ಬಸ್ ಕೆಟ್ಟರೆ ಸಿಬ್ಬಂದಿಯೇ ತಳ್ಳಬೇಕು

bus
Published on

 ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ

ದೇವನಹಳ್ಳಿಯ ಚಪ್ಪರದಕಲ್ಲಿನಲ್ಲಿರುವ ಜಿಲ್ಲಾಡಳಿತಭವನದಲ್ಲಿ ಕಾರ್ಯನಿರ್ವಹಿಸುವ ಜಿಲ್ಲಾಡಳಿತದ ಸಿಬ್ಬಂದಿಗೆ ಸಾರಿಗೆ ಅವ್ಯವಸ್ಥೆ ಗೋಳಾಗಿ ಕಾಡುತ್ತಿದೆ. ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲದೆ ದಿನನಿತ್ಯ ಕಚೇರಿಗೆ ಬಂದು ಹೋಗುವ ಸಿಬ್ಬಂದಿ ಹೈರಾಣಾಗುತ್ತಿದ್ದಾರೆ.

ಚಪ್ಪರದಕಲ್ಲಿನಿಂದ ಬೆಂಗಳೂರಿಗೆ (ಯಲಹಂಕದವರೆಗೆ) ಇರುವ ಕುಂದಾಣ ಮಾರ್ಗವಾಗಿ ಸಂಚರಿಸುವ ಏಕೈಕ ಬಿಎಂಟಿಬಿ ಬಸ್‌ನ್ನೇ ನೂರಾರು ಸಿಬ್ಬಂದಿ ಅವಲಂಬಿಸಿದ್ದಾರೆ. ಬೆಳಗ್ಗೆ ಒಂದು ಟ್ರಿಪ್ ಹಾಗೂ ಸಂಜೆ ಒಂದು ಟ್ರಿಪ್ ಸಂಚರಿಸುವ ಈ ಬಸ್ ಪ್ರತಿನಿತ್ಯ ಸರಿಯಾದ ಸಮಯಕ್ಕೆ ಬರುತ್ತದೆ ಎಂಬ ಗ್ಯಾರಂಟಿಯೂ ಇಲ್ಲ. ಬಸ್ ಬಂದರೂ ಗಮ್ಯ ತಲುಪುತ್ತದೆ ಎಂಬ ವಿಶ್ವಾಸವೂ ಇಲ್ಲ ಎಂಬಂತಾಗಿದೆ.

ಡಕೋಟ ಎಕ್ಸ್‌ಪ್ರೆಸ್: ಜಿಲ್ಲಾಡಳಿತಭವನದಿಂದ ಕುಂದಾಣ ಮಾರ್ಗವಾಗಿ ಸಂಚರಿಸುವ ಬಿಎಂಟಿಬಿ ಬಸ್‌ಗೆ ಸಿಬ್ಬಂದಿ ಡಕೋಟ ಎಕ್ಸ್‌ಪ್ರೆಸ್ ಎಂದೇ ನಾಮಕರಣ ಮಾಡಿದ್ದಾರೆ. ಏಕೆಂದರೆ ವಾರದಲ್ಲಿ ಒಮ್ಮೆಯಾದರೂ ಕೆಟ್ಟು ನಿಲ್ಲುವುದು ಸಹಜ ಎಂಬಂತಾಗಿದೆ. ಒಮ್ಮೆ ಪಂಚರ್ ಎಂದರೆ ಮತ್ತೊಮ್ಮೆ ಸ್ಟಾರ್ಟ್ ಆಗುತ್ತಿಲ್ಲ, ಮತ್ತೊಮ್ಮೆ ಪಿಕ್‌ಅಪ್ ತೆಗೆದುಕೊಳ್ಳುತ್ತಿಲ್ಲ. ಹೀಗೆ ನಾನಾ ಸಮಸ್ಯೆಗಳಿರುವ ಬಸ್‌ನ್ನು ಈ ಮಾರ್ಗದಲ್ಲಿ ನಿಯೋಜಿಸಲಾಗಿದೆ ಎಂಬುದು ಸಿಬ್ಬಂದಿ ಆರೋಪವಾಗಿದೆ. ಹಲವು ಬಾರಿ ಬಸನ್ನು ಸಿಬ್ಬಂದಿಯೇ ತಳ್ಳಿಕೊಂಡು ಹೋಗಿ ಸ್ಟಾರ್ಟ್ ಮಾಡಿರುವ ನಿದರ್ಶನಗಳು ಸಾಕಷ್ಟಿವೆ. ಡಿಸಿ ಕಚೇರಿಯಿಂದ ಮನೆಗೆ ಮನೆಯಿಂದ ಡಿಸಿ ಕಚೇರಿಗೆ ಈ ಬಸ್‌ನಲ್ಲಿ ಸಂಚರಿಸುವಷ್ಟರಲ್ಲೇ ಜೀವನ ಮುಗಿದು ಹೋಗುತ್ತಿದೆ ಎಂದು ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ.

ಇರೋದೊಂದೆ ಬಸ್: ಡಿಸಿ ಕಚೇರಿಯಿಂದ ಶಾರ್ಟ್‌ಕಟ್ ರೂಟ್ ಆಗಿರುವ ಕುಂದಾಣ ಮಾರ್ಗದಲ್ಲಿ ಯಾವುದೇ ಬಸ್ ಸಂಚಾರವಿಲ್ಲ. ಉತ್ತಮ ರಸ್ತೆ ಹಾಗೂ ಬೆಂಗಳೂರಿಗೆ ಸಮೀಪದ ರಸ್ತೆಯಾಗಿದ್ದರೂ ಬಿಎಂಟಿಬಿ ಬಸ್‌ಗಳ ಸಂಚಾರವಿಲ್ಲ. ಈ ರಸ್ತೆಯಲ್ಲಿ ಸಾಕಷ್ಟು ಗ್ರಾಮಗಳು ಬರುತ್ತವೆ ಪ್ರತಿನಿತ್ಯ ಬೆಂಗಳೂರಿಗೆ ಹೋಗಿಬರುವ ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ಸಾಕಷ್ಟಿದ್ದಾರೆ. ಆದರೆ ಈ ಭಾಗದಲ್ಲಿ ಬಸ್ ಸಂಚಾರ ಹೆಚ್ಚಿಸುವಂತೆ ಈ ಭಾಗದ ಗ್ರಾಮಸ್ಥರು ಹಲವು ಬಾರಿ ಸಂಬಂಧಪಟ್ಟವರಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜವಾಗಿಲ್ಲ. ಅಲ್ಲದೆ ಈ ರಸ್ತೆಯಲ್ಲಿ ಎಲ್ಲಿಯೂ ಬಸ್ ತಂಗುದಾಣವಿಲ್ಲ. ಮಳೆ, ಬಿಸಿಲಿನಲ್ಲೇ ಪ್ರಯಾಣಿಕರು ಬಸ್‌ಗಾಗಿ ಕಾಯುವ ಪರಿಸ್ಥಿತಿ ಇದೆ. ಈ ಮಾರ್ಗ ಬಿಟ್ಟರೆ ದೊಡ್ಡಬಳ್ಳಾಪುರ ಅಥವಾ ದೇವನಹಳ್ಳಿಗೆ ಹೋಗಬೇಕು ಅಲ್ಲಿಂದ ಮತ್ತೊಂದು ಬಸ್ ಹಿಡಿದು ಬೆಂಗಳೂರಿನ ಕಡೆಗೆ ಸಾಗಬೇಕು, ರಾಜಧಾನಿಗೆ ಹೊಂದಿಕೊಂಡಂತಿರುವ ದೇವನಹಳ್ಳಿಯ ಜನ ಬೆಂಗಳೂರಿಗೆ ಸಾಗಲು ಕೊಂಕಣ ಸುತ್ತಿ ಮೈಲಾರಕ್ಕೆ ಬರುವಂತಾಗಿದೆ ಎಂಬ ಬೇಸರ ವ್ಯಕ್ತವಾಗಿದೆ.

ಬಸ್ ಶೆಲ್ಟರ್ ಮಾಡಲು ನಿರಾಸಕ್ತಿ: ಡಿಸಿ ಕಚೇರಿ ಬಳಿ ಸಣ್ಣದೊಂದು ಬಸ್ ಶೆಲ್ಟರ್ ನಿರ್ಮಾಣ ಮಾಡಬೇಕು ಎಂಬುದು ಹಲವು ವರ್ಷಗಳ ಬೇಡಿಕೆಯಾಗಿದೆ, ಇಲ್ಲಿನ ಸಿಬ್ಬಂದಿ ಹಾಗೂ ಡಿಸಿ ಕಚೇರಿಗೆ ಬರುವ ಸಾವಿರಾರು ಸಾರ್ವಜನಿಕರು ಬಸ್ ಶೆಲ್ಟರ್ ಇಲ್ಲದೆ ಪರದಾಡುವಂತಾಗಿದೆ. ಈ ಬಗ್ಗೆ ಜಿಪಂ ಸಿಇಒ, ಜಿಲ್ಲಾಧಿಕಾರಿ ಸೇರಿ ಹಲವು ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಯಾವುದೇ ಅಧಿಕಾರಿಗಳು ಈ ಬಗ್ಗೆ ಗಮನ ನೀಡುತ್ತಿಲ್ಲ. ಹಿರಿಯ ಅಧಿಕಾರಿಗಳಿಗೆ ವಾಹನ ಸೌಲಭ್ಯವಿದೆ ಉಳಿದವರ ಬಗ್ಗೆ ಅವರಿಗೆ ಚಿಂತೆ ಇಲ್ಲ ಎಂಬುದು ಸಿಬ್ಬಂದಿಯ ಬೇಸರಕ್ಕೆ ಕಾರಣವಾಗಿದೆ.

ಮೆಜೆಸ್ಟಿಕ್‌ಗೆ ಹೋಗಬೇಕು: ಈ ಮಾರ್ಗದಲ್ಲಿ ಸಂಚರಿಸುವ ಬಿಎಂಟಿಸಿ ಬಸ್ ಯಲಹಂಕದವರೆಗೆ ಮಾತ್ರ ಸಂಚರಿಸುತ್ತದೆ. ಇಲ್ಲಿ ಇಳಿದು ಬೆಂಗಳೂರಿನ ವಿವಿಧ ಕಡೆ ಸಾಗಲು ಬೇರೊಂದು ಬಸ್ ಹಿಡಿಯಬೇಕಿದೆ. ಇದೇ ಬಸ್‌ನ್ನು ಮೆಜೆಸ್ಟಿಕ್‌ವರೆಗೆ ವಿಸ್ತರಿಸಿದರೆ ಸಾಕಷ್ಟು ಅನುಕೂಲವಾಗಲಿದೆ. ಮುಖ್ಯವಾಗಿ ಸಮಯ ಉಳಿಯುತ್ತದೆ ಎಂಬುದು ಜಿಲ್ಲಾಡಳಿತ ಸಿಬ್ಬಂದಿಯ ಮನವಿಯಾಗಿದೆ.

ಡಿಸಿ ಕಚೇರಿಯಿಂದ ಬೆಂಗಳೂರಿಗೆ ಶಾರ್ಟ್‌ಕಟ್ ಮಾರ್ಗವಾಗಿರುವ ಕುಂದಾಣ ಮಾರ್ಗದಲ್ಲಿ ಬಿಎಂಟಿಬಿ ಬಸ್‌ಗಳ ಸಂಚಾರ ಹೆಚ್ಚಿಸಿದರೆ ಸಾಕಷ್ಟು ಅನುಕೂಲವಾಗಲಿದೆ. ಅಲ್ಲದೆ ಸಂಚಾರಕ್ಕೆ ಯೋಗ್ಯವಾಗಿರುವ ಬಸ್‌ಗಳನ್ನು ನಿಯೋಜಿಸಬೇಕು. ಇದರಿಂದ ಸಿಬ್ಬಂದಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸಬೇಕೆಂಬುದು ನಮ್ಮೆಲ್ಲರ ಬೇಡಿಕೆಯಾಗಿದೆ.

ಹೆಸರೇಳಲಿಚ್ಛಿಸದ ಜಿಲ್ಲಾಡಳಿತ ಸಿಬ್ಬಂದಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net