

ಬಂಟ್ವಾಳ: ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ ಫರಂಗಿಪೇಟೆ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಉರುಳಿ ಬಿದ್ದಿದೆ. ಘಟನೆಯಿಂದ ಹಲವು ಮಂದಿ ಪ್ರಯಾಣಿಕರು ಗಾಯಗೊಂಡಿದ್ದು, ಅವರನ್ನು ನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಫರಂಗಿಪೇಟೆಯ ಹತ್ತನೇ ಮೈಲಿಕಲ್ಲು ಎಂಬಲ್ಲಿ ಘಟನೆ ನಡೆದಿದ್ದು, ಸ್ಥಳೀಯರು ಹಾಗೂ ಅದೇ ರಸ್ತೆಯಲ್ಲಿ ಸಾಗುತ್ತಿದ್ದ ಇತರ ವಾಹನ ಸವಾರರು ಗಾಯಾಳುಗಳನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲು ನೆರವಾದರು. ಅತಿವೇಗದ ಚಾಲನೆಯಿಂದ ಬಸ್ ಚಾಲಕನ ನಿಯಂತ್ರಣ ಕಳೆದುಕೊಂಡಿರುವುದಾಗಿ ಸ್ಥಳೀಯರು ದೂರಿದ್ದಾರೆ. ಪ್ರಯಾಣಿಕರು ಬೆಳಗ್ಗಿನ ನಿದ್ದೆಯ ಮಂಪರಿನಲ್ಲಿದ್ದು, ಘಟನೆಯಿಂದ ಆತಂಕಗೊಂಡಿದ್ದರು. ತಕ್ಷಣ ಸ್ಥಳೀಯರು ಹೆದ್ದಾರಿಯ ಮೂಲಕ ಆಗಮಿಸುತ್ತಿದ್ದ ಕಾರು ಮತ್ತಿತರ ವಾಹನಗಳ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ಕಳುಹಿಸಿಕೊಟ್ಟರು. ಕೆಲವೇ ಹೊತ್ತಿನಲ್ಲಿ ಉರುಳಿ ಬಿದ್ದಿದ್ದ ಬಸ್ಸನ್ನು ಸ್ಥಳದಿಂದ ತೆರವುಗೊಳಿಸಲಾಗಿದೆ.