ಸಮಯಕ್ಕೆ ಸರಿಯಾಗಿ ಬಾರದ ಬಸ್: ಮೊತ್ತಹಳ್ಳಿಯಲ್ಲಿ ಬೀದಿಗಿಳಿದ ವಿದ್ಯಾರ್ಥಿಗಳು

Bus problem Student protest in mothhalli village mandya
Published on

ಮಂಡ್ಯ: ನಿಗದಿತ ಸಮಯಕ್ಕೆ ಬಸ್‌ಗಳು ಬಾರದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ಶಾಲೆ, ಕಾಲೇಜು ವಿದ್ಯಾರ್ಥಿಗಳು ತಮ್ಮ ಪಾಲಕರೊಂದಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ತಡೆದು ಪ್ರತಿಭಟನೆ ನಡೆಸಿ ರಾಜ್ಯ ಸಾರಿಗೆ ನಿಗಮ ಹಾಗೂ ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿದರು.
ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಮೊತ್ತಹಳ್ಳಿ ಗ್ರಾಮದ ಮಂಡ್ಯ- ಬನ್ನೂರು ಹೆದ್ದಾರಿಯಲ್ಲಿ ವಿದ್ಯಾರ್ಥಿಗಳು ರಸ್ತೆ ತಡೆ ನಡೆಸಿ ಬಸ್‌ಗಳನ್ನು ಅಡ್ಡಗಟ್ಟಿದರು. ಒಂದು ಬಸ್‌ನಲ್ಲಿ ಸುಮಾರು 130ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದು, ಬಸ್‌ಗಳ ಸೇವೆ ನಮಗೆ ಸಮರ್ಪಕವಾಗಿ ಸಿಗುತ್ತಿಲ್ಲ ಎಂದು ಕಿಡಿಕಾರಿದರು.
ಗ್ರಾಮದ ಬಳಿ ಹೆದ್ದಾರಿಯಲ್ಲಿ ಸೇರಿದ ಪ್ರತಿಭಟನಾಕಾರರು ಸುಮಾರು ಅರ್ಧ ತಾಸುಗಳ ಕಾಲ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಮಾತ್ರ ತಡೆದು ಸಮಸ್ಯೆ ನಿವಾರಿಸಬೇಕು ಎಂದು ಪಟ್ಟು ಹಿಡಿದರು. ಸಾರಿಗೆ ನಿಗಮದ ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸಬೇಕು ಎ ಂದು ಹಠ ಹಿಡಿದರು.

ವಿಷಯ ತಿಳಿದು ಕೆಎಸ್‌ಆರ್‌ಟಿಸಿ ಮಂಡ್ಯ ಘಟಕದ ವ್ಯವಸ್ಥಾಪಕ ರಘು ಸ್ಥಳಕ್ಕೆ ಆಗಮಿಸಿ, ಪ್ರತಿಭಟನಾಕಾರರ ಮನವೊಲಿಕೆಗೆ ಮುಂದಾದರು.
ಆದರೆ ತಣ್ಣಗಾಗದ ಪ್ರತಿಭಟನಾಕಾರರು, ಗ್ರಾಮೀಣ ಭಾಗದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಸೇವೆ ಸಮರ್ಪಕವಾಗಿಲ್ಲ. ಜತೆಗೆ, ಚಾಲಕರು ಬಸ್‌ಗಳನ್ನು ನಿಲ್ಲಿಸದೇ ವಿದ್ಯಾರ್ಥಿಗಳೊಂದಿಗೆ ಬಿರುಸಾಗಿ ನಡೆದುಕೊಳ್ಳುತ್ತಾರೆ. ಅಲ್ಲದೆ ಮೂರು ಬಸ್‌ಗಳನ್ನು ಸಂಚರಿಸುವಷ್ಟ ಪ್ರಯಾಣಿಕರು ಒಂದೇ ಬಸ್‌ನಲ್ಲಿ ಸಂಚರಿಸುತ್ತಾರೆ. ವಿದ್ಯಾರ್ಥಿಗಳು ಬಸ್‌ಗಳ ಬಾಗಿಲ ಬಳಿಯೇ ಸರ್ಕಸ್ ಮಾಡಿಕೊಡು ಶಾಲೆ, ಕಾಲೇಜುಗಳಿಗೆ ತೆರಳುವ ಪರಿಸ್ಥಿತಿ ಇದೆ ಎಂದು ಪ್ರತಿಭಟನಾನಿರತರು ಕಿಡಿಕಾರಿದರು.
ಮನವಿ ಆಲಿಸಿದ ವ್ಯವಸ್ಥಾಪಕ ರಘು ಮಾತನಾಡಿ, ಈ ಮಾರ್ಗದಲ್ಲಿ ಹೆಚ್ಚು ಬಸ್‌ಗಳನ್ನು ನಿಯೋಜಿಸಿ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗುವುದು. ಮುಂದಿನ ಸೋಮವಾರದಿಂದಲೇ ಹೆಚ್ಚುವರಿಯಾಗಿ ಬಸ್‌ಗಳನ್ನು ನಿಯೋಜಿಸಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆ ಹಿಂಪಡೆದು ನಿಗಮದ ಬಸ್‌ಗಳ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.
ಪ್ರತಿಭಟನೆಯಲ್ಲಿ ಮೊತ್ತಹಳ್ಳಿ ಗ್ರಾಮದ ಮುಖಂಡರಾದ ಸಚಿನ್, ಅಗ್ರಿ ಪ್ರವೀಣ್, ವಿನಯ್, ಚಂದು ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net