

ತಿ.ನರಸೀಪುರ: ಗ್ರಾಮಸ್ಥರು ಹಾಗೂ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳ ಮನವಿಗೆ ಸ್ಪಂದಿಸಿರುವ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಾಲೂಕಿನ ಮುಡುಕನಪುರ ಗ್ರಾಮಕ್ಕೆ ಶುಕ್ರವಾರದಿಂದ ಸರ್ಕಾರಿ ಸಾರಿಗೆ ಬಸ್ ಸಂಚಾರವನ್ನು ಆರಂಭಿಸಿದ್ದಾರೆ.
ಬುಧವಾರ ಮೈಸೂರು ನಗರ ವಿಭಾಗೀಯ ನಿಯಂತ್ರಣಾಧಿಕಾರಿ ವೀರೇಶ್ ಅವರಿಗೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ತಿ.ನರಸೀಪುರ ಪಟ್ಟಣದಿಂದ ಮುಡುಕನಪುರ ಗ್ರಾಮಕ್ಕೆ ಸಾತಗಹಳ್ಳಿ ಡಿಪೋದಿಂದ ಬಸ್ ಸೌಲಭ್ಯವನ್ನು ಕಲ್ಪಿಸಲಾಗಿದ್ದು, ಬೆಳಗ್ಗೆ 8.45ಕ್ಕೆ ಹಾಗೂ ಸಂಜೆ 5ಗಂಟೆಗೆ ಬಸ್ ಸಂಚಾರ ಆರಂಭಿಸಿದೆ. ಬಸ್ ಗ್ರಾಮಕ್ಕೆ ಆಗಮಿಸಿದ ಹಿನ್ನೆಲೆ ಗ್ರಾಮಸ್ಥರು ಬಸ್‌ಗೆ ಪೂಜೆ ಸಲ್ಲಿಸಿ ಸಂಭ್ರಮಿಸಿದರು.
ಕಬ್ಬು ಬೆಳೆಗಾರರ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ರೂಪಾ ಮಲ್ಲೇಶ್ ಮಾತನಾಡಿ, ನಮ್ಮ ಮನವಿಗೆ ಸ್ಪಂದಿಸಿರುವ ಸಾರಿಗೆ ಅಧಿಕಾರಿಗಳು ಈ ಹಿಂದೆಯೇ ನಿಯೋಜಿಸಲಾಗಿದ್ದ ತಿ.ನರಸೀಪುರದಿಂದ ಮುಡುಕನಪುರದವರೆಗಿನ ಸಾರಿಗೆ ಸಂಚಾರವನ್ನು ಪುನರಾರಂಭಿಸಿದ್ದಾರೆ. ನರಸೀಪುರದಿಂದ ಕೆಬ್ಬೆಹುಂಡಿ, ಮುಡುಕನಪುರ, ಚಿದರವಳ್ಳಿ ಮಾರ್ಗವಾಗಿ ಮಳವಳ್ಳಿಗೆ ಸರ್ಕಾರಿ ಸಾರಿಗೆ ಸಂಚಾರ ಮಾಡುವಂತೆ ಮಾಡಿದ ಮನವಿಯನ್ನು ಪುರಸ್ಕರಿಸಿಲ್ಲ. ಮುಂದಿನ ದಿನಗಳಲ್ಲಿ ಮಂಡ್ಯ ವಿಭಾಗದ ಸಾರಿಗೆ ಅಧಿಕಾರಿಗಳನ್ನು ಭೇಟಿಯಾಗಿ ಹೆಚ್ಚುವರಿ ಬಸ್‌ಗಳ ಸಂಚಾರಕ್ಕೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಶೀಲಾ ನಾಗೇಶ್, ಯಜಮಾನ ಗುರುಪಾದಸ್ವಾಮಿ, ಕಜ್ಜಿಹುಂಡಿ ಗುರುಮಲ್ಲಪ್ಪ, ಶಿವಣ್ಣ, ಗಿರೀಶ, ಪಟೇಲ್ ಮಲ್ಲಪ್ಪ, ಮಮತಾ ಮಲ್ಲಪ್ಪ, ಪ್ರಭಾಮಣಿ, ಸುಶೀಲಾ, ಬಸಮ್ಮ, ಜಯಮ್ಮ, ಗೌರಮ್ಮ, ಮಹದೇವಪ್ಪ, ರಾಜಶೇಖರ್ ಇತರರು ಇದ್ದರು.