ಬಸ್ ಬೇಡಿಕೆಗೆ ಇಲ್ಲ ಸ್ಪಂದನೆ : ಎಡಪದವು ಜಂಕ್ಷನ್-ಪೂಪಾಡಿಕಲ್ಲು-ಇರುವೈಲು ರೂಟ್ ಸುತ್ತಿ ಬಳಸಿ ಪ್ರಯಾಣಿಸುವ ತಾಪತ್ರಯ

New Project (9)
Published on

ಧನಂಜಯ ಗುರುಪುರ

ರಾಷ್ಟ್ರೀಯ ಹೆದ್ದಾರಿ 169ರ ಎಡಪದವು ಜಂಕ್ಷನ್‌ನಿಂದ ಪೂಪಾಡಿಕಲ್ಲು, ಇರುವೈಲು ಮೂಲಕ ಮೂಡುಬಿದಿರೆ ಸಂಪರ್ಕಿಸುವ ಪಿಡಬ್ಲುೃಡಿ ರಸ್ತೆಯ ಆಸುಪಾಸಿನ ಗ್ರಾಮೀಣ ಒಳ ಪ್ರದೇಶಗಳಲ್ಲಿ 5ರಿಂದ 6 ಸಾವಿರ ಜನಸಂಖ್ಯೆ ಇದ್ದರೂ, ಸಾರ್ವಜನಿಕ ಸೇವೆಯ ಖಾಸಗಿ ಅಥವಾ ಸರ್ಕಾರಿ ಬಸ್ ವ್ಯವಸ್ಥೆ ಇಲ್ಲದಿರುವುದು ನಮ್ಮ ವ್ಯವಸ್ಥೆಯ ಲೋಪಕ್ಕೆ ಹಿಡಿದ ಕನ್ನಡಿಯಂತಿದೆ.

ಎಡಪದವು ಜಂಕ್ಷನ್‌ನಿಂದ ಇರುವೈಲು ಮೂಲಕ ಮೂಡುಬಿದಿರೆ ಸಂಪರ್ಕಿಸುವ ಹಳೆಯ ರಸ್ತೆಯಲ್ಲಿ ಸಾಧಾರಣ ಜನಸಂಖ್ಯೆ ಇದ್ದ ಸುಮಾರು 8 ವರ್ಷಗಳ ಹಿಂದೆ ಖಾಸಗಿ ಬಸ್ ಸೇವೆ ಇತ್ತು. ಈ ರೂಟ್‌ನಲ್ಲಿ ಎರಡು ಬಾರಿ ಖಾಸಗಿ ಬಸ್ ಇತ್ತಾದರೂ, ಪ್ರಯಾಣಿಕರ ಸಂಖ್ಯೆ ಕೊರತೆಯಿಂದ ಬಸ್ ಸೇವೆ ರದ್ದುಗೊಂಡಿತ್ತು. ಈಗ ಉತ್ತಮವಾಗಿರುವ ಈ ಮಾರ್ಗದ ಇಕ್ಕೆಲಗಳಲ್ಲಿ ಮನೆಗಳ ಸಂಖ್ಯೆ ದುಪ್ಪಟ್ಟುಗೊಂಡಿದೆ. ಇಷ್ಟಿದ್ದರೂ ಈ ಭಾಗದ ಶಾಲಾ ಮಕ್ಕಳು, ಕಾರ್ಮಿಕರು, ಮಂಗಳೂರು-ಮೂಡುಬಿದಿರೆ ಭಾಗದ ಉದ್ಯೋಗಸ್ಥರು, ವಯೋವೃದ್ಧರಿಗೆ ಬಸ್ ಸೇವೆ ಇಲ್ಲದಂತಾಗಿದೆ. ಇವರು ಪ್ರತಿನಿತ್ಯ ಬಾಡಿಗೆ ರಿಕ್ಷಾ ಅಥವಾ ದಾರಿಹೋಕರ ದ್ವಿಚಕ್ರ ವಾಹನ ಅವಲಂಬಿಸಬೇಕಿದೆ.

ಕರೋನಾ ಮಹಾಮಾರಿಗಿಂತ ಎರಡು ವರ್ಷ ಹಿಂದೆ ಈ ರೂಟ್‌ನ ಖಾಸಗಿ ಬಸ್ ಸೇವೆ ಸ್ಥಗಿತಗೊಂಡಿತ್ತು. ಇದೀಗ 8 ವರ್ಷದಿಂದ ಬಸ್ ಸೇವೆ ಇಲ್ಲ. ವರ್ಷಗಳ ಬಳಿಕ ಈ ಭಾಗದಲ್ಲಿ ಮನೆಗಳ ಸಹಿತ ಜನಸಂಖ್ಯೆ ತೀರಾ ಹೆಚ್ಚಾಗಿದೆ. ಜನಸಂಖ್ಯೆ ಆಧರಿಸಿ ಬಸ್ ಸೇವೆ ಆರಂಭಿಸಿದರೆ ಈ ಭಾಗದ ಜನರಿಗೆ ಅನುಕೂಲವಾಗಲಿದೆ. ಸಮಯ, ಹಣದ ಉಳಿತಾಯ ಆಗಲಿದೆ. ಗ್ರಾಮೀಣ ಭಾಗಗಳಿಗೆ ರಸ್ತೆ, ಬಸ್, ನೀರು, ವಿದ್ಯುತ್‌ನಂತಹ ಮೂಲಸೌಕರ್ಯ ಒದಗಿಸುವಲ್ಲಿ ಆಸಕ್ತಿ ಹೊಂದಿರುವ ಸರ್ಕಾರ ಇದುವರೆಗೂ ಇಲ್ಲಿಗೆ ಸರ್ಕಾರಿ ಬಸ್ ಸೇವೆ ವ್ಯವಸ್ಥೆಗೆ ಮನಸ್ಸು ಮಾಡಿಲ್ಲ ಎಂಬುದು ಬೇಸರದ ಸಂಗತಿ ಎಂದು ಸ್ಥಳೀಯರು ಹೇಳಿದ್ದಾರೆ.

ಸರ್ಕಾರಿ ಬಸ್ ಬೇಡಿಕೆ

ಮಂಗಳೂರಿನಿಂದ ಎಡಪದವು-ಬೋರುಗುಡ್ಡೆ(ಕಣ್ಣೋರಿ ಸರ್ಕಾರಿ ಶಾಲೆ)-ಬೀಡಿ ಕಾಲೊನಿ-ನಲ್ಯ(ಬಸದಿ)-ಮಡಪಾಡಿ-ಸನಿಲ-ಕೋರೆ ಕ್ರಾಸ್-ಭೂತನಾಥೇಶ್ವರ ದೇವಸ್ಥಾನ(ಶಾಸ್ತಾವು)-ಪೂಪಾಡಿಕಲ್ಲು-ಪೂಮಾರಪದವು(ಸರ್ಕಾರಿ ಶಾಲೆ)-ಪೊಸಮರಪದವು-ಇರುವೈಲು ಮೂಲಕ ಮೂಡುಬಿದಿರೆಗೆ ಇನ್ನಾದರೂ ಸರ್ಕಾರಿ ಬಸ್ ಸೇವೆ ಆರಂಭಿಸಬೇಕು. ಈಗ ಈ ರೂಟ್‌ನಲ್ಲಿ ಸಾವಿರಕ್ಕೂ ಹೆಚ್ಚು ಮನೆಗಳಿವೆ. ರಿಕ್ಷಾಗಳಲ್ಲಿ ಸಣ್ಣ ಅಂತರಕ್ಕೆ 10ರಿಂದ 20 ರೂ. ಬಾಡಿಗೆ ನೀಡಬೇಕಾಗುತ್ತದೆ. ರಿಟರ್ನ್ ರಿಕ್ಷಾಗಳಲ್ಲಿ 8-10 ಮಂದಿಯನ್ನು ತುಂಬಿಸಲಾಗುತ್ತದೆ. ಮಂಗಳೂರಿನಿಂದ ಎಡಪದವು-ಇರುವೈಲು ಮೂಲಕ ಮೂಡುಬಿದಿರೆಗೆ ಬಸ್ ವ್ಯವಸ್ಥೆ ಆರಂಭಗೊಂಡಲ್ಲಿ ಪ್ರಯಾಣ ದರ, ಪ್ರಯಾಣದ ಅವಧಿ ಕಡಿಮೆಯಾಗಲಿದೆ. ಸದ್ಯ ಇರುವೈಲು, ಪೂಪಾಡಿಕಲ್ಲು ಭಾಗದ ಮಂದಿ ಸುತ್ತಿ ಬಳಸಿ ಮಂಗಳೂರು ಅಥವಾ ಮೂಡುಬಿದಿರೆಗೆ ಪ್ರಯಾಣಿಸಬೇಕಾಗುತ್ತದೆ.

ಎಂಟು ವರ್ಷಗಳ ಹಿಂದೆ ಗುರುಪುರ ಕೈಕಂಬದಿಂದ ಎಡಪದವು-ಪೂಪಾಡಿಕಲ್ಲು ಮೂಲಕ ಇರುವೈಲಿಗೆ ಖಾಸಗಿ ಬಸ್ ಸೇವೆ ಇತ್ತಾದರೂ, ಪ್ರಯಾಣಿಕರ ಕೊರತೆಯಿಂದ ಬಂದ್ ಆಗಿತ್ತು. ಸದ್ಯ ಈ ರೂಟ್‌ನ ಆಸುಪಾಸಿನಲ್ಲಿ ಬಡಾವಣೆ ಹೆಚ್ಚಾಗಿದ್ದು, ಜನಸಂಖ್ಯೆ ಅಧಿಕಗೊಂಡಿದೆ. ರಿಕ್ಷಾ ಲಾಬಿಯಿಂದ ಬಸ್ ಸೇವೆ ಸ್ಥಗಿತಗೊಂಡಿದೆ ಎಂಬ ಆರೋಪ ಇದೆ. ಮಂಗಳೂರಿನಿಂದ ನೇರವಾಗಿ ಎಡಪದವು ಜಂಕ್ಷನ್-ಪೂಪಾಡಿಕಲ್ಲು-ಇರುವೈಲು ಮೂಲಕ ಮೂಡುಬಿದಿರೆಗೆ ಸರ್ಕಾರಿ ಬಸ್ ಸೇವೆ ಆರಂಭಿಸಿದರೆ ಅದೆಷ್ಟೋ ವಿದ್ಯಾರ್ಥಿಗಳು, ಕಾರ್ಮಿಕರು, ಉದ್ಯೋಗಸ್ಥರು, ವಯೋ ವೃದ್ಧರಿಗೆ ಪ್ರಯೋಜನವಾಗಲಿದೆ. ಸಮಯ, ಹಣ ಉಳಿತಾಯವಾಗಲಿದೆ. ಸುಕುಮಾರ ದೇವಾಡಿಗ ಎಡಪದವು ಗ್ರಾಪಂ ನಿಕಟಪೂರ್ವ ಅಧ್ಯಕ್ಷ, ಹಾಲಿ ಸದಸ್ಯ ಸರ್ಕಾರ ಗ್ರಾಮೀಣ ಭಾಗದ ಜನರ ಸಮಸ್ಯೆಗೆ ಸ್ಪಂದಿಸಬೇಕು. ಎಡಪದವಿನಿಂದ ಇರುವೈಲು ಮೂಲಕ ಮೂಡುಬಿದಿರೆಗೆ ಬಸ್ ಸೇವೆ ಆರಂಭಿಸಿದಲ್ಲಿ ಈ ಭಾಗದ ಜನರಿಗೆ ಅನುಕೂಲವಾಗಲಿದೆ. ಬೆಳಗ್ಗೆ ಮತ್ತು ಸಂಜೆ ಸರಿಯಾದ ಸಮಯದಲ್ಲಿ ಬಸ್ ಸೇವೆ ಗೊತ್ತುಪಡಿಸಿದಲ್ಲಿ ಖಂಡಿತವಾಗಿಯೂ ಈ ರೂಟ್ ಲಾಭದಾಯಕವಾಗಲಿದೆ. ಖಾಸಗಿಯವರೂ ಈ ಬಗ್ಗೆ ಮರು ಚಿಂತಿಸಬಹುದು. ಪ್ರಸಾದ್ ಕುಮಾರ್ ಮಂಗಳೂರು ಉತ್ತರ ಮಂಡಲ ಬಿಜೆಪಿ ಉಪಾಧ್ಯಕ್ಷ ನಡೆಯಲಾಗದ ವ್ಯಕ್ತಿ ನಾನು. ಎಡಪದವಿನಿಂದ ಒಂದೂವರೆ ಕಿ.ಮೀ. ಅಂತರದ ಬೀಡಿ ಕಾಲೊನಿಗೆ ರಿಕ್ಷಾದಲ್ಲಿ 40 ರೂ. ಬಾಡಿಗೆ ನೀಡಬೇಕಾಗುತ್ತದೆ. ರಿಟರ್ನ್ ಬಾಡಿಗೆ 10 ರೂ. ಆಗಿರುತ್ತದೆ. ಸರ್ಕಾರಿ ಬಸ್ ಸೇವೆ ಆರಂಭಗೊಂಡಲ್ಲಿ ನಮ್ಮಂತಹ ಎಷ್ಟೋ ಮಂದಿಗೆ ಪ್ರಯೋಜನವಾಗಲಿದೆ. ಸರ್ಕಾರ ಇನ್ನಾದರೂ ಇಲ್ಲಿಗೆ ಖಾಯಂ ಬಸ್ ಸೇವೆ ಆರಂಭಿಸಬೇಕು. ರಮೇಶ್ ಸುವರ್ಣ ಬೀಡಿ ಕಾಲೊನಿ ನಿವಾಸಿ ಟೈಲರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net