ಬಸ್ ಬರದೆ ವಿದ್ಯಾರ್ಥಿಗಳ ಪರದಾಟ

bus problem
Published on

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ದೊಡ್ಡಬಳ್ಳಾಪುರ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ಬಸ್ ಸಂಚಾರ ಅವ್ಯವಸ್ಥೆಯ ಗೋಳು ತಪ್ಪುತ್ತಿಲ್ಲ. ಪ್ರತಿನಿತ್ಯ ಸಾರ್ವಜನಿಕರು, ವಿದ್ಯಾರ್ಥಿಗಳು ಬಸ್‌ಗಳಿಲ್ಲದೆ ಪರದಾಡುವ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ.

ತೂಬಗೆರೆ, ಮಧುರೆ, ಚಿಕ್ಕಬೆಳವಂಗಲ ಸೇರಿ ಹೋಬಳಿಗಳಿಂದ ದೊಡ್ಡಬಳ್ಳಾಪುರ ನಗರಕ್ಕೆ ಹೋಗಿಬರಲು ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲ. ಕರೊನಾ ಕಾಲಘಟ್ಟಕ್ಕೂ ಮುನ್ನ ಪರವಾಗಿಲ್ಲ ಎಂಬುವಂತಿದ್ದ ಬಸ್ ಸಮಸ್ಯೆ ನಂತರದ ದಿನಗಳಲ್ಲಿ ಹೆಚ್ಚಾಗಿದೆ. ಅದರಲ್ಲೂ ಮುಂಜಾನೆ ವೇಳೆ ಉದ್ಯೋಗಕ್ಕಾಗಿ ತೆರಳುವ ಪ್ರಯಾಣಿಕರು, ಶಾಲಾ ಕಾಲೇಜುಗಳಿಗೆ ಹೋಗುಬೇಕಾಗಿರುವ ವಿದ್ಯಾರ್ಥಿಗಳು ಬಸ್ ಬರದೆ ಗಂಟೆಗಟ್ಟಲೆ ರಸ್ತೆಯಲ್ಲಿ ಕಾದು ನಿಲ್ಲುವ ದೃಶ್ಯಗಳು ಸಾಮಾನ್ಯವಾಗಿವೆ.

ವಿದ್ಯಾರ್ಥಿಗಳ ಪ್ರತಿಭಟನೆ: ದೊಡ್ಡಬಳ್ಳಾಪುರ ವ್ಯಾಪ್ತಿಯಲ್ಲಿ ಬಸ್‌ಗಾಗಿ ಆಗಾಗ ಪ್ರತಿಭಟನೆ, ಧರಣಿಗಳು ನಡೆಯುತ್ತಲೇ ಇರುತ್ತವೆ, ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟಿಸುವುದು, ರಸ್ತೆ ಮಧ್ಯೆದಲ್ಲೆ ಕುಳಿತು ಧರಣಿ ನಡೆಸುವುದು ಸಾಮಾನ್ಯವಾಗಿದೆ. ಇಂಥ ಸಂದರ್ಭದಲ್ಲಿ ಓಡೋಡಿ ಬರುವ ಸಾರಿಗೆ ಅಧಿಕಾರಿಗಳು ಇದನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು, ಕೆಲವೇ ದಿನಗಳಲ್ಲಿ ಸರಿಪಡಿಸಲಾಗುವುದು, ಹೆಚ್ಚಿನ ಬಸ್ ಸಂಚಾರಕ್ಕೆ ಮನವಿ ಮಾಡಲಾಗಿದೆ ಹೀಗೆ ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆ ಹೊರತು ಇದುವರೆಗೆ ಸಮರ್ಪಕವಾಗಿ ಬಸ್‌ಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸಭೆಗೆ ಕಿಮ್ಮತ್ತಿಲ್ಲ: ಈ ಹಿಂದೆ ಶಾಸಕರಾಗಿದ್ದ ವೆಂಕಟರಮಣ್ಯ ಅವರ ಕಾಲದಿಂದಲೂ ದೊಡ್ಡಬಳ್ಳಾಪುರ ವ್ಯಾಪ್ತಿಯಲ್ಲಿ ಬಸ್‌ಗಳ ಸಮಸ್ಯೆ ಕಾಡುತ್ತಿದೆ, ಅದು ಈಗ ಶಾಸಕರಾಗಿರುವ ಧೀರಜ್‌ಮುನಿರಾಜು ಕಾಲದಲ್ಲಿಯೂ ಮುಂದುವರೆದಿದೆ. ಬಸ್ ಸಮಸ್ಯೆ ಸರಿಪಡಿಸುವ ಸಂಬಂಧ ಶಾಸಕ ದೀರಜ್‌ಮುನಿರಾಜು ಸಾರಿಗೆ ಅಧಿಕಾರಿಗಳ ಸಭೆ ನಡೆಸಿದ್ದಾರೆ, ಸಾರ್ವಜನಿಕರ ಕುಂದುಕೊರತೆ ಸಭೆಗಳಲ್ಲೂ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡಿದ್ದಾರೆ. ಆದರೆ ಈ ಸಮಸ್ಯೆ ತಾರ್ಕಿಕ ಪರಿಹಾರವಂತೂ ಸಿಕ್ಕಿಲ್ಲ. ಸಭೆಗಳಿಗೆ ಯಾವುದೇ ಕಿಮ್ಮತ್ತಿಲ್ಲದಂತಾಗಿದ್ದು, ಪ್ರಯಾಣಿಕರ ಪರದಾಟಕ್ಕೆ ಕೊನೆ ಇಲ್ಲದಂತಾಗಿದೆ.

ಕೆಟ್ಟು ನಿಲ್ಲುವ ಬಸ್‌ಗಳು: ಇನ್ನು ಬೆರಳೇಣಿಕೆಯಷ್ಟು ಬಸ್ ಸಂಚಾರವಿರುವ ಮಾರ್ಗಗಳಲ್ಲಿ ಸಂಚರಿಸುತ್ತಿರುವ ಬಸ್‌ಗಳು ಹಳೇಯದಾಗಿದ್ದು, ಆಗಾಗ ರಸ್ತೆ ಮಧ್ಯೆದಲ್ಲಿಯೇ ಕೆಟ್ಟು ನಿಲ್ಲುತ್ತವೆ, ಬಸ್‌ಗಳ ಪಂಚರ್ ಸಾಮಾನ್ಯ ಎನ್ನುವಂತಾಗಿದೆ. ದಾರಿ ಮಧ್ಯೆ ಕೆಟ್ಟು ನಿಲ್ಲುವ ಬಸ್‌ಗಳಿಂದ ಇಳಿದು ಪ್ರಯಾಣಿಕರು ಕಿಲೋಮೀಟರ್‌ಗಟ್ಟಲೆ ನಡೆದುಕೊಂಡು ಹೋಗುವ ಸನ್ನಿವೇಶಗಳು ಸಾಮಾನ್ಯವಾಗಿವೆ.

ನೂಕು ನುಗ್ಗಲು: ಇನ್ನು ಈ ಮಾರ್ಗಗಳಲ್ಲಿ ಬರುವ ಬೆರಳೇಣಿಕೆ ಬಸ್‌ಗಳಲ್ಲೇ ವಿದ್ಯಾರ್ಥಿಗಳು, ವೃದ್ಧರು, ಮಹಿಳೆಯರು ಸೇರಿ ಪ್ರಯಾಣಿಕರು ತುಂಬಿಕೊಳ್ಳುವುದರಿಂದ ನೂಕುನುಗ್ಗಲು ಏರ್ಪಡುತ್ತಿದೆ, ಬಸ್‌ನ ಬಾಗಿಲಿಗೆ ಜೋತು ಬಿದ್ದು ಪ್ರಯಾಣಿಸುವ ದೃಶ್ಯಗಳು ಕಂಡುಬರುತ್ತವೆ,. ಇಂಥ ಅಪಾಯಕಾರಿ ಪ್ರಯಾಣದಿಂದ ದುರಂತಗಳು ಸಂಭವಿಸುವ ಆತಂಕ ಪಾಲಕರದ್ದಾಗಿದೆ, ಮಕ್ಕಳು ಶಾಲೆಗಳಿಗೆ ಹೋಗಿಬರುವುದೇ ದೊಡ್ಡ ಸಾಹಸ ಎನ್ನುವಂತಾಗಿದೆ.

 ಚಿಕ್ಕಬೆಳವಂಗಲದಿಂದ ದೊಡ್ಡಬಳ್ಳಾಪುರಕ್ಕೆ ಬಸ್ ಇಲ್ಲ: ಚಿಕ್ಕಬೆಳವಂಗಲ ಮಾರ್ಗವಾಗಿ ದೊಡ್ಡಬಳ್ಳಾಪುರ ನಗರಕ್ಕೆ ಸಂಚರಿಸುವ ಬಸ್‌ಗಳು ಬೆರಳೇಣಿಯಷ್ಟಿದ್ದು, ಪ್ರಯಾಣಿಕರು ಪ್ರತಿನಿತ್ಯ ಪರದಾಡುವಂತಾಗಿದೆ. ಅದರಲ್ಲೂ ಮುಂಜಾನೆ 8 ರಿಂದ 9 ಗಂಟೆ ಅವಧಿಯಲ್ಲಿ ಯಾವುದೇ ಬಸ್‌ಗಳು ಬರುತ್ತಿಲ್ಲ. ಮುದ್ದಲಿಂಗನಹಳ್ಳಿ. ಹುಲಿಕುಂಟೆ. ಕತ್ತಿಹೊಸಹಳ್ಳಿ. ಚಿಕ್ಕಬೆಳವಂಗಲ, ದೊಡ್ಡಬೆಳವಂಗಲ, ನಾರನಹಳ್ಳಿ, ರಾಮೇಶ್ವರ ಕೋಡಿ ಸೇರಿ ಇನ್ನಿತರ ಗ್ರಾಮಗಳ ನೂರಾರು ವಿದ್ಯಾರ್ಥಿಗಳು ಬಸ್ ಹಿಡಿಯಲು ಪರದಾಡುವಂತಾಗಿದೆ, ಇದರಿಂದ ಸರಿಯಾದ ಸಮಯಕ್ಕೆ ಶಾಲಾ ಕಾಲೇಜು ತಲುಪಲು ಸಾಧ್ಯವಾಗದೆ ಶಿಕ್ಷಣಕ್ಕೆ ಪೆಟ್ಟು ಬೀಳುತ್ತಿದೆ ಎಂದು ವಿದ್ಯಾರ್ಥಿಗಳು ಅಲವತ್ತುಗೊಳ್ಳುತ್ತಿದ್ದಾರೆ.

ದೊಡ್ಡಬಳ್ಳಾಪುರ ತಾಲೂಕು ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಬಸ್ ಸೌಕರ್ಯಕ್ಕೆ ಪರದಾಡುವಂತಾಗಿದೆ, ಯಾವುದೇ ಸರ್ಕಾರಗಳು ಬಂದರೂ ಗ್ರಾಮೀಣ ಪ್ರದೇಶದ ಬಗ್ಗೆ ಯಾರೂ ಕಾಳಜಿ ತೋರಿಸುವುದಿಲ್ಲ. ಪ್ರತಿನಿತ್ಯ ಬಸ್‌ಗಾಗಿ ಕಾಯುವುದು, ಬಸ್‌ಗಳಿಂದ ಓಡುವುದು ಅನಿವಾರ್ಯ ಕರ್ಮವಾಗಿ ಪರಿಣಮಿಸಿದೆ, ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಈಬಗ್ಗೆ ಗಮನ ಹರಿಸಬೇಕು, ಬಸ್‌ಗಳ ಸಂಖ್ಯೆ ಹೆಚ್ಚಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು.

ಸಿದ್ದಲಿಂಗಯ್ಯ, ಕತ್ತಿಹೊಸಹಳ್ಳಿ ನಿವಾಸಿ

ಶಾಲಾ ಕಾಲೇಜುಗಳಿಗೆ ಹೋಗಿಬರುವುದೇ ನಮಗೆ ದೊಡ್ಡ ಸವಾಲು ಆಗಿದೆ, ಬಸ್‌ಗಳಿಲ್ಲದೆ ಖಾಸಗಿ ವಾಹನಗಳ ಮೊರೆ ಹೋಗಬೇಕಿದೆ, ಗಂಟೆಗಟ್ಟಲೆ ರಸ್ತೆ ಬದಿಯಲ್ಲಿ ನಿಂತು ಬಸ್ ಬರುವುದನ್ನೇ ಕಾಯುವ ಗೋಳು ನಮ್ಮದಾಗಿದೆ, ಸರಿಯಾದ ಸಮಸ್ಯೆಗೆ ಶಾಲೆಗೆ ಹೋಗಲಾಗುತ್ತಿಲ್ಲ, ಇದು ಒಂದೆರೆಡದು ದಿನದ ಸಮಸ್ಯೆಯಾದರೆ ಪರವಾಗಿಲ್ಲ, ಪ್ರತಿನಿತ್ಯವೂ ಇದೇ ಸಂಕಷ್ಟ ಎದುರಿಸಬೇಕಾಗಿದೆ. ಯಾರೂ ನಮ್ಮ ಅಳಲಿಗೆ ಸ್ಪಂದಿಸುತ್ತಿಲ್ಲ.

ಕಿಶೋರ್, ಕಾಲೇಜು ವಿದ್ಯಾರ್ಥಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net