ಹಿಮ್ಮುಖ ಚಲಿಸಿದ ಬಸ್​, ಪ್ರಯಾಣಿಕರು ಪಾರು

UDP-27-8-Bus
ಚಾಲಕನಿಗೆ ಹೃದಯಾಘಾತ ಉಂಟಾಗಿದ್ದರಿಂದ ನಿಯಂತ್ರಣ ತಪ್ಪಿ ಮೋರಿಯಲ್ಲಿ ಸಿಲುಕಿದ ಖಾಸಗಿ ಬಸ್​.
Published on

ಪರ್ಕಳದಲ್ಲಿ ಸಿಟಿ ಬಸ್ ಚಾಲಕನಿಗೆ ಹೃದಯಾಘಾತ

ಉಡುಪಿ: ಪರ್ಕಳ ಕೆನರಾ ಬ್ಯಾಂಕ್​ನ ಮುಂಭಾಗದ ರಸ್ತೆ ತಿರುವಿನಲ್ಲಿ ಉಡುಪಿಯಿಂದ ಬೈರಂಜೆಗೆ ತೆರಳುತ್ತಿದ್ದ ಖಾಸಗಿ ಸಿಟಿ ಬಸ್​ನ ಚಾಲಕನಿಗೆ ಹೃದಯಾಘಾತವಾಗಿದ್ದು, ಬಸ್​ ಹಿಮ್ಮುಖವಾಗಿ ಚಲಿಸಿದರೂ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ಗುರುವಾರ ಸಂಜೆ ಸಂಭವಿಸಿದೆ.

ಬಸ್​ನ ಚಾಲಕ ಕೃಷ್ಣ ಎಂಬವರು ಅನಾರೋಗ್ಯದಲ್ಲೂ ಸಹ ಸಮಯಪ್ರಜ್ಞೆ ಮೆರೆದು, ಬಸ್​ನ ವೇಗ ನಿಯಂತ್ರಿಸಲು ಯತ್ನಿಸಿದ್ದು, ಬಲಭಾಗಕ್ಕೆ ಚಲಿಸಿ ಮೋರಿಯಲ್ಲಿ ಹಿಂಬದಿ ಚಕ್ರ ಸಿಲುಕಿ ಬಸ್​ ನಿಂತಿದೆ. ರಸ್ತೆಯ ಏರಿನಲ್ಲಿ ಬಸ್​ ಚಲಿಸುತ್ತಿದ್ದಾಗ ಚಾಲಕನಿಗೆ ಎದೆನೋವು ಕಾಣಿಸಿಕೊಂಡಿದ್ದು, ಬಸ್​ ಹಿಂದಕ್ಕೆ ಚಲಿಸುತ್ತಿತ್ತು ಎಂದು ಪ್ರಯಾಣಿಕರು ತಿಳಿಸಿದ್ದಾರೆ.

UDP-27-8A-Bus

ಬಸ್​ನ ಹಿಂಬದಿಯಲ್ಲೂ ಸಹ ವಾಹನ ಅಥವಾ ಬೈಕ್​ ಸವಾರರು ಇಲ್ಲದ್ದರಿಂದ ಯಾವುದೇ ಹೆಚ್ಚಿನ ಅನಾಹುತ ಆಗಿಲ್ಲ. ಸುಮಾರು ಒಂದು ಗಂಟೆ ಕಾಲ ಟ್ರಾಫಿಕ್​ ಜಾಮ್​ ಉಂಟಾಗಿತ್ತು. ಬಸ್​ನ ಚಾಲಕನನ್ನು ಮಣಿಪಾಲ ಆಟೋ ಸ್ಟ್ಯಾಂಡ್​ನ ಅಬ್ದುಲ್​ ರಶೀದ್​ ಸರಳಬೆಟ್ಟು ಅವರು ತಕ್ಷಣ ಮಣಿಪಾಲ ಆಸ್ಪತ್ರೆಗೆ ತನ್ನ ಆಟೋದಲ್ಲಿ ಸಾಗಿಸಿ ಸಹಕರಿಸಿದರು.

ನಾನು ಈ ಬಸ್​ನ ಹಿಂಬದಿಯಿಂದ ಆಟೋದಲ್ಲಿ ಬರುತ್ತಿದ್ದೆ. ಬಸ್​ ಹಿಮ್ಮುಖವಾಗಿ ಚಲಿಸುತ್ತಿದ್ದಂತೆ ಕೆಲ ಪ್ರಯಾಣಿಕರು ಜೀವ ಭಯದಿಂದ ಬಾಗಿಲಿನಿಂದ ಹೊರಗೆ ಹಾರಿದರು. ಬಸ್​ ಚಾಲಕನ ಕೈ ಮರಗಟ್ಟಿತ್ತು. ಬಾಯಲ್ಲಿ ನೊರೆ ಬರುತ್ತಿತ್ತು. ಅಬ್ದುಲ್​ ರಶೀದ್​. ಆಟೋ ಚಾಲಕ, ಸರಳಬೆಟ್ಟು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net