ದೊಡ್ಡತುಪ್ಪೂರು ಗ್ರಾಮಕ್ಕೆ ಸಕಾಲಕ್ಕೆ ಬಾರದ ಬಸ್

3-GPT-1
ಗುಂಡ್ಲುಪೇಟೆ ತಾಲೂಕಿನ ದೊಡ್ಡತುಪ್ಪೂರು ಗ್ರಾಮಕ್ಕೆ ಸಕಾಲದಲ್ಲಿ ಬಸ್ ಬರದೆ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲಿ ಹೋಗುತ್ತಿರುವುದು.
Published on

ಗುಂಡ್ಲುಪೇಟೆ: ತಾಲೂಕಿನ ದೊಡ್ಡತುಪ್ಪೂರು ಗ್ರಾಮಕ್ಕೆ ಸಕಾಲದಲ್ಲಿ ಬಸ್ ಬಾರದ ಬಗ್ಗೆ ಗ್ರಾಮಸ್ಥರು ತೀವ್ರ ಆಕ್ರೋಶವ್ಯಕ್ತಪಡಿಸಿದ್ದಾರೆ.

ಪಟ್ಟಣದಿಂದ ಕೇವಲ ನಾಲ್ಕು ಕಿ.ಮೀ. ಅಂತರದಲ್ಲಿರುವ ಗ್ರಾಮವು ಚಾಮರಾಜನಗರ ಮುಖ್ಯರಸ್ತೆಗೆ ಹೊಂದಿಕೊಂಡಿದೆ. ಗ್ರಾಮದಿಂದ ಪ್ರತಿನಿತ್ಯ ಗುಂಡ್ಲುಪೇಟೆ ಹಾಗೂ ಜಿಲ್ಲಾ ಕೇಂದ್ರದ ಶಾಲಾ-ಕಾಲೇಜಿಗೆ, ಸರ್ಕಾರಿ ಕಚೇರಿಯ ಕೆಲಸ ಕಾರ್ಯಗಳಿಗೆ ವಿದ್ಯಾರ್ಥಿಗಳು, ರೈತರು, ಜನಸಾಮಾನ್ಯರು ನಿತ್ಯ ಓಡಾಡುತ್ತಾರೆ. ಆದರೆ ದೊಡ್ಡತುಪ್ಪೂರು ಗ್ರಾಮಕ್ಕೆ ಪ್ರತ್ಯೇಕ ಬಸ್ ಸೌಲಭ್ಯವಿಲ್ಲದ ಕಾರಣ ವಿದ್ಯಾರ್ಥಿಗಳು, ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ಒಂದು ಕಿ.ಮೀ. ನಡೆದು ಮುಖ್ಯರಸ್ತೆಗೆ ಬಂದು ಬಸ್ ಹತ್ತಬೇಕಾಗಿದೆ.

ಹೆಣ್ಣು ಮಕ್ಕಳಂತೂ ಮಳೆ, ಬಿಸಿಲು ಎನ್ನದೆ ಜಮೀನುಗಳ ನಡುವೆ ಹಾದು ಹೋಗಿರುವ ದಾರಿಯಲ್ಲಿ ಸಂಚರಿಸಬೇಕಾಗಿದೆ. ಅಲ್ಲದೆ ಯಾವುದೇ ಬಸ್‌ಗಳನ್ನು ಗೇಟ್ ಬಳಿಯೂ ನಿಲ್ಲಿಸದ ಪರಿಣಾಮ ಚಿಕ್ಕತುಪ್ಪೂರು ಗೇಟ್‌ವರೆಗೆ ಮತ್ತೆ ಅರ್ಧ ಕಿಲೋಮೀಟರ್ ನಡೆಯಬೇಕಾಗಿದೆ. ಆದ್ದರಿಂದ ಗ್ರಾಮಕ್ಕೆ ಬಸ್ ಬರುವಂತೆ ಮಾಡಲು ಗ್ರಾಮಸ್ಥರು ಒತ್ತಾಯಿಸಿದ್ದ ಹಿನ್ನೆಲೆಯಲ್ಲಿ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಸೂಚನೆ ಮೇರೆಗೆ ಕಳೆದ ತಿಂಗಳು ಸಾರಿಗೆ ಸಂಸ್ಥೆ ಬೆಳಗ್ಗೆ ಮತ್ತು ಸಂಜೆ ಬಸ್ ನಿಯೋಜನೆ ಮಾಡಿತ್ತು.

ಆದರೆ ತಿಂಗಳು ತುಂಬುವ ಮೊದಲೇ ಬಸ್ ಸರಿಯಾಗಿ ಬರುತ್ತಿಲ್ಲ. ಬೆಳಗ್ಗೆ ಎಷ್ಟೋ ಹೊತ್ತಿಗೆ ಬರುವುದರಿಂದ ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಸಕಾಲದಲ್ಲಿ ತರಗತಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಇನ್ನಾದರೂ ಸಂಬಂಧಪಟ್ಟವರು ಸಕಾಲದಲ್ಲಿ ಬಸ್ ಬರುವಂತೆ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರಾದ ಸ್ವಾಮಿ, ಮಹದೇವಪ್ಪ, ನಂಜಪ್ಪ, ಲೋಕೇಶ್, ರಾಚಪ್ಪ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net