ಬಸ್ ಸಂಚಾರ ದಿಢೀರ್ ಸ್ಥಗಿತ; ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಪ್ರತಿಭಟನೆ ಪರದಾಡಿದ ಪ್ರಯಾಣಿಕರು

DSC_8037
Published on

ತುಮಕೂರು: ಸರ್ಕಾರಿ ನೌಕರರೆಂದು ಪರಿಗಣಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ಜಿಲ್ಲೆಯಲ್ಲಿ ಬಸ್ ಸಂಚಾರ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಭಾಗಿಯಾದರು. ಸಾರಿಗೆ ನೌಕರರ ದಿಢೀರ್ ಮುಷ್ಕರಿಂದ ಪ್ರಯಾಣಿಕರು ಪರದಾಡುವಂತಾಯಿತು.

ಬೆಂಗಳೂರಿಗೆ ತೆರಳುವರು ಖಾಸಗಿ ಬಸ್‌ಗಳನ್ನು ಹೆಚ್ಚು ಅವಲಂಬಿಸಿದ್ದು ಕಂಡುಬಂತು. ಜಿಲ್ಲಾಕೇಂದ್ರ ತುಮಕೂರಿನಲ್ಲಿ 2 ಡಿಪೋ ಹಾಗೂ ತಿಪಟೂರು, ಶಿರಾ, ಮಧುಗಿರಿ, ಕುಣಿಗಲ್, ತುರುವೇಕೆರೆ ದಿಢೀರನೆ ಸಾರಿಗೆ ಸಂಸ್ಥೆಯ ಸಿಬ್ಬಂದಿ ಮುಷ್ಕರಕ್ಕೆ ಮುಂದಾದ್ದರಿಂದ ಬೇರೆ ಬೇರೆ ಊರುಗಳಿಗೆ ತೆರಳಲು ಕೆಎಸ್ಸಾರ್ಟಿಸಿ ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕರು ಬಸ್‌ಗಳ ಸಂಚಾರ ಇಲ್ಲದೆ ಪರದಾಡುವಂತಾಯಿತು.

ಖಾಸಗಿ ವಾಹನಗಳಿಗೆ ದುಬಾರಿ ಬೆಲೆ ತೆತ್ತು ಹೋಗುವಂತಾಯಿತು. ಜಿಲ್ಲೆಯಲ್ಲಿ 333 ಬಸ್‌ಗಳಲ್ಲಿ ಕೇವಲ 43 ಬಸ್‌ಗಳ ಕಾರ್ಯಾಚರಣೆಯಿತ್ತು.

8 ಗಂಟೆವರೆಗೆ ಬಸ್ ಸಂಚಾರ: ಬೆಳಗ್ಗೆ 8 ಗಂಟೆವರೆಗೆ ಬಸ್ ಕಾರ್ಯಾಚರಣೆ ಇತ್ತು. ಅಲ್ಲಿವರೆಗೆ 7 ಡಿಪೋಗಳಿಂದ 33 ಬಸ್‌ಗಳು ಕಾರ್ಯಾಚರಣೆ ಆರಂಭಿಸಿದ್ದವು. ಈ ವೇಳೆ ಚಾಲಕರು, ನಿರ್ವಾಹಕರು ದಿಢೀರನೆ ಮುಷ್ಕರ ಬೆಂಬಲಿಸಿ ಬಸ್ ಸಂಚಾರ ಸ್ಥಗಿತಗೊಳಿಸಲು ನಿರ್ಧರಿಸಿ ಹೋರಾಟಕ್ಕೆ ಮುಂದಾದರು. ಈ ದಿಢೀರ್ ಬೆಳವಣಿಗೆಯಿಂದ ಬೆಂಗಳೂರು, ಮದ್ದೂರು, ಶಿವಮೊಗ್ಗ ಸೇರಿ ಬೇರೆ ಬೇರೆ ಸ್ಥಳಗಳಿಗೆ ತೆರಳಲು ಬಸ್‌ಗಾಗಿ ಕಾದು ಕುಳಿತಿದ್ದ ಪ್ರಯಾಣಿಕರು ಪರದಾಡುವಂತಾಯಿತು.

ಆಟೋಗಳಿಂದ ದುಪ್ಪಟ್ಟು ಹಣ ವಸೂಲಿ: ಸಾರಿಗೆ ನೌಕರರ ದಿಢೀರ್ ಮುಷ್ಕರವನ್ನು ಬಂಡವಾಳ ಮಾಡಿಕೊಂಡ ಆಟೋ ಚಾಲಕರು ಏಕಾಏಕಿ ದರವನ್ನು ದುಪ್ಪಟ್ಟು ಮಾಡಿದರು. ನಗರ ಸಾರಿಗೆಯು ಸೇರಿ ಗ್ರಾಮೀಣ ಸಾರಿಗೆ ಸಂಚಾರ ಸ್ಥಗಿತಗೊಂಡಿದ್ದು, ನಗರದ ಅಕ್ಕಪಕ್ಕದ ಊರುಗಳಿಗೆ ತೆರಳಲು ಆಟೋಗಳನ್ನು ಆಶ್ರಯಿಸಿದ ಜನರು ದುಪ್ಪಟ್ಟು ಪ್ರಯಾಣ ದರ ಭರಿಸುವಂತಾಯಿತು.

ನಿಲ್ದಾಣದಲ್ಲೇ ಉಪಹಾರ: ಬೆಳಗಿನ ಕರ್ತವ್ಯಕ್ಕೆ ಹಾಜರಾಗಿದ್ದ ಸಾರಿಗೆ ಸಿಬ್ಬಂದಿ ಮುಷ್ಕರದಲ್ಲಿ ತೊಡಗುವ ಮುನ್ನ ಬೆಳಗಿನ ಉಪಹಾರವನ್ನು ನಿಲ್ದಾಣಗಳಲ್ಲೇ ತಯಾರಿಸಿ, ಸೇವಿಸಿ ಹೋರಾಟದಲ್ಲಿ ಭಾಗಿಯಾದರು. ಸಾರಿಗೆ ನೌಕರರ ಮುಷ್ಕರಿಂದ ಜಿಲ್ಲೆಯಲ್ಲಿ ಇಡೀ ದಿನ 333 ಬಸ್‌ಗಳಲ್ಲಿ 43 ಬಸ್ ಕಾರ್ಯಾಚರಣೆ ನಡೆಸಲಾಯಿತು. ದಿಢೀರ್ ಮುಷ್ಕರದಿಂದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುವಂತಾಯಿತು. ಶನಿವಾರ ಪರಿಸ್ಥಿತಿ ಅವಲೋಕಿಸಿ ಬಸ್ ಕಾರ್ಯಾಚರಣೆ ಕೈಗೊಳ್ಳಲಾಗುವುದು. ಕೆ.ಆರ್.ಬಸವರಾಜು ವಿಭಾಗೀಯ ನಿಯಂತ್ರಣಾಧಿಕಾರಿ, ಕೆಎಸ್‌ಆರ್‌ಟಿಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net