

ಹನೂರು : ಹನೂರಿನಲ್ಲಿ ಸಾರಿಗೆ ಬಸ್ ಡಿಪೋ ಸ್ಥಾಪನೆಗೆ ಅಗತ್ಯ ಕ್ರಮವಹಿಸಲಾಗಿದ್ದು, ಪ್ರಕ್ರಿಯೆ ಟೆಂಡರ್ ಹಂತದಲ್ಲಿದೆ ಎಂದು ಶಾಸಕ ಎಂ.ಆರ್ ಮಂಜುನಾಥ್ ತಿಳಿಸಿದರು. ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಶಕ್ತಿ ಯೋಜನೆ 2 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸೋಮವಾರ ಮಹಿಳೆಯರಿಗೆ ಸಿಹಿ ವಿತರಿಸಿ, ಬಸ್ ಸೇವೆಗೆ ಚಾಲನೆ ನೀಡಿ ಮಾತನಾಡಿದರು.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯಲ್ಲಿ 500 ಕೋಟಿ ಬಾರಿ ಉಚಿತ ಪ್ರಯಾಣ ಮಾಡಿದ
ಮಹಿಳೆಯರು ದಾಖಲೆ ನಿರ್ಮಿಸಿದ್ದಾರೆ. ಈ ಯೋಜನೆ ಮಹಿಳೆಯರಿಗೆ ಆತ್ಮ ವಿಶ್ವಾಸವನ್ನು ತಂದು ಕೊಟ್ಟಿದೆ. ಮಲೆಮಹದೇಶ್ವರ ಬೆಟ್ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭೇಟಿ ನೀಡಿದ್ದಾರೆ. ಈ ಯೋಜನೆ ಮಾದರಿಯಾಗಿದೆ ಎಂದರು.
ಇತರೆ ರಾಜ್ಯಗಳು ಈ ಯೋಜನೆ ಅನುಸರಿಸಲು ಮುಂದಾಗಿರುವುದು ಸಾರ್ಥಕತೆ ಎನಿಸುತ್ತದೆ. ಹನೂರು ಕ್ಷೇತ್ರ ಹೆಚ್ಚು ವಿಸ್ತೀರ್ಣ ಹೊಂದಿದೆ. ಆದರೆ ಕೆಲವೊಂದು ಗ್ರಾಮಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಬಸ್ ಕೊರತೆ ಇದೆ. ಇದರಿಂದ ಶಾಲಾ ಮಕ್ಕಳು ಹಾಗೂ ಜನರು ತೊಂದರೆ ಪಡುತ್ತಿರುವುದು ಗಮನದಲ್ಲಿದೆ. ಹಾಗಾಗಿ ಹನೂರಿನಲ್ಲಿ ಬಸ್ ಡಿಪೋ ಸ್ಥಾಪನೆ ಸಂಬಂಧ ಸರ್ಕಾರದ ಗಮನಕ್ಕೆ ತರಲಾಗಿದೆ. ಅಗತ್ಯ ಕ್ರಮವಹಿಸಲಾಗಿದೆ. ಮುಂದಿನ ದಿನಗಳಲ್ಲಿ ಸಾರಿಗೆ ಸೇವೆಯ ಸಮಸ್ಯೆ ಬಗೆಹರಿಯಲಿದೆ ಎಂದು ತಿಳಿಸಿದರು.
ಸರ್ಕಾರಕ್ಕೆ ಜನಮನ್ನಣೆ : ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಪಾಳ್ಯ ರಾಚಯ್ಯ ಮಾತನಾಡಿ, ಶಕ್ತಿ ಯೋಜನೆಯನ್ನು ಮಹಿಳೆಯರು ಹೆಚ್ಚು ಸದುಪಯೋಗ ಪಡಿಸಿಕೊಳ್ಳುವುದರ ಮೂಲಕ 2 ವರ್ಷ ಪೂರೈಸಿರುವುದು ಸಂತಸ ವಿಚಾರ. ಈ ಯೋಜನೆಯಿಂದ ಮ.ಬೆಟ್ಟಕ್ಕೆ ಭೇಟಿ ನೀಡುವವರ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ಜನಪರ ಯೋಜನೆಗಳನ್ನು ಜಾರಿಗೊಳಿಸುತ್ತಿರುವ ಹಾಗೂ ಉತ್ತಮ ಆಡಳಿತ ನೀಡುತ್ತಿರುವ ಕಾಂಗ್ರೆಸ್ ಸರ್ಕಾರ ಜನಮನ್ನಣೆ ಗಳಿಸಿದೆ ಎಂದರು.
ತಹಸೀಲ್ದಾರ್ ವೈ.ಕೆ ಗುರುಪ್ರಸಾದ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರಾದ ಮಹದೇವಮ್ಮ, ಸೋಮಶೇಖರ್, ಮಾದೇವ ಹಾಗೂ ಸಾರಿಗೆ ಇಲಾಖೆಯ ಅಧಿಕಾರಿ, ಸಿಬ್ಬಂದಿ ಇದ್ದರು.