

ಹೆಬ್ರಿ: ಶಿವಪುರ ಗ್ರಾಮದ ಬಿಲ್ಬೈಲು ಕ್ರಾಸ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಬೆಳಗ್ಗೆ ಬೈಕ್ ಹಾಗೂ ಖಾಸಗಿ ಬಸ್ ಡಿಕ್ಕಿಯಾಗಿ ಬಸ್ ಪ್ರಯಾಣಿಕರು ಹಾಗೂ ಬೈಕ್ ಸವಾರ ಗಾಯಗೊಂಡಿದ್ದಾರೆ.
ಶಿವಮೊಗ್ಗದಿಂದ ಉಡುಪಿಗೆ ಹೋಗುವ ಖಾಸಗಿ ಮಿನಿ ಬಸ್ ಮತ್ತು ಶಿವಪುರದಿಂದ ಹೆಬ್ರಿ ಕಡೆ ಹೋಗುವ ಬೈಕ್ ಅಪಘಾತಕ್ಕೀಡಾಗಿವೆ. ಬೈಕ್ ಸವಾರ ಕಾರು ಓವರ್‌ಟೇಕ್ ಮಾಡುವ ಭರದಲ್ಲಿ ಎದುರಗಡೆಯಿಂದ ಬಂದ ಬಸ್ಸಿಗೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ. ಚಾಲಕ ಬೈಕ್ ಸವಾರನನ್ನು ರಕ್ಷಿಸಲು ಯತ್ನಿಸಿದಾಗ ನಿಯಂತ್ರಣ ತಪ್ಪಿದ ಬಸ್ಸು ರಸ್ತೆ ಬದಿಯ ಧರೆಗೆ ಗುದ್ದಿದೆ. ಬಸ್ಸಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬೈಕ್ ಸವಾರನಿಗೆ ಕೈಗೆ ಪೆಟ್ಟಾಗಿದೆ . ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.