ಹಳ್ಳಿಗಳಿಗಿಲ್ಲ ಸಾರಿಗೆ ಸಂಚಾರ ; ನಗರ-ಪಟ್ಟಣ ಪ್ರದೇಶಗಳಿಗೆ ಸೀಮಿತ

24CBP2
Published on

ಚಿಕ್ಕಬಳ್ಳಾಪುರ : ಅನ್‌ಲಾಕ್ ಬಳಿಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಸಂಚಾರ ಪ್ರಾರಂಭವಾಗಿದೆ. ಆದರೆ, ಪ್ರಸ್ತುತ ನಗರ, ಪಟ್ಟಣ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದ್ದು, ಜಿಲ್ಲೆಯ ಹಳ್ಳಿಗರು ಸಂಚಾರಕ್ಕೆ ಪ್ರಯಾಸ ಪಡುವಂತಾಗಿದೆ.

ಲಾಕ್‌ಡೌನ್ ಹಿನ್ನೆಯಲ್ಲಿ ಸಂಚಾರ ನಿಲ್ಲಿಸಿದ್ದ ಸಾರಿಗೆ ಸಂಸ್ಥೆಯ ಬಸ್‌ಗಳು ಅನ್‌ಬಳಿಕ ಜೂ.21 ರಿಂದ ರಸ್ತೆಗಿಳಿದಿವೆ. ಮೊದಲ ಹಂತದಲ್ಲಿ ಪ್ರತಿ ಡಿಪೋದಿಂದ ಕನಿಷ್ಠ 30 ಬಸ್‌ಗಳನ್ನು ಬಿಡಲಾಗಿದ್ದು, ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ. ಸದ್ಯ ಜಿಲ್ಲಾ ಕೇಂದ್ರದಿಂದ ಬಾಗೇಪಲ್ಲಿ, ಗೌರಿಬಿದನೂರು, ಶಿಡ್ಲಘಟ್ಟ, ಚಿಂತಾಮಣಿ, ಬೆಂಗಳೂರು, ಕೋಲಾರ, ದೊಡ್ಡಬಳ್ಳಾಪುರಕ್ಕೆ ಬಸ್ ನಿಗದಿತ ಅವಧಿಯಲ್ಲಿ ಸಂಚರಿಸುತ್ತಿದ್ದು, ಇದರಲ್ಲಿ ರಾಜಧಾನಿ ಮಾರ್ಗದ ಪ್ರಯಾಣವೇ ಹೆಚ್ಚಿದೆ.

ಗ್ರಾಮೀಣ ಭಾಗದ ಜನರ ಅಳಲು: ಗ್ರಾಮೀಣ ಭಾಗಕ್ಕೆ ತೆರಳಲು ಬಸ್ ವ್ಯವಸ್ಥೆ ಇಲ್ಲ ಎಂಬುದು ಹಳ್ಳಿಗರ ಅಳಲು ತೋಡಿಕೊಳ್ಳುತ್ತಿದ್ದಾರೆ. ಶಾಲಾ ಶಿಕ್ಷಕರು, ಗ್ರಾಮೀಣ ಭಾಗದ ಇತರ ನೌಕರರು ಸೇರಿ ಅನೇಕರು ಸಾರಿಗೆ ಸೇವೆಯ ವ್ಯತ್ಯಯದ ಹಿನ್ನೆಲೆಯಲ್ಲಿ ಪ್ರತಿನಿತ್ಯ ಪರದಾಡುವಂತಾಗಿದೆ. ಪ್ರಸ್ತುತ ಹಳ್ಳಿಗಳಿಗೆ ಬಸ್‌ಗಳು ಹೋಗುತ್ತಿಲ್ಲ. ಇದರಿಂದ ನಗರ, ಪಟ್ಟಣ ಪ್ರದೇಶಗಳಲ್ಲಿ ಕಚೇರಿ ಕೆಲಸ ಕಾರ್ಯಗಳಿಗೆ ಹೋಗಿ ಬರಲು ಜನರು, ಗ್ರಾಮೀಣ ಭಾಗದಲ್ಲಿ ಕರ್ತವ್ಯ ನಿರ್ವಹಿಸುವ ನೌಕರರ ಆತ್ಮೀಯರ ದ್ವಿಚಕ್ರ ವಾಹನಗಳನ್ನು ನೆಚ್ಚಿಕೊಳ್ಳುವಂತಾಗಿದೆ.

ಮಾರ್ಗಸೂಚಿ ಪಾಲನೆಗೆ ವಿಳಂಬ: ಕರೊನಾ ಮಾರ್ಗಸೂಚಿ ನಿಯಮ ಪಾಲನೆ ಮತ್ತು ಪ್ರಯಾಣಿಕರ ನಿರೀಕ್ಷೆಯಿಂದ ಕಾಯುವಿಕೆಯು ತ್ವರಿತ ಪ್ರಯಾಣಕ್ಕೆ ತೊಡಕಾಗಿದೆ. ನಿರ್ದಿಷ್ಟ ಮಾರ್ಗದಲ್ಲಿ ನಿರ್ದಿಷ್ಟ ಸಂಖ್ಯೆಯ ಪ್ರಯಾಣಿಕರು ಬಂದಿರುವುದನ್ನು ಖಾತ್ರಿಪಡಿಸಿಕೊಂಡ ಬಳಿಕ ಬಸ್ ಸಂಚಾರಕ್ಕೆ ಅನುಮತಿ ನೀಡಲಾಗುತ್ತಿದೆ. ಇದರಿಂದ ಜನರು ನಿಲ್ದಾಣಕ್ಕೆ ಬಂದು ಗಂಟೆಗಟ್ಟಲೇ ಕಾಯುವಂತಾಗಿದೆ. ಪ್ರಯಾಣಕ್ಕೆ ಹೆಚ್ಚು ಸಮಯ ಹಿಡಿಯುತ್ತಿದೆ. ಜತೆಗೆ ಸೋಂಕಿನ ಆತಂಕದಲ್ಲಿ ಬಹುತೇಕರು ಬಸ್ ಸೇವೆಗೆ ಹಿಂದೇಟು ಹಾಕುತ್ತಿದ್ದಾರೆ.

35 ಕೋಟಿ ರೂ. ನಷ್ಟ : ಎರಡನೇ ಅಲೆಯ ಲಾಕ್‌ಡೌನ್‌ನಿಂದಾಗಿ ಸಾರಿಗೆ ಸಂಸ್ಥೆಗೆ 35 ಕೋಟಿಗೂ ಹೆಚ್ಚು ನಷ್ಟ ಉಂಟಾಗಿದೆ. ಚಿಕ್ಕಬಳ್ಳಾಪುರ ವಿಭಾಗೀಯ ನಿಯಂತ್ರಣದ ಕೇಂದ್ರದ ವ್ಯಾಪ್ತಿಯಲ್ಲಿ ಬಾಗೇಪಲ್ಲಿ, ಚಿಂತಾಮಣಿ, ದೊಡ್ಡಬಳ್ಳಾಪುರ, ಗೌರಿಬಿದನೂರು ಹಾಗೂ ಚಿಕ್ಕಬಳ್ಳಾಪುರ ಸೇರಿ 5 ಡಿಪೋಗಳಿದ್ದು ನಿತ್ಯ 800 ಮಾರ್ಗಗಳಲ್ಲಿ ಬಸ್‌ಗಳ ಸಂಚಾರ ಇರುತ್ತಿತ್ತು. ಆದರೆ, ಈಗ ಹಲವು ರೂಟ್‌ಗಳ ಸಂಚಾರದ ಸ್ಥಗಿತದಿಂದ ಆದಾಯ ಕುಸಿತ ಕಂಡಿದೆ.

ಕರೊನಾ ಲಾಕ್‌ಡೌನ್ ಸಡಿಲಿಕೆಯ ಬಳಿಕ ಬಸ್ ಸಂಚಾರ ಪ್ರಾರಂಭವಾಗಿದೆ. ನಗರ, ಪಟ್ಟಣ ಪ್ರದೇಶಗಳಿಗೆ ಸಮಸ್ಯೆ ಇಲ್ಲ. ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಮುಂಬರುವ ದಿನಗಳಲ್ಲಿ ಎಂದಿನಂತೆ ಸೇವೆ ಲಭಿಸಲಿದೆ. ವಿ.ಬಸವರಾಜ್, ವಿಭಾಗೀಯ ನಿಯಂತ್ರಣಾಧಿಕಾರಿ, ಸಾರಿಗೆ ಸಂಸ್ಥೆ, ಚಿಕ್ಕಬಳ್ಳಾಪುರ ನಗರ, ಪಟ್ಟಣ ಪ್ರದೇಶಗಳ ಮಾರ್ಗದಲ್ಲಿ ಸಾರಿಗೆ ಸಂಸ್ಥೆಯ ಬಸ್‌ಗಳು ಸಂಚರಿಸುತ್ತಿವೆ. ಆದರೆ, ನಮ್ಮ ಶಾಲೆ ಇರುವ ಹಳ್ಳಿಗೆ ಇಲ್ಲ. ಇದರಿಂದ ಕೆಲಸಕ್ಕೆ ಹೋಗಲು ದ್ವಿಚಕ್ರ ವಾಹನವನ್ನು ನೆಚ್ಚಿಕೊಳ್ಳುವಂತಾಗಿದೆ. ನಾರಾಯಣಸ್ವಾಮಿ, ಶಿಕ್ಷಕ, ಚಿಕ್ಕಬಳ್ಳಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net