ಗ್ರಾಮಕ್ಕೆ ಬಸ್ ತರಿಸಿದ ದಿನವೇ ಮುಖಂಡನ ಸಾವು

23
Published on

ಹೊನ್ನಾಳಿ: ತಾಲೂಕಿನ ಬಳ್ಳೇಶ್ವರ ಗ್ರಾಮಕ್ಕೆ ಬಸ್ ಬಂದ ಗ್ರಾಮಸ್ಥರು ಸಂಭ್ರಮದಲ್ಲಿದ್ದರು. ಆದರೆ, ಆ ಸಂತೋಷ ಇದ್ದದ್ದು ಮಾತ್ರ ಕೆಲವೇ ನಿಮಿಷಗಳು.

ಇದಕ್ಕೆ ಕಾರಣರಾದ ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸಲು ಹೋರಾಡಿದ, ಗ್ರಾಮದ ಮುಖಂಡ ಷಣ್ಮುಖಪ್ಪ ಅವರ ಸಾವು ಸಡಗರವನ್ನು ಮಾಯಮಾಡಿತು.

ಬಳ್ಳೇಶ್ವರ ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸುವಂತೆ ಷಣ್ಮುಖಪ್ಪ ಅವರು ಶಾಸಕರಲ್ಲಿ ಮನವಿ ಮಾಡಿ, ಬೇಡಿಕೆ ಈಡೇರಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದರು. ಇದಾದ ಒಂದು ತಿಂಗಳಲ್ಲೇ ಗ್ರಾಮಕ್ಕೆ ಬಸ್ ಸೌಲಭ್ಯ ಸಿಕ್ಕಿತ್ತು.

ಸೋಮವಾರ ಬಸ್ ಸಂಚಾರಕ್ಕೆ ಚಾಲನೆ ನೀಡುವ ಕಾರ್ಯಕ್ರಮ ಕೂಡ ಆಯೋಜನೆಗೊಂಡಿತ್ತು. ಆದ್ದರಿಂದ ಗ್ರಾಮದಲ್ಲೂ ಬಸ್ ಆಗಮಿಸಿದ ಸಂಭ್ರಮ ಮನೆ ಮಾಡಿತ್ತು.

ಗ್ರಾಮದ ಕಾಂಗ್ರೆಸ್ ಮುಖಂಡ ಷಣ್ಮುಖಪ್ಪ ಅವರೇ ಬಸ್‌ಗೆ ಅಲಂಕಾರ ಮಾಡಿ, ಪೂಜೆ ಸಲ್ಲಿಸಿದ್ದರು. ಬಳಿಕ ಶಾಸಕರಿಂದ ಚಾಲನೆ ಕೂಡ ಮಾಡಿಸಿದ್ದರು. ಅವರೇ ಬಸ್‌ಗೆ ಬೂದುಗುಂಬಳದಿಂದ ಆರತಿ ಮಾಡಿ, ಒಡೆದಿದ್ದರು. ಆಗ ಅವರಿಗೆ ಆರೋಗ್ಯದಲ್ಲಿ ಏರುಪೇರಾದ ಕೂಡಲೇ ಮನೆಗೆ ಹೋಗಿ, ಅಲ್ಲಿಂದ ಆಸ್ಪತ್ರೆಗೆ ತೆರಳಿದ್ದಾರೆ.

ಇತ್ತ ಶಾಸಕರು ಷಣ್ಮುಖಪ್ಪ ಅವರನ್ನು ಕರೀರಪ್ಪ ಅವನಿಂದ ಇವತ್ತು ಗ್ರಾಮಕ್ಕೆ ಬಸ್ ಬಂದಿದೆ. ಬಸ್‌ಗೆ ನಷ್ಟ ಉಂಟಾಗದಂತೆ ನೋಡಿಕೊಳ್ಳಬೇಕು. ಈ ಬಗ್ಗೆ ಷಣ್ಮುಖಪ್ಪ ಜವಾಬ್ದಾರಿ ತೆಗೋಬೇಕು. ಆವರನ್ನು ಕರೀರಿ ಎಂದು ಎರಡು ಬಾರಿ ಶಾಸಕರು ಹೇಳುತ್ತಿದ್ದಂತೆ ಅವರ ಸಾವಿನ ಸುದ್ದಿ ಗ್ರಾಮಕ್ಕೆ ಬಂದೇ ಬಿಟ್ಟಿತ್ತು. ನಂತರ ಗ್ರಾಮದಲ್ಲಿ ನೀರವ ಮೌನ ಆವರಿಸಿತು. ಬಸ್ ವ್ಯವಸ್ಥೆ ಮಾಡಿಸಿದ್ದ ಮುಖಂಡರೇ ಮೃತಪಟ್ಟ ಸುದ್ದಿ ಕೇಳಿದ ವಿದ್ಯಾರ್ಥಿಗಳು, ಮಹಿಳೆಯರು ಸೇರಿ ಎಲ್ಲರೂ ದುಃಖಿತರಾದರು.

ಮೌನವಾದ ಶಾಸಕರು: ಗ್ರಾಮಕ್ಕೆ ಬಸ್ ಬರಲು ಕಾರಣಕರ್ತರಾದ ಷಣ್ಮುಖಪ್ಪ ಅವರ ಸಾವಿನ ಸುದ್ದಿ ಕೇಳಿದ ಶಾಸಕ ಡಿ.ಜಿ. ಶಾಂತನಗೌಡ ಕಾರ್ಯಕ್ರಮದ ವೇದಿಕೆಯಲ್ಲಿ ಕೆಲ ನಿಮಿಷ ಮೌನವಾಗಿ ಕುಳಿತಿದ್ದರು. ಬಳಿಕ ಸಮಾಧಾನ ಮಾಡಿಕೊಂಡು ಹೋಗಿ ಪಾರ್ಥೀವ ಶರೀರದ ದರ್ಶನ ಮಾಡಿದರು.

ಸೋಮವಾರ ಸಂಜೆ ಅಂತ್ಯಕ್ರಿಯೆ: ಹೃದಯಘಾತದಿಂದ ನಿಧನರಾದ ಷಣ್ಮುಖಪ್ಪ (57) ಅವರಿಗೆ ಪತ್ನಿ, ಇಬ್ಬರು ಪುತ್ರರು, ಒಬ್ಬ ಪುತ್ರಿ ಇದ್ದಾರೆ. ಮೃತರ ಅಂತ್ಯಕ್ರಿಯೆ ಸೋಮವಾರ ಸಂಜೆ ನಡೆಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಇವರು ಹೊನ್ನಾಳಿ ತಾಲೂಕು ಉಪ್ಪಾರ ಸಮಾಜದ ಅಧ್ಯಕ್ಷರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net