕ್ಕೆ ಕನಿಷ್ಠ 2 ಬಾರಿ ಈ ಬಸ್‌ತಂಗುದಾಣ ಮತ್ತು ಶೌಚಗೃಹಕ್ಕೆ ಭೇಟಿ ಕೊಡುತ್ತಾರೆ. ಖುದ್ದಾಗಿ ಸ್ವಚ್ಛತೆಯ ನಿಗಾ ವಹಿಸುತ್ತಾರೆ. ಗಲೀಜಾಗಿದ್ದರೆ ತಾವೇ ಸ್ವತಃ ಶುಚಿ ಮಾಡುತ್ತಾರೆ. ಈ ಸಂಬAಧ ಸ್ಥಳದಲ್ಲಿ ಇರುವವರಲ್ಲಿ ಜಾಗೃತಿ ಮೂಡಿಸುತ್ತಾರೆ. ಆರಂಭದ ದಿನಗಳಲ್ಲಿ ಈ ಬಸ್ ತಂಗುದಾಣದಲ್ಲೂ ಪ್ರಯಾಣಿಕರು ಬೇಕಾಬಿಟ್ಟಿ ವರ್ತಿಸಿ ಅಶುಚಿತ್ವಕ್ಕೆ ಕಾರಣರಾಗುತ್ತಿದ್ದರು. ಆದರೆ ನಿರಂತರ ನಿಗಾವಣೆ, ಜಾಗೃತಿ ಕಾರ್ಯಕ್ರಮಗಳಿಂದ ಈಗ ಪರಿಸ್ಥಿತಿ ಬದಲಾಗಿದೆ. ಈ ತಂಗುದಾಣ ಮತ್ತು ಶೌಚಗೃಹ ಬಳಸುವವರೇ ಸ್ವಚ್ಛತಾ ಕಾರ್ಯ ನಡೆಸುವುದೂ ಇದೆ.
ಕೋರಂಗಾಲ ಗ್ರಾಮದ ಈ ಬಸ್ ತಂಗುದಾಣ ಮತ್ತು ಶೌಚಗೃಹವನ್ನು ಕೇವಲ ಬಸ್‌ಗೆ ಕಾಯುವವರೂ ಮಾತ್ರ ಬಳಸುವುದಿಲ್ಲ. ತೀರ್ಥಕ್ಷೇತ್ರ ಭಾಗಮಂಡಲ ಮತ್ತು ತಲಕಾವೇರಿಗೆ ನಾಪೋಕ್ಲು, ವಿರಾಜಪೇಟೆ ಕಡೆಯಿಂದ ಬರುವವರು ಇದೇ ಮಾರ್ಗದಲ್ಲಿ ಸಂಚರಿಸುವುದರಿAದ ವಿಶ್ರಾಂತಿ ಪಡೆಯಲು, ನೈಸರ್ಗಿಕ ಕರೆಗಾಗಿ ಈ ಸ್ಥಳವನ್ನು ಉಪಯೋಗಿಸುವುದೂ ಕಂಡುಬರುತ್ತಿದೆ. ಇಲ್ಲಿಯ ನಿರ್ವಹಣಾ ವ್ಯವಸ್ಥೆಗೆ ವ್ಯಾಪಕ ಮೆಚ್ಚುಗೆಯ ಮಾತುಗಳೂ ಕೇಳಿಬರುತ್ತಿದೆ. ಇತರೆಡೆಗಳಲ್ಲೂ ಸ್ಥಳೀಯ ಜನಪ್ರತಿನಿಧಿಗಳು ಇಂಥ ಮುತುವರ್ಜಿ ತೋರಿಸುವಂತಾಗಲಿ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಗ್ರಾ.ಪಂ. ವ್ಯಾಪ್ತಿಯ ಇತರ ಕಡೆಗಳಲ್ಲೂ ಅಗತ್ಯ ಇರುವ ಜಾಗಗಳಲ್ಲಿ ಈ ಬಗೆಯ ಸುಸಜ್ಜಿತ ಬಸ್ ತಂಗುದಾಣ ಮತ್ತು ಶೌಚಗೃಹ ಕಟ್ಟಿಸುವುದು, ಗ್ರಾಮೀಣ ಪ್ರದೇಶಗಳಲ್ಲಿ ಡಿಜಿಟಲ್ ಗ್ರಂಥಾಲಯಗಳನ್ನು ಆರಂಭಿಸಿ ಸ್ಥಳೀಯರಲ್ಲಿ ಓದುವ ಹವ್ಯಾಸ ಬೆಳೆಸುವುದರ ಜತೆಗೆ ಮಕ್ಕಳನ್ನು ಸ್ಪರ್ಧಾತ್ಮ ಪರೀಕ್ಷೆಗೆ ತಯಾರು ಮಾಡುವುದು... ಹೀಗೆ ಅನೇಕ ಕನಸುಗಳು ಕಾಳನ ರವಿ ಅವರಲ್ಲಿದೆ. ಆದರೆ ಪಂಚಾಯಿತಿಯ ಸೀಮಿತ ಅನುದಾನ ಇವರ ಕೈ ಕಟ್ಟಿಹಾಕಿದೆ. ಕಾರ್ಪೋರೇಟ್ ಸಂಸ್ಥೆಗಳು ಸೇರಿದಂತೆ ದಾನಿಗಳ ನೆರವು ಸಿಕ್ಕಿದರೆ ತಮ್ಮ ಕನಸುಗಳು ನೆರವೇರಬಹುದು ಎನ್ನುವ ನಿರೀಕ್ಷೆಯಲ್ಲಿ ಇವರಿದ್ದಾರೆ. ಈ ಸಂಬAಧ ತಮ್ಮ ಕೈಯಲ್ಲಾದ ಪ್ರಯತ್ನವನ್ನೂ ನಡೆಸುತ್ತಿದ್ದಾರೆ.
ಇರುವ 5 ವರ್ಷಗಳ ಅವಧಿಯಲ್ಲಿ ಜನರ ಒಳಿತಿಗಾಗಿ ಕೆಲಸ ಮಾಡಬೇಕು ಎನ್ನುವ ಉದ್ದೇಶ ಇಟ್ಟುಕೊಂಡು ಪಂಚಾಯಿತಿ ಅಧ್ಯಕ್ಷ ಆಗಿದ್ದೇನೆ. ಸರ್ವ ಸದಸ್ಯರು, ಸಿಬ್ಬಂದಿ ವರ್ಗ, ಸಾರ್ವಜನಿಕರು ಹಾಗೂ ದಾನಿಗಳ ಸಹಾಯದಿಂದ ಒಂದಿಷ್ಟು ಕೆಲಸ ಮಾಡಲು ಸಾಧ್ಯ ಆಗಿದೆ. ಇನ್ನೊಂದಿಷ್ಟು ಕನಸುಗಳನ್ನೂ ಇಟ್ಟುಕೊಳ್ಳಲಾಗಿದೆ. ಕೋರಂಗಾಲ ಗ್ರಾಮದ ಈ ಬಸ್ ತಂಗುದಾಣ ಮತ್ತು ಶೌಚಗೃಹದ ಸ್ವಚ್ಛತೆ ಕಾಪಾಡುವಲ್ಲಿ ಸಾರ್ವಜನಿಕರ ಕೊಡುಗೆಯೂ ಸಾಕಷ್ಟು ಇದೆ. ಇಲ್ಲಿ ನಾನು ಕೇವಲ ನೆಪ ಮಾತ್ರ ಆಗಿದ್ದೇನೆ.
ಕಾಳನ ರವಿ, ಅಧ್ಯಕ್ಷ, ಗ್ರಾ.ಪಂ., ಭಾಗಮಂಡಲ