ಬೆಥನಿ ಬಳಿ ಬೇಕು ತಂಗುದಾಣ: ವಿದ್ಯಾರ್ಥಿ, ಶಿಕ್ಷಕರು ಮಳೆ, ಬಿಸಿಲಿಗೆ ಮೈಯೊಡ್ಡಿ ನಿಲ್ಲಬೇಕಾದ ಸ್ಥಿತಿ

bus stand
Published on

ಧನಂಜಯ ಗುರುಪುರ
ಎರಡು ಸಾವಿರಕ್ಕೂ ಮೇಲ್ಪಟ್ಟು ವಿದ್ಯಾರ್ಥಿಗಳಿರುವ ಗುರುಪುರ ಕೈಕಂಬದ(ಕಿನ್ನಿಕಂಬಳ) ಬೆಥನಿ ವಿದ್ಯಾಸಂಸ್ಥೆಯ(ರೋಸಾ ಮಿಸ್ತಿಕಾ ಪ್ರಾಥಮಿಕ, ಪ್ರೌಢ, ಪಿಯು, ಡಿಎಡ್, ಬೆಥನಿ) ಎದುರು ಮಂಗಳೂರು-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಒಂದೂ ಬಸ್ ತಂಗುದಾಣವಿಲ್ಲ. ಇದರಿಂದ ಜನ ತೊಂದರೆ ಅನುಭವಿಸುವಂತಾಗಿದೆ.

ಮಳೆಗಾಲದಲ್ಲಿ ಕೆಸರು ನೀರೆರೆಚಾಟ ಮತ್ತು ಬೇಸಿಗೆಯಲ್ಲಿ ಬಿಸಿಲಿನ ತಾಪ ಸಾಮಾನ್ಯ. ಈ ಬಗ್ಗೆ ‘ವಿಜಯವಾಣಿ’ ವರದಿ ಪ್ರಕಟಿಸಿ ಗ್ರಾಮ ಪಂಚಾಯಿತಿ ಮತ್ತು ಸಂಬಂಧಿತ ಇಲಾಖೆಗಳ ಗಮನ ಸೆಳೆದಿತ್ತು. ಆ ಹೊತ್ತಿಗೆ ತಂಗುದಾಣ ನಿರ್ಮಿಸಲು ಸಮ್ಮತಿ ಸೂಚಿಸಿದ್ದ ಗಂಜಿಮಠ ಗ್ರಾಪಂ ಹಾಗೂ ಅಧಿಕಾರಿಗಳು ಬಳಿಕ ಮೌನ ವಹಿಸಿದ್ದಾರೆ. ಸುಮಾರು 10 ವರ್ಷಗಳಿಂದ ಇಲ್ಲಿ ಬಸ್ ತಂಗುದಾಣ ನಿರ್ಮಾಣ ಪ್ರಸ್ತಾವ ಬಂದಾಗಲೆಲ್ಲ ಹೆದ್ದಾರಿ ವಿಸ್ತರಣೆ ಮಾತು ಕೇಳಿ ಬರುತ್ತಿದೆ. ಮುಂದಿನ ಒಂದೆರಡು ವರ್ಷಗಳಲ್ಲಿ ಹೆದ್ದಾರಿ ವಿಸ್ತರಣೆ ಆಗದು. ಅದಕ್ಕಾಗಿ ಇನ್ನೂ ಕೆಲವು ವರ್ಷ ಕಾಯಬೇಕಾಗುತ್ತದೆ. ಅಲ್ಲಿಯವರೆಗೆ ವಿದ್ಯಾರ್ಥಿಗಳಿಗೆ ತಾತ್ಕಾಲಿಕ ಬಸ್ ತಂಗುದಾಣವಾದರೂ ನಿರ್ಮಿಸಬೇಕು ಎಂಬುದು ಜನರ ಆಗ್ರಹ.

ಅಂಗಡಿಗಳೆದುರು ಆಸರೆ!: ಶಾಲೆಯ ಎದುರಿರುವ ಎರಡು ಅಂಗಡಿಗಳ ಮುಂದೆ ನಿಲ್ಲುವುದು ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ವಾಡಿಕೆಯಾಗಿದೆ. ಕೆಲವೊಮ್ಮೆ ಅಂಗಡಿಯವರು ಅಪಸ್ವರ ಎತ್ತುವುದಿದೆ. ಈ ಪರಿಸರದಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸಿವೆ. ಇಲ್ಲಿ ತಂಗುದಾಣ ನಿರ್ಮಿಸಲು ಶಾಲಾ ವತಿಯಿಂದ ಗಂಜಿಮಠ ಗ್ರಾಪಂಗೆ ಮನವಿ ಮಾಡಿಕೊಂಡಿದ್ದೆವು. ಹತ್ತಿರದಲ್ಲಿ ಸುಸ್ಥಿತಿಯಲ್ಲಿದ್ದ ಒಂದು ಬಸ್ ತಂಗುದಾಣ ಈಗ ನೆಲ ಕಚ್ಚಿದ್ದು, ಕಳೆದ ಐದಾರು ವರ್ಷದಿಂದ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ ಎಂದು ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಲ್ಯಾನ್ಸಿ ಸಿಕ್ವೇರ ತಿಳಿಸಿದ್ದಾರೆ.

ರೋಸಾ ಮಿಸ್ತಿಕಾ ಶಾಲೆಯ ಎದುರು ಬಸ್ ತಂಗುದಾಣ ಆಗಬೇಕು. ಆದರೆ ಹೆದ್ದಾರಿ ವಿಸ್ತರಣೆಯಾಗಲಿರುವುದರಿಂದ ಈ ಪ್ರಸ್ತಾವ ಪದೇಪದೇ ಮುಂದೂಡಲ್ಪಟ್ಟಿದೆ. ಹೆದ್ದಾರಿ ವಿಸ್ತರಣೆ ಆಗುವವರೆಗೆ ಇಲ್ಲೊಂದು ತಾತ್ಕಾಲಿಕ ಬಸ್ ತಂಗುದಾಣ ನಿರ್ಮಿಸಲು ಪ್ರಯತ್ನಿಸಲಾಗುವುದು.
ನೋಣಯ್ಯ ಕೋಟ್ಯಾನ್ ಅಧ್ಯಕ್ಷ, ಗಂಜಿಮಠ ಗ್ರಾಮ ಪಂಚಾಯಿತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net