ಬಸ್ ನಿಲ್ದಾಣ ಹೊಂಡ-ಗುಂಡಿ : ಮೂಲ್ಕಿಯಲ್ಲಿ ಪಾದಚಾರಿಗಳಿಗೆ ಕೆಸರಿನ ಸಿಂಚನ: ಕುಡುಕರ ಆಶ್ರಯ ತಾಣ

New Project (18)
Published on

ಭಾಗ್ಯವಾನ್ ಮೂಲ್ಕಿ

ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ಮೂಲ್ಕಿ ಬಸ್ ನಿಲ್ದಾಣ ಸಂಪೂರ್ಣ ಹೊಂಡ-ಗುಂಡಿಗಳಿಂದ ಆವೃತವಾಗಿದ್ದು, ಬಸ್ ನಿಲ್ದಾಣಕ್ಕೆ ಬರುವುದು ಅಪಾಯಕಾರಿಯಾಗಿ ಪರಿಣಮಿಸಿದೆ.

ರಾಷ್ಟ್ರೀಯ ಹೆದ್ದಾರಿ ಪಕ್ಕದ ಮೂಲ್ಕಿ ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರು ನಿಬಿಢ ವಾಹನ ಸಂಚಾರದಿಂದ ಕೂಡಿದ ಹೆದ್ದಾರಿ ದಾಟಿ ಬರುವಾಗ ರಸ್ತೆಯ ಗುಂಡಿಯ ಆಳ ತಿಳಿಯದೆ ಕಾಲು ಜಾರಿ ಬಿದ್ದವರು ಅನೇಕರು. ಮಳೆ ಬಂದ ಕೂಡಲೇ ನೀರು ತುಂಬಿ ಬಸ್ ಕಾಯುವ ಮಂದಿಯ ಮೇಲೆ ಕೆಸರಿನ ಕೊಳಚೆ ನೀರು ಹಾರಿ ಸಮಸ್ಯೆೆಯಿಂದ ಜನ ಹೈರಾಣಾಗಿದ್ದಾರೆ. ಇನ್ನು ಬಸ್‌ನಿಂದ ಇಳಿಯುವ ಸಂದರ್ಭ ತರಾತುರಿಯಲ್ಲಿ ಗುಂಡಿಗೆ ಬಿದ್ದು ಪೆಟ್ಟು ಮಾಡಿಕೊಳ್ಳುವ ಮಕ್ಕಳು ವಯೋವೃದ್ಧರು ಹಲವು.

ಡಾಂಬರೀಕರಣ ಅಗತ್ಯ

ಉಡುಪಿ, ಕಿನ್ನಿಗೋಳಿ, ಕಟೀಲು, ಮೂಡುಬಿದಿರೆಗೆ ಹೋಗುವ ಬಸ್‌ಗಳು ಮೂಲ್ಕಿ ನಿಲ್ದಾಣದಲ್ಲೇ ನಿಲ್ಲುತ್ತವೆ. ದೂರದ ಬೆಂಗಳೂರಿಂದ ಬರುವ ಬಸ್‌ಗಳಿಗೂ ಇದೇ ನಿಲ್ದಾಣ. ಆದರೆ ಕಳೆದ ಹಲವು ಸಮಯದಿಂದ ನಿಲ್ದಾಣ ರಸ್ತೆ ಹೊಂಡಗಳಿಂದ ತುಂಬಿದರೂ ಹೆದ್ದಾರಿ ಇಲಾಖೆ ಡಾಂಬರೀಕರಣ ಮಾಡಿಲ್ಲ. ಪಂಚಾಯಿತಿ ತಂದು ಸುರಿಯುವ ಜಲ್ಲಿಕಲ್ಲು, ಮಣ್ಣು ಕೆಲವು ದಿನಗಳ ಅತಿಥಿಯಂತಿದ್ದು ಮಳೆಗೆ ಕೊಚ್ಚಿ ಹೋಗುತ್ತದೆ.

ನಿರ್ಗತಿಕರ ಆಶ್ರಯ ತಾಣ: ಇಲ್ಲಿನ ಬಸ್ ನಿಲ್ದಾಣ ಕುಡುಕರ ಮತ್ತು ನಿರ್ಗತಿಕರ ಆಶ್ರಯ ತಾಣವಾಗಿದೆ. ಬೆಳ್ಳಂಬೆಳಗ್ಗೆ ಕುಡಿದು ನಿಲ್ದಾಣದಲ್ಲಿ ಮಲಗಿ ತಮ್ಮದೇ ಲೋಕದಲ್ಲಿ ವಿಹರಿಸುವ ವ್ಯಕ್ತಿಗಳು ಇದ್ದರೆ ಮಾನಸಿಕ ಸ್ಥಿಮಿತ ಕಳೆದಂತಿರುವ ವ್ಯಕ್ತಿಗಳಿಂದ ಪ್ರಯಾಣಿಕರು ನಿಲ್ದಾಣ ಪ್ರವೇಶಿಸಲು ಅಸಾಧ್ಯವಾಗಿದೆ.

ಅವ್ಯವಸ್ಥೆ ಆಗರ

ಮೂಲ್ಕಿ ಲಯನ್ಸ್ ಕ್ಲಬ್ ಖಾಸಗಿ ಸಂಸ್ಥೆಯ ಸಹಭಾಗಿತ್ವದಲ್ಲಿ ಒದಗಿಸಿರುವ ಸಾರ್ವಜನಿಕ ಕುಡಿಯುವ ನೀರಿನ ವ್ಯವಸ್ಥೆ ಹಾಳಾಗಿ ವರ್ಷಗಳೇ ಕಳೆದರೂ ಪಂಚಾಯಿತಿಯಾಗಲಿ ಅಥವಾ ದಾನ ನೀಡಿದ ಸಂಸ್ಥೆಯಾಗಲಿ ತಲೆಕೆಡಿಸಿಕೊಂಡಿಲ್ಲ. ಇಲ್ಲಿನ ಅವ್ಯವಸ್ಥೆಗಳ ಬಗ್ಗೆ ಪಂಚಾಯಿತಿ, ಪೊಲೀಸ್ ಇಲಾಖೆ ಹಾಗೂ ಜನ ಪ್ರತಿನಿಧಿಗಳು ಗಮನ ಹರಿಸಬೇಕು ಎನ್ನುವುದು ನಾಗರಿಕರ ಆಶಯ.

ಸಮಾರಂಭಗಳಿಗೆ ಹೋಗಲು ಬಸ್‌ಗಾಗಿ ಕಾಯುವ ಜನರಿಗೆ ಬಸ್‌ನಿಂದ ಹಾರಿದ ನೀರಿನ ಕೆಸರು ಸಿಂಚನದಿಂದ ಹೈರಾಣಾಗಿದ್ದೇವೆ ಈ ಬಗ್ಗೆ ಮೂಲ್ಕಿ ನಗರ ಪಂಚಾಯಿತಿ ಸೂಕ್ತ ಗಮನ ಹರಿಸಬೇಕು. ನಾಗೇಶ್ ಕುಮಾರ್ ಮೂಲ್ಕಿ ಸಾರ್ವಜನಿಕರು ಕಲ್ಲು ಮಣ್ಣು ಹಾಕಿದರೆ ಸಮಸ್ಯೆ ಇನ್ನೂ ಹೆಚ್ಚಾಗುತ್ತದೆ ಮಳೆ ಕಡಿಮೆಯಾದರೆ ಡಾಂಬರು ಮಿಶ್ರಿತ ಜಲ್ಲಿ ಪುಡಿ ಹಾಕಿ ತಾತ್ಕಾಲಿಕವಾಗಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು. ಸತೀಶ್ ಅಂಚನ್ ಅಧ್ಯಕ್ಷರು, ಮೂಲ್ಕಿ ನಗರ ಪಂಚಾಯಿತಿ https://www.vijayavani.net/badminton-tournament-4 https://www.vijayavani.net/conference

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net