

ಹಟ್ಟಿ ಚಿನ್ನದಗಣಿ: ವಿವಿಧ ಗ್ರಾಮಗಳಿಂದ ವಿದ್ಯಾಭ್ಯಾಸಕ್ಕೆ ಬರುವ ವಿದ್ಯಾರ್ಥಿಗಳಿಗೆ ಸೂಕ್ತ ಸಮಯಕ್ಕೆ ಸಮರ್ಪಕ ಬಸ್ ವ್ಯವಸ್ಥೆ ಕೈಗೊಳ್ಳಬೇಕೆಂದು ಆಗ್ರಹಿಸಿ ಸಾರಿಗೆ ಇಲಾಖೆ ಕಂಟ್ರೋಲರ್ ದೇವಣ್ಣ ಸರ್ಜಾಪುರ ಅವರಿಗೆ ತಾಲೂಕು ಎಸ್‌ಎಫ್‌ಐ ಘಟಕದಿಂದ ಬುಧವಾರ ಮನವಿ ಸಲ್ಲಿಸಲಾಯಿತು.
ಪಟ್ಟಣದ ಶಾಲಾ-ಕಾಲೇಜುಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲವಾಗಿದೆ. ತವಗ, ಕಡ್ಡೋಣಿ ಗ್ರಾಮಗಳಿಗೆ ಬೆಳಗ್ಗೆ ಮತ್ತು ಮಧ್ಯಾಹ್ನ ಕಾಲೇಜು ಸಮಯಕ್ಕೆ ಅನುಗುಣವಾಗಿ ಬಸ್ ವ್ಯವಸ್ಥೆ ಕಲ್ಪಿಸಬೇಕು.
ಬಸ್‌ಗಳ ಕೊರತೆಯಿಂದ ವಿದ್ಯಾರ್ಥಿಗಳು ಖಾಸಗಿ ವಾಹನ, ಬೈಕ್ ಮೂಲಕ ಲಿಂಗಸಗೂರಿಗೆ ತೆರಳಬೇಕಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಸರಿಯಾದ ಸಮಯಕ್ಕೆ ಸಾರಿಗೆ ಬಸ್ ಇಲ್ಲದೆ ಇರುವುದರಿಂದ ಶಾಲಾ-ಕಾಲೇಜುಗಳಿಗೆ ವಿದ್ಯಾರ್ಥಿಗಳು ಹಾಜರಾಗಲು ಆಗದೆ ವಿದ್ಯಾಭ್ಯಾಸದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಈ ಬಗ್ಗೆ ಹಲವು ಸಾರಿಗೆ ಇಲಾಖೆಗೆ ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ ಎಂದು ದೂರಿದರು.