ಸಾರಿಗೆ ಸಂಸ್ಥೆ ಬಸ್ ಪಲ್ಟಿ

Bus 1
Published on

ಹುಮನಾಬಾದ್: ಬೀದರ್ ನಿಂದ ಬೆಂಗಳೂರಿಗೆ ಹೋಗುತ್ತಿದ್ದ ಈಶಾನ್ಯ ಸಾರಿಗೆ ಸಂಸ್ಥೆ ಬಸ್ ಪಲ್ಟಿಯಾದ ಘಟನೆ ತಾಲೂಕಿನ ದುಬಲಗುಂಡಿ ಕ್ರಾಸ್ ಹತ್ತಿರ ಭಾನುವಾರ ಸಂಜೆ ನಡೆದಿದ್ದು, 10ಕ್ಕೂ ಹೆಚ್ಚು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಬೀದರ್ ಡಿಪೋ-2ಕ್ಕೆ ಸೇರಿದ ಬಸ್ (ಕೆಎ 38, ಎಫ್ 1279) ಇದಾಗಿದೆ. ಬಸ್ ರಸ್ತೆ ಪಕ್ಕದ ತಗ್ಗಿಗೆ ಬಿದ್ದು ಬುಡಮೇಲಾದರೂ ಅದೃಷ್ಟವಶಾತ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಬಸ್ನಲ್ಲಿ 50 ಪ್ರಯಾಣಿಕರಿದ್ದರು. ಇದರಲ್ಲಿ 10ಕ್ಕೂ ಹೆಚ್ಚು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬೀದರ್ ನ ಬ್ರಿಮ್ಸ್ ಹಾಗೂ ಹುಮನಾಬಾದ್ ಸರ್ಕಾರಿ ಆಸ್ಪತ್ರೆಗೆ ಗಾಯಾಳುಗಳನ್ನು ದಾಖಲಿಸಿ, ಚಿಕಿತ್ಸೆ ನೀಡಲಾಗಿದೆ.

ಭಾಲ್ಕಿ ಕಡೆಯಿಂದ ವೇಗವಾಗಿ ಬಂದ ಜೀಪ್ ದುಬಲಗುಂಡಿ ಕ್ರಾಸ್ ಬಳಿಯ ತಿರುವಿನಲ್ಲಿ ನಿಯಂತ್ರಣ ಕಳೆದುಕೊಳ್ಳುತ್ತಿರುವುದು ಬಸ್ ಚಾಲಕ ಗಮನಿಸಿದ್ದಾನೆ. ಜೀಪ್ ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಯತ್ನಿಸಿದಾಗ ರಸ್ತೆ ಪಕ್ಕದಲ್ಲಿ ಉರುಳಿದೆ. ಚಾಲಕ ತೋರಿದ ಕಾಳಜಿಯಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಸ್ಥಳಕ್ಕೆ ಶಾಸಕ ರಾಜಶೇಖರ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸಲು ಆಸ್ಪತ್ರೆ ವೈದ್ಯರಿಗೆ ಸೂಚಿಸಿದರು. ಹುಮನಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net