

ನಂಜನಗೂಡು: ತಾಲೂಕಿನ ಹಾಡ್ಯ ಗ್ರಾಮದ ಬಳಿ ಲೋಕೋಪಯೋಗಿ ಇಲಾಖೆಯಿಂದ ಸೇತುವೆ ಕಾಮಗಾರಿ ನಡೆಯುತ್ತಿರುವ ಕಾರಣದಿಂದ ಸಾರಿಗೆ ಬಸ್‌ಗಳು ಬದಲಿ ಮಾರ್ಗದಲ್ಲಿ ಸಂಚರಿಸುತ್ತಿದ್ದು, ಮಡುವಿನಹಳ್ಳಿ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಬಸ್‌ಗಾಗಿ ಎರಡು ಕಿ.ಮೀ. ದೂರಕ್ಕೆ ಹೋಗಿ ಬಸ್‌ಗಾಗಿ ಕಾಯಬೇಕಿದೆ.
ನಂಜನಗೂಡು ಪಟ್ಟಣದಿಂದ 7ರಿಂದ 8 ಬಸ್‌ಗಳು ಹುರ, ಹಾಡ್ಯ, ಮಡುವಿನಹಳ್ಳಿ ಮೂಲಕ ಯಡಿಯಾಲ ಗ್ರಾಮಕ್ಕೆ ತೆರಳುತ್ತಿದ್ದವು. ಆದರೆ ಕೆಲವು ತಿಂಗಳಿನಿಂದ ಸೇತುವೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಾರಿಗೆ ಬಸ್‌ಗಳು ಬದಲಿ ಮಾರ್ಗದಲ್ಲಿ ಸಂಚಾರ ನಡೆಸುತ್ತಿವೆ. ಬಸ್ ಚಾಲಕರು ಹಾಡ್ಯದಹುಂಡಿ ಬಳಿ ತಿರುವು ಪಡೆದುಕೊಳ್ಳುತ್ತಿದ್ದು, ಮಡುವಿನಹಳ್ಳಿ ಗ್ರಾಮದ ಗ್ರಾಮಸ್ಥರು, ವಿದ್ಯಾರ್ಥಿಗಳು ದಿನನಿತ್ಯ ನಡೆದು ಹೈರಾಣಾಗುತ್ತಿದ್ದಾರೆ. ಕಾಡಂಚಿನ ಪ್ರದೇಶವಾಗಿರುವ ಕಾರಣ ಪ್ರಾಣಿಗಳ ಭೀತಿ ಕಾಡುತ್ತಿದ್ದು, ಸಂಬಂಧಪಟ್ಟ ಸಾರಿಗೆ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸಿ ಮಡುವಿನಹಳ್ಳಿಗೆ ಎಲ್ಲ ಬಸ್‌ಗಳು ಬಂದು ಹೋಗಲು ಅನುಕೂಲ ಮಾಡಿಕೊಡುವಂತೆ ಒತ್ತಾಯಿಸಿದ್ದಾರೆ.