

ಶಿರ್ವ: ಇನ್ನಂಜೆಯ ಸೋದೆ ಶಿಕ್ಷಣ ಸಮೂಹ ಸಂಸ್ಥೆಗಳಿಗೆ ಬೆಂಗಳೂರಿನ ಲೀಪ್‌ಫ್ರಾಗ್ ಇಂಜಿನಿಯರಿಂಗ್ ಸರ್ವೀಸಸ್ ಲಿಮಿಟೆಡ್ ತನ್ನ ಸಿಎಸ್‌ಆರ್ ನಿಧಿಯಿಂದ 48 ಲಕ್ಷ ರೂಪಾಯಿ ವೆಚ್ಚದ ಎರಡು ಶಾಲಾ ಬಸ್‌ಗಳನ್ನು ಕೊಡುಗೆಯಾಗಿ ನೀಡಿದೆ.
ಇನ್ನಂಜೆಯ ಕಾಲೇಜಿನಲ್ಲಿ ಸೋಮವಾರ ಲೀಪ್‌ಫ್ರಾಗ್ ಇಂಜಿನಿಯರಿಂಗ್ ಸರ್ವೀಸಸ್ ಲಿಮಿಟೆಡ್ ಸಂಸ್ಥೆಯ ಅಧಿಕಾರಿಗಳ ಸಮ್ಮುಖದಲ್ಲಿ ಪ್ರಿಯಾ ಶೈಲಾ ಪಿ.ರಾವ್ ಅವರು ಬಸ್‌ನ ಕೀಲಿ ಕೈಗಳನ್ನು ಶ್ರೀ ವಿಷ್ಣುಮೂರ್ತಿ ಹಯವದನ ಸ್ವಾಮಿ ಶಿಕ್ಷಣ ಪ್ರತಿಷ್ಠಾನ ಉಪಾಧ್ಯಕ್ಷ ಶ್ರೀನಿವಾಸ ತಂತ್ರಿ ಹಾಗೂ ಕಾರ್ಯದರ್ಶಿ ರತ್ನಕುಮಾರ್ ಅವರಿಗೆ ಹಸ್ತಾಂತರಿಸಿದರು.
ಕಾರ್ಯದರ್ಶಿ ರತ್ನಕುಮಾರ್ ಮಾತನಾಡಿ, ಇನ್ನಂಜೆ ಎಂಬ ಗ್ರಾಮದಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪದವಿ ಪೂರ್ವ ತರಗತಿವರೆಗೆ ಉತ್ತಮ ಶಿಕ್ಷಣ ಕೊಡುವ ಉದ್ದೇಶದಿಂದ ಸೋದೆ ಸಮೂಹ ಶಿಕ್ಷಣ ಸಂಸ್ಥೆ ತೊಡಗಿಸಿಕೊಂಡಿದೆ. ಬೆಂಗಳೂರಿನ ಸಂಸ್ಥೆಯು ಬಸ್ ಕೊಡುಗೆ ನೀಡಿರುವುದು ಹೆಮ್ಮೆಯ ಸಂಗತಿ ಎಂದರು.
ಸೋದೆ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ರಾಧಾಕೃಷ್ಣ.ಎಸ್.ಐತಾಳ್, ಆಡಳಿತ ಮಂಡಳಿ ಸದಸ್ಯ ಹರೀಶ್ ಬೆಳ್ಮಣ್, ಎಸ್‌ವಿಎಚ್ ಪಿಯು ಕಾಲೇಜು ಪ್ರಾಂಶುಪಾಲ ಮತ್ತು ಪ್ರೌಢಶಾಲೆ, ಪ್ರಾಥಮಿಕ ಮತ್ತು ನರ್ಸರಿ ಶಾಲೆಗಳ ಮುಖ್ಯಶಿಕ್ಷಕರು ಉಪಸ್ಥಿತರಿದ್ದರು.