

- ಪ್ರಕಾಶ್ ಮಂಜೇಶ್ವರ, ಮಂಗಳೂರು
ಪ್ರಥಮ ಹಂತದಲ್ಲಿ ನಗರ ಸಾರಿಗೆ ಹೊರತುಪಡಿಸಿ ಇತರ ಎಲ್ಲ ಬಸ್‌ಗಳಿಗೆ ಬಾಗಿಲು ಕಡ್ಡಾಯಗೊಳಿಸುವ ಮೂಲಕ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ರಸ್ತೆ ದುರಂತ ನಿಯಂತ್ರಣ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. ಹೊಸ ಬಸ್ ಬೋಡಿ ಕೋಡ್ ಪ್ರಕಾರ ಎಲ್ಲ ಬಸ್‌ಗಳಿಗೆ ಬಾಗಿಲು ಕಡ್ಡಾಯ. ಭವಿಷ್ಯದಲ್ಲಿ ನಗರ ಸಾರಿಗೆ ಸಹಿತ ದೇಶದಲ್ಲೇ ಎಲ್ಲ ಬಸ್‌ಗಳಲ್ಲಿ ಉತ್ಪಾದನೆ ಹಂತದಲ್ಲಿಯೇ ಬಾಗಿಲು ಅಳವಡಿಕೆಯಾಗಲಿದೆ.
ಐದು ತಿಂಗಳ ಹಿಂದೆ ನಗರದ ನಂತೂರು ಬಳಿ ನಿರ್ವಾಹಕನೋರ್ವ ಬಸ್ ಬಾಗಿಲಿನಿಂದ ಎಸೆಯಲ್ಪಟ್ಟು ಸ್ಥಳದಲ್ಲೇ ಸಾವನ್ನಪ್ಪಿದ ದುರಂತ ಸಂಭವಿಸಿತ್ತು. ಕೆಲ ದಿನಗಳ ಹಿಂದೆ ಮುಡಿಪು ಬಳಿ ವಿದ್ಯಾರ್ಥಿ ಪ್ರಯಾಣದ ಸಂದರ್ಭ ಬಸ್ ಬಾಗಿನಿಂದ ಕೆಳಗೆ ಎಸೆಯಲ್ಪಟ್ಟ ಘಟನೆಯೂ ನಡೆಯಿತು. ಪ್ರಯಾಣಿಕರ ದಟ್ಟಣೆ ಸಂದರ್ಭ ಇಂದಿಗೂ ಅನೇಕ ಕಡೆ ಜನರು ಬಸ್‌ಗಳ ಬಾಗಿಲಲ್ಲಿ ನೇತಾಡಿಕೊಂಡು ಹೋಗುವ ಪರಿಸ್ಥಿತಿ ಇದೆ. ಬಸ್‌ಗಳಿಗೆ ಬಾಗಿಲು ಕಡ್ಡಾಯಗೊಳಿಸುವುದರಿಂದ ಇಂತಹ ಅನಾಹುತಗಳನ್ನು ತಪ್ಪಿಸಬಹುದು.
* ನಿರ್ವಹಣೆ ಸವಾಲು: ಹಿಂದೆ ಪ್ರತೀ ಬಸ್‌ಗಳಲ್ಲಿ ಚಾಲಕ, ನಿರ್ವಾಹಕರ ಜತೆಯಲ್ಲಿ ಕ್ಲೀನರ್ ಇರುತ್ತಿದ್ದರು. ಕೆಲ ಬಸ್‌ಗಳಲ್ಲಿ ಟಿಕೆಟ್ ಚೆಕಿಂಗ್‌ಗಾಗಿ ಒಬ್ಬರು ಇರುತ್ತಿದ್ದರು. ಇಂತಹ ಸಂದರ್ಭ ಪ್ರಯಾಣಿಕರ ಮೇಲೆ ನೀಗಾ ಇಡಲು ಅನುಕೂಲವಾಗುತ್ತಿತ್ತು. ಆದರೆ ಇಂದು ಎಲ್ಲ ಬಸ್‌ಗಳಲ್ಲಿ ಚಾಲಕ ಮತ್ತು ನಿರ್ವಾಹಕ ಮಾತ್ರ ಇರುತ್ತಾರೆ.
ಬಾಗಿಲು ಕಡ್ಡಾಯಗೊಳಿಸಿದರೆ ಎಲ್ಲ ಬಸ್‌ಗಳ ಅಧಿಕೃತ ವೇಳಾಪಟ್ಟಿಯೂ ಬದಲಾಗಬೇಕು. ಸಿಟಿ ಬಸ್‌ಗಳು ಕೆಲವು ನಿಮಿಷಗಳ ಅಂತರದಲ್ಲಿ ಸಂಚರಿಸುತ್ತಿವೆ. ಈ ಬಸ್‌ಗಳಿಗೆ ಅಲ್ಲಲ್ಲಿ ನಿಲುಗಡೆಗಳಿರುವ ಕಾರಣ ಬಾಗಿಲು ಕಡ್ಡಾಯಗೊಳಿಸುವುದು ಕಷ್ಟ ಎಂದು ಬಸ್ ಮಾಲೀಕರು ತಕರಾರು ತೆಗೆದಿದ್ದಾರೆ.
* ಪ್ರಾಧಿಕಾರಕ್ಕೆ ಅವಕಾಶ: ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಪರವಾನಗಿಯಲ್ಲೇ ಬಸ್‌ಗಳಿಗೆ ಬಾಗಿಲು ಕಡ್ಡಾಯಗೊಳಿಸಿದರೆ ಅನುಷ್ಠಾನ ಸುಲಭ. ಬಸ್ ನೋಂದಣಿ ಬಳಿಕ ವಾಹನ ಮೂಲ ಸ್ವರೂಪ ಮಾರ್ಪಾಡು ಮಾಡಲು ಅವಕಾಶವಿಲ್ಲ. ಎಲ್ಲ ಬಸ್‌ಗಳಿಗೆ ಹೊಸ ವೇಳಾಪಟ್ಟಿ ನಿಗದಿಪಡಿಸುವ ಬದಲು ಇರುವ ವೇಳಾಪಟ್ಟಿಯಲ್ಲಿಯೇ ಪ್ರತೀ ನಿಲುಗಡೆಯಲ್ಲಿ ಒಂದು ನಿಮಿಷ ಹೆಚ್ಚುವರಿ ಒದಗಿಸಿದರೆ ಸಮಯದ ಸಮಸ್ಯೆಗೆ ಪರಿಹಾರ ದೊರೆಯುತ್ತದೆ. ಪ್ರತೀ ಬಸ್‌ಗೆ ಪ್ರತ್ಯೇಕ ವೇಳಾಪಟ್ಟಿ ತಯಾರಿಸಿದರೆ ಗೊಂದಲ ಹೆಚ್ಚಲಿದೆ ಎನ್ನುತ್ತಾರೆ ಸಾರಿಗೆ ಇಲಾಖೆಯ ಓರ್ವ ಹಿರಿಯ ಅಧಿಕಾರಿ.
---------
ಪ್ರಯಾಣಿಕರ ಸುರಕ್ಷತೆ ಸಲುವಾಗಿ ಬಸ್‌ಗಳಿಗೆ ಬಾಗಿಲು ಕಡ್ಡಾಯ ಮಾಡಲಾಗಿದೆ. ಹಲವು ಬಾರಿ ಸೂಚನೆ ನೀಡಿದರೂ ಪಾಲನೆಯಾಗುತ್ತಿಲ್ಲ. ನಗರ ಸಾರಿಗೆ ಬಸ್‌ಗಳಿಗೆ ಡೋರ್ ಅಳವಡಿಕೆ ಕುರಿತಂತೆ ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು. ಎಲ್ಲ ಖಾಸಗಿ ಬಸ್‌ಗಳು ಡೋರ್ ಅಳವಡಿಕೆಯನ್ನು ಡಿ.10ರೊಳಗೆ ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕು. ತಪ್ಪಿದಲ್ಲಿ ಸಾರಿಗೆ ನಿಯಮದ ಉಲ್ಲಂಘನೆಯಡಿ ಕ್ರಮ ಜರುಗಲಿದೆ.
- ಮುಲ್ಲೈ ಮುಗಿಲನ್
ದ.ಕ.ಜಿಲ್ಲಾಧಿಕಾರಿ