

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಮೀಣ ಪತ್ರಕರ್ತರಿಗೆ ವೃತ್ತಿ ಸಂಬಂಧಿತ ಚಟುವಟಿಕೆಗಳಿಗೆ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಯಾಣಿಸಲು ಉಚಿತ ಬಸ್ಪಾಸ್ ಯೋಜನೆಗೆ ಅರ್ಹ ಪತ್ರಕರ್ತರಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮಾಧ್ಯಮ ಪಟ್ಟಿಯಲ್ಲಿರುವ ವಿದ್ಯುನ್ಮಾನ ಅಥವಾ ಮುದ್ರಣ ಮಾಧ್ಯಮಗಳಲ್ಲಿ ಪೂರ್ಣಾವಧಿಗೆ ನೇಮಕಗೊಂಡು 4 ವರ್ಷಗಳ ಸೇವಾನುಭವ ಹೊಂದಿರುವ ಪತ್ರಕರ್ತರು ಅರ್ಜಿ ಸಲ್ಲಿಸಬಹುದು. ನೇಮಕಾತಿ ಆದೇಶ, ವೇತನ ಪತ್ರ, ಬ್ಯಾಂಕ್ ಸ್ಟೇಟ್ಮೆಂಟ್ಗಳ ಪೈಕಿ ಒಂದು ದಾಖಲೆ ಒದಗಿಸಬೇಕು.
ಜಿಲ್ಲಾ ವ್ಯಾಪ್ತಿಯಲ್ಲಿ ಸಂಚರಿಸುವ ಕರ್ನಾಟಕ ಸಾರಿಗೆ ಸಂಸ್ಥೆ ಬಸ್ಗಳಲ್ಲಿ ಜಿಲ್ಲಾ ವ್ಯಾಪ್ತಿಗೆ ಉಚಿತವಾಗಿ ಸಂಚರಿಸಬಹುದು. ತಹಸೀಲ್ದಾರರಿಂದ ಪಡೆದ ವಾಸಸ್ಥಳ ಪ್ರಮಾಣ ಪತ್ರ ಒದಗಿಸಬೇಕು. ಆಸಕ್ತರು ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳಲ್ಲಿ ಆನ್ಲೈನ್ ಮೂಲಕ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಅಪ್ಲೋಡ್ ಮಾಡಿದ ದಾಖಲೆಗಳು ಹಾಗೂ ಆನ್ಲೈನ್ ಅರ್ಜಿಯ ಮುದ್ರಿತ ಪ್ರತಿಯನ್ನು ಜಿಲ್ಲಾ ವಾರ್ತಾಧಿಕಾರಿ ಕಚೇರಿಗೆ ಸ್ವಯಂ ದೃಢೀಕರಿಸಿ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.