

ಕಲಬುರಗಿ: ಜೇವರ್ಗಿ ರಸ್ತೆಯ ಸೆಂಟ್ರಲ್ ಜೈಲ್ ಹತ್ತಿರ ಶುಕ್ರವಾರ ಆಟೋಗೆ ಬಸ್ ಡಿಕ್ಕಿ ಹೊಡೆದಿದ್ದು, ಇಬ್ಬರು ಮಹಿಳೆಯರು ಸೇರಿ ಮೂವರು ಮೃತಪಟ್ಟಿದ್ದಾರೆ. ಮೃತರು ಒಂದೇ ಕುಟುಂಬ ಮತ್ತು ಸಹೋದರ ಸಂಬಂಧಿಗಳು. ಇನ್ನೊಂದು ಅಪಘಾತದಲ್ಲಿ ಒಬ್ಬ ಸಾವಿಗೀಡಾಗಿದ್ದಾನೆ.
ಇಟಗಾ (ಕೆ) ಗ್ರಾಮದ ಚಂದ್ರಕಲಾ ತಿಪ್ಪಣ್ಣ ಇಜೇರಿ (೩೦), ದೇವಕಿ ರಾಜೇಂದ್ರ ಇಜೇರಿ (೨೦) ಮತ್ತು ಆಟೋ ಚಾಲಕ ಖಣದಾಳ ಗ್ರಾಮದ ಪ್ರಹ್ಲಾದ ಕಟ್ಟಿಮನಿ (೨೮) ಮೃತರು. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಲಬುರಗಿಯಲ್ಲಿ ಕೆಲಸ ಮುಗಿಸಿ ಆಟೋದಲ್ಲಿ ಇಟಗಾ ಕಡೆ ಹೋಗುತ್ತಿದ್ದಾಗ ರಾಯಚೂರಿನಿಂದ ಬರುತ್ತಿದ್ದ ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮಹಿಳೆಯರಿಬ್ಬರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದು, ಚಾಲಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಆಟೋದಲ್ಲಿ ಸಿಲುಕಿದವರನ್ನು ಜನರ ಸಹಾಯದೊಂದಿಗೆ ಹೊರ ತೆಗೆಯಲಾಯಿತು. ಕೆಲಹೊತ್ತು ಹೆದ್ದಾರಿಯಲ್ಲಿ ಸಂಚಾರ ಬಂದ್ ಆಗಿತ್ತು. ಪೊಲೀಸರು ದೌಡಾಯಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ನಗರ ಪೊಲೀಸ್ ಆಯುಕ್ತ ಚೇತನ ಆರ್., ಡಿಸಿಪಿಗಳಾದ ಕನ್ನಿಕಾ ಸಿಕ್ರಿವಾಲ್, ಚಂದ್ರಪ್ಪ, ಇನ್‌ಸ್ಪೆಕ್ಟರ್ ಮಹಾಂತೇಶ ಪಾಟೀಲ್ ಮತ್ತು ಸಿಬ್ಬಂದಿ ಭೇಟಿ ನೀಡಿದ್ದು, ಸಂಚಾರ ಠಾಣೆ-೨ರಲ್ಲಿ ಕೇಸ್ ದಾಖಲಾಗಿದೆ.
ಈ ಅಪಘಾತದ ಸ್ಥಳ ಸಮೀಪದಲ್ಲೇ ಗುರುವಾರ ರಾತ್ರಿ ಲಾರಿ ಮತ್ತು ಅಟೋ ನಡುವೆ ಡಿಕ್ಕಿಯಾಗಿ ಆಟೋದಲ್ಲಿದ್ದ ನಿಂಗಯ್ಯ ಸ್ವಾಮಿ ಎಂಬುವರು ಮೃತಪಟ್ಟಿದ್ದು, ಸಂಚಾರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.