

ಹುಬ್ಬಳ್ಳಿ: ಚನ್ನಮ್ಮ ವೃತ್ತ ಬಳಿಯ ಹಳೆಯ ಬಸ್ ನಿಲ್ದಾಣವು ಸುಮಾರು 50.58 ಕೋಟಿ ರೂ. ವೆಚ್ಚದಲ್ಲಿ ಹೊಸರೂಪ ಪಡೆದುಕೊಂಡು ಉದ್ಘಾಟನೆಗೊಂಡಿದೆ. ವಿನೂತನ ಕಟ್ಟಡವು ಆಕರ್ಷಣೀಯವಾಗಿದೆ. ಆದರೆ, ಪ್ರಯಾಣಿಕರು ರಸ್ತೆ ಬದಿ ನಿಂತು ಬಸ್ ಹತ್ತುವ ಹಾಗೂ ಇಳಿಯುವ ಗೋಳು ತಪ್ಪಿಲ್ಲ.
ಹಳೇ ಬಸ್ ನಿಲ್ದಾಣವು ನಗರ ಮತ್ತು ಉಪನಗರ ಸಾರಿಗೆ ಬಸ್ ನಿಲ್ದಾಣ (ಸಿಎಸ್‌ಬಿಟಿ) ಎಂಬ ಹೊಸ ನಾಮಕರಣದೊಂದಿಗೆ ಭಾನುವಾರ ಉದ್ಘಾಟನೆಗೊಂಡಿದೆ. ಸೋಮವಾರದಿಂದಲೇ ಸಾರಿಗೆ ಬಸ್‌ಗಳ ಕಾರ್ಯಾಚರಣೆ ಆರಂಭಗೊಳ್ಳಲಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧಿಕೃತವಾಗಿ ತಿಳಿಸಿತ್ತು. ಆದರೆ, ಮಂಗಳವಾರವೂ ಪ್ರಯಾಣಿಕರು ರಸ್ತೆಯಲ್ಲಿ ನಿಂತು ಬಸ್ ಹತ್ತಿದರು.
ನಾಲ್ಕೈದು ಬಸ್‌ಗಳು ಸಾಲಾಗಿ ರಸ್ತೆಯಲ್ಲಿ ನಿಂತು ಪ್ರಯಾಣಿಕರನ್ನು ಇಳಿಸುವ ಹಾಗೂ ಹತ್ತಿಸಿಕೊಳ್ಳುವುದನ್ನು ನೋಡಿದರೆ ಯಾವುದೋ ಬಡಾವಣೆಯಲ್ಲಿ ಬಸ್ ನಿಲುಗಡೆ ಸ್ಥಳದ ಚಿತ್ರಣ ಕಣ್ಣ ಮುಂದೆ ಬರುತ್ತದೆ. ಬಸ್ ನಿಲ್ದಾಣ ಇದ್ದೂ ಇಲ್ಲದಂತೆ ಭಾಸವಾಗುತ್ತದೆ. ನಿರ್ಮಾಣ ಹಂತದಲ್ಲಿದ್ದಾಗ ಭಾರಿ ಗಾತ್ರದ ತಗಡಿನ ಶೀಟ್‌ಗಳನ್ನು ಅಳವಡಿಸಿ ಒಳಗೆ ಯಾರೂ ಪ್ರವೇಶಿಸದಂತೆ ಬಂದೋಬಸ್ತ್ ಮಾಡಲಾಗಿತ್ತು. ಮೂರು ದಿನಗಳ ಹಿಂದೆ ಉದ್ಘಾಟನೆ ಹಿನ್ನೆಲೆಯಲ್ಲಿ ತಗಡಿನ ಶೀಟ್‌ಗಳನ್ನು ತೆರವುಗೊಳಿಸಲಾಗಿದೆ. ಇದೀಗ ಸಾರ್ವಜನಿಕರು ಒಳಗೆ ಪ್ರವೇಶಿಸದಂತೆ ಸಾರಿಗೆ ಸಂಸ್ಥೆಯ ಸಿಬ್ಬಂದಿ ಹಾಗೂ ಸೆಕ್ಯೂರಿಟಿ ಗಾರ್ಡ್‌ಗಳನ್ನು ಕಾವಲು ಇಡಲಾಗಿದೆ.
ಹಸ್ತಾಂತರಗೊಳ್ಳದೆ ಉದ್ಘಾಟನೆ
ಯಾರದೋ ಪ್ರತಿಷ್ಠೆಗೆ ಸಿಎಸ್‌ಬಿಟಿಯನ್ನು ತರಾತುರಿಯಲ್ಲಿ ಉದ್ಘಾಟಿಸಲಾಗಿದೆ. ಕಾಮಗಾರಿ ಪೂರ್ಣಗೊಳ್ಳದೇ ಬಸ್ ನಿಲ್ದಾಣವನ್ನು ಸುಪರ್ದಿಗೆ ಪಡೆಯುವುದಿಲ್ಲ ಹಾಗೂ ಬಸ್ ಕಾರ್ಯಾಚರಣೆ ಆರಂಭಿಸುವುದಿಲ್ಲ ಎಂಬುದು ವಾಕರಸಾ ಸಂಸ್ಥೆಯ ವಾದವಾಗಿದೆ. ಸ್ಮಾರ್ಟ್ ಸಿಟಿ ಅನುದಾನದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಹು-ಧಾ ಸ್ಮಾರ್ಟ್ ಸಿಟಿ ಲಿಮಿಟೆಡ್ ಕಂಪನಿ ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಬಸ್ ನಿಲ್ದಾಣವನ್ನು ವಾಕರಸಾ ಸಂಸ್ಥೆಗೆ ಹಸ್ತಾಂತರಿಸಿಲ್ಲ.
ಕಾಮಗಾರಿ ಪೂರ್ಣಗೊಳಿಸದೇ ಉದ್ಘಾಟಿಸಿದ್ದು ಯಾಕೆ? ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಜ. 13ರಿಂದಲೇ ಬಸ್‌ಗಳ ಕಾರ್ಯಾಚರಣೆ ನಡೆಯಲಿದೆ ಎಂದು ಹೇಳಿದ್ದ ವಾಕರಸಾ ಸಂಸ್ಥೆ ಅಧಿಕಾರಿಗಳು, ಈಗ ಇಲ್ಲವೆನ್ನುತ್ತಿದ್ದಾರೆ. ಇಲ್ಲಿಂದ ನಗರ ಹಾಗೂ ಉಪನಗರ ಮತ್ತು ಬಿಆರ್‌ಟಿಎಸ್ ಚಿಗರಿ ಬಸ್‌ಗಳ ಕಾರ್ಯಾಚರಣೆ ಆರಂಭವಾಗಲಿದೆ ಎಂದಿದ್ದರು.
ಹುಬ್ಬಳ್ಳಿಯಲ್ಲಿ ಸಿಬಿಟಿ, ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣ ಹಾಗೂ ಗೋಕುಲ ರಸ್ತೆಯಲ್ಲಿ ಹೊಸ ಬಸ್ ನಿಲ್ದಾಣಗಳಿವೆ. ಹೊಸೂರು ಬಸ್ ನಿಲ್ದಾಣದಿಂದ ಕಾರ್ಯಾಚರಿಸುತ್ತಿದ್ದ ಉಪನಗರ ಸಾರಿಗೆ ಬಸ್‌ಗಳ ಸಂಚಾರವೂ ಸಿಬಿಎಸ್‌ಟಿ (ಹಳೆಯ ಬಸ್ ನಿಲ್ದಾಣ)ದಿಂದ ಆರಂಭವಾಗಲಿದೆ. ಈಗಾಗಲೇ ಸಿಬಿಎಸ್‌ಟಿಯಲ್ಲಿ ಬಸ್‌ಗಳ ಸಂಚಾರಕ್ಕೆ ಮಾರ್ಗಸೂಚಿಯನ್ನು ನಿಗದಿಪಡಿಸಲಾಗಿದೆ. ನಿರ್ದಿಷ್ಟ ಬಡಾವಣೆ, ಊರುಗಳಿಗೆ ಸಂಚರಿಸುವ ಬಸ್‌ಗಳಿಗೆ ಪ್ಲಾಟ್‌ಫಾರ್ಮ್ ಗೊತ್ತುಪಡಿಸಲಾಗಿದೆ.
ಕಾಮಗಾರಿ ಇನ್ನೂ ಪೂರ್ಣಗೊಳಿಸಿಲ್ಲ
‘ಹು-ಧಾ ಸ್ಮಾರ್ಟ್‌ಸಿಟಿ ಲಿಮಿಟೆಡ್ ಕಂಪನಿಯವರು ಇನ್ನೂ ಕಾಮಗಾರಿ ಪೂರ್ಣಗೊಳಿಸಿಲ್ಲ. ಅವರು ಕಾಮಗಾರಿ ಪೂರ್ಣಗೊಳಿಸಿದ ನಂತರ ನಮಗೆ ಮಾಹಿತಿ ನೀಡುತ್ತಾರೆ. ಬಳಿಕ ಸಿವಿಲ್ ವಿಭಾಗದ ಅಧಿಕಾರಿಗಳು ಪರಿಶೀಲನೆ ನಡೆಸಿ ವರದಿ ನೀಡಲಿದ್ದಾರೆ. ಆಮೇಲೆ ಹಸ್ತಾಂತರ ಪ್ರಕ್ರಿಯೆ ನಡೆಯಲಿದೆ. ಕಾಮಗಾರಿ ಕೈಗೊಳ್ಳಲು ಹಳೇ ಬಸ್ ನಿಲ್ದಾಣವನ್ನು ಹು-ಧಾ ಸ್ಮಾರ್ಟ್ ಸಿಟಿ ಲಿಮಿಟೆಡ್‌ಗೆ ಹಸ್ತಾಂತರಿಸಲು ಒಪ್ಪಂದವಾಗಿತ್ತು. ಕಾಮಗಾರಿ ಮುಗಿದ ಬಳಿಕ ಅವರು ಬಸ್ ನಿಲ್ದಾಣವನ್ನು ನಮ್ಮ ಸುಪರ್ದಿಗೆ ವಹಿಸಬೇಕಿದೆ. ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸುವ ವಿಶ್ವಾಸವಿದೆ. ಸಿಬಿಎಸ್‌ಟಿಯಿಂದ ಶೀಘ್ರದಲ್ಲೇ ಬಸ್ ಕಾರ್ಯಾಚರಣೆ ಆರಂಭಿಸಲಾಗುವುದು ’ ಎಂದು ವಾಕರಸಾ ಸಂಸ್ಥೆಯ ಎಂಡಿ ಪ್ರಿಯಾಂಗಾ ಎಂ. ತಿಳಿಸಿದ್ದಾರೆ.