

ಮುಂಡಗೋಡ: ಚಾಲಕನು ಅತಿವೇಗ ಹಾಗೂ ಅಜಾಗರೂಕತೆಯಿಂದ ಬಸ್ ಚಲಾಯಿಸಿದ ಪರಿಣಾಮ ರಸ್ತೆಯ ಪಕ್ಕದ ಗಟಾರದಲ್ಲಿ ಪಲ್ಟಿಯಾದ ಘಟನೆ ತಾಲೂಕಿನ ಹಿರೇಹಳ್ಳಿ ಗ್ರಾಮದ ಶುಂಠಿ ವಾಷಿಂಗ್ ಪಾಯಿಂಟ್ ಬಳಿ ಶುಕ್ರವಾರ ರಾತ್ರಿ ನಡೆದಿದೆ.
ನ್ಯಾಮತುಲ್ಲಾಖಾನ್ ನಿರ್ಲಕ್ಷ್ಯ ತೋರಿದ ಬಸ್ ಚಾಲಕ. ತಾಲೂಕಿನ ಬಾಚಣಕಿ ಗ್ರಾಮದ ಪರಶುರಾಮ ಸಾಗರ, ಲಕ್ಷ್ಮೀಶ ಸಾಗರ, ಕರವಳ್ಳಿ ಗ್ರಾಮದ ನೇತ್ರಾ ಅಡೂರು, ಗುತ್ತೇವ್ವ ಅಡೂರು, ಕಲಕೊಪ್ಪ ಗ್ರಾಮದ ಈರಪ್ಪ ಹರಕುಣಿ, ಸಂತೇಮಾರ್ಕೆಟ್ ಗ್ರಾಮದ ಚನ್ನಬಸಪ್ಪ ಹರಿಜನ, ಚಿಟಗೇರಿ ಗ್ರಾಮದ ರಾಘವ ಪಾಲೆ, ಸಂಗೀತಾ ಕೊಕರೆ, ನಿಖಿತಾ ಕೊಕರೆ, ಶಿಗ್ಗಾಂವಿ ತಾಲೂಕಿನ ಅಂದಲಗಿ ಗ್ರಾಮದ ರಕ್ಷಿತಾ ಮಡ್ಲಿ , ಉಡುಪಿಯ ಕಿರಣ ಜನಾರ್ಧನ ಹೆಗಡೆ, ಹುಬ್ಬಳ್ಳಿಯ ರಿಹಾನಬೇಗಂ ತಲೇಗಾರ, ಹುಬ್ಬಳ್ಳಿಯ ಬಸ್ ನಿರ್ವಾಹಕ ಫಾಲ್ಗುಣಗೌಡ ದ್ಯಾಮನಗೌಡರ ಹಾಗೂ ಬಸ್ ಚಾಲಕ ನ್ಯಾಮತುಲ್ಲಾಖಾನ್ (43) ಗಾಯಗೊಂಡಿದ್ದು, ಇಲ್ಲಿನ ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತೆರಳಿದ್ದಾರೆ.
ಶಿರಸಿ ಕಡೆಯಿಂದ ಮುಂಡಗೋಡ ಕಡೆಗೆ ಅತಿವೇಗವಾಗಿ ಬಸ್ ಚಲಾಯಿಸಿ ರಸ್ತೆಯ ಪಕ್ಕದ ಗಟಾರದಲ್ಲಿ ಬಸ್ ಪಲ್ಟಿ ಹೊಡೆಸಿ ಅಪಘಾತಗೊಳಿಸಿರುವುದಾಗಿ ಪರಶುರಾಮ ಸಾಗರ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.