

ಹುಬ್ಬಳ್ಳಿ: ಶಕ್ತಿ ಯೋಜನೆಯಡಿ ಮಹಿಳೆಯರಿಗೆ ರಾಜ್ಯ ಸರ್ಕಾರ ಉಚಿತ ಬಸ್ ಪ್ರಯಾಣಕ್ಕೆ ಅನುಕೂಲ ಕಲ್ಪಿಸಿದ ಹಿನ್ನೆಲೆಯಲ್ಲಿ ನಗರದಲ್ಲಿ ಸಾರಿಗೆ ಸಂಸ್ಥೆಯ ಬಸ್ಗಳು ರಷ್ ಆಗಿದ್ದವು. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಗರ ಸಾರಿಗೆಯಲ್ಲಿ ಸೋಮವಾರ 17,154 ಮಹಿಳೆಯರು (2,11,263 ರೂ.), ಗ್ರಾಮಾಂತರ ವಿಭಾಗದಲ್ಲಿ 11,780 ಮಹಿಳೆಯರು (5,07,411 ರೂ.) ಪ್ರಯಾಣ ಮಾಡಿದರು.
ಹು-ಧಾ ಅವಳಿ ನಗರ ಹೊರತಾಗಿಯೂ ಹೊರಗಿನ ಪ್ರದೇಶಗಳಲ್ಲಿ ಮಹಿಳೆಯರು ಪ್ರಯಾಣ ನಡೆಸಿದರು. ಈ ಮೊದಲು ಬಸ್ಗಳು ಅಷ್ಟೊಂದು ಭರ್ತಿ ಕಂಡುಬರುತ್ತಿಲ್ಲ. ಕಂಡು ಬಂದಿದ್ದರೂ ಪುರುಷರು ಮತ್ತು ಮಹಿಳೆಯರು ಸಮ ಪ್ರಮಾಣದಲ್ಲಿ ಸಂಚರಿಸುತ್ತಿದ್ದರು. ಆದರೆ, ಶಕ್ತಿ ಯೋಜನೆ ಜಾರಿಯಾಗುತ್ತಿದ್ದಂತೆ ಮಹಿಳೆಯರು ಅದರಲ್ಲೂ ಯುವತಿಯರು ಹೆಚ್ಚಾಗಿ ಬಸ್ಗಳಲ್ಲಿ ಓಡಾಡುತ್ತಿರುವುದ ಕಂಡುಬರುತ್ತಿದೆ.
ಬಸ್ಗಳು ಭರ್ತಿ ಆಗುತ್ತಿರುವ ಹಿನ್ನೆಲೆಯಲ್ಲಿ ಬಸ್ನೊಳಗೆ ಹಿಂದುಗಡೆ ಹೋಗಿ ಟಿಕೆಟ್ ತೆಗೆದುಕೊಳ್ಳಲು ಜನರಿಗೆ ಸಾಧ್ಯವಾಗುತ್ತಿಲ್ಲ. ಬಸ್ ಹತ್ತುವ ಬಾಗಿಲಲ್ಲಿಯೇ ನಿಂತು ನಿರ್ವಾಹಕರು ಪುರುಷರಿಗೆ ಟಿಕೆಟ್ ಕೊಡುತ್ತಿದ್ದರು. ಬಸ್ಗಳ ಭರ್ತಿ ಹಿನ್ನೆಲೆಯಲ್ಲಿ ನಿರ್ವಾಹಕರಿಗೆ ತಲೆನೋವು ತರಿಸಿದೆ. ಹು-ಧಾ ಅವಳಿ ನಗರದಲ್ಲಿ ಸಂಚರಿಸುತ್ತಿರುವ ಬಿಆರ್ಟಿಎಸ್ ಚಿಗರಿ ಬಸ್ಗಳು ಖಾಲಿ ಓಡುತ್ತಿದ್ದವು.