

ಮಡಿಕೇರಿ:
ಮಡಿಕೇರಿಯಲ್ಲಿ ಸೋಮವಾರ ಮುಂಜಾನೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ ಜ. ಕೆ.ಎಸ್. ತಿಮ್ಮಯ್ಯ ವೃತ್ತಕ್ಕೆ ಹಾನಿ ಮತ್ತು ಪ್ರತಿಮೆ ಉರುಳಿ ಬಿದ್ದ ನಂತರ ಬಸ್ ಚಾಲಕರ ನಿರ್ಲಕ್ಷ್ಯದ ಚಾಲನೆ ಬಗ್ಗೆ ಜಿಲ್ಲೆಯಲ್ಲಿ ಚರ್ಚೆ ಶುರುವಾಗಿದೆ. ಸರ್ಕಾರಿ ಬಸ್‌ಗಳಷ್ಟೇ ಸಂಖ್ಯೆಯಲ್ಲಿ ಕೊಡಗಿನಲ್ಲಿ ಖಾಸಗಿ ಬಸ್‌ಗಳೂ ಓಡಾಡುತ್ತಿದ್ದು ಆಗಾಗ್ಗೆ ಸಂಭವಿಸುವ ಅಪಘಾತಗಳು ಸಾಕಷ್ಟು ಹಾನಿಯನ್ನುಂಟುಮಾಡಿದೆ. ಕಳೆದ ೫ ವರ್ಷಗಳಲ್ಲಿ ಜಿಲ್ಲೆಯಲ್ಲಿ ಸಂಭವಿಸಿದ ಒಟ್ಟು ೨,೩೨೯ ರಸ್ತೆ ಅಪಘಾತಗಳ ಪೈಕಿ ೯೭ ಅಪಘಾತಗಳು ಬಸ್‌ಗಳಿಂದಲೇ ಆಗಿದೆ.
ಮಡಿಕೇರಿಯ ಟೋಲ್‌ಗೇಟ್ ಜ. ತಿಮ್ಮಯ್ಯ ವೃತ್ತದಲ್ಲಿ ಸೋಮವಾರ ಮುಂಜಾನೆ ಸಂಭವಿಸಿದ ಅಪಘಾತ ಕೊಡಗಿನ ಜನರನ್ನು ದಿಗ್ಭ್ರಮೆಗೊಳಿಸಿದೆ. ಇದು ನಗರದ ಪ್ರಮುಖ ವೃತ್ತವಾಗಿದ್ದು, ಮಂಗಳೂರು, ಭಾಗಮಂಡಲ, ನಾಪೋಕ್ಲು, ಗೋಣಿಕೊಪ್ಪ, ವಿರಾಜಪೇಟೆ, ಮೂರ್ನಾಡು, ಬೆಂಗಳೂರು, ಮೈಸೂರು, ಕುಶಾಲನಗರ, ಸೋಮವಾರಪೇಟೆ…ಹೀಗೆ ಯಾವ ಕಡೆಯಿಂದ ಬಂದು ನಗರದೊಳಗೆ ಪ್ರವೇಶಿಸಬೇಕಾದರೂ ಈ ವೃತ್ತದ ಮೂಲಕವೇ ಹಾದುಹೋಗಬೇಕು. ಹಾಗಾಗಿ ಈ ಜಾಗ ಹಗಲಿನಲ್ಲಿ ಜನಸಂದಣಿಯಿಂದ ಕೂಡಿರುತ್ತದೆ.
ತಮ್ಮ ತಮ್ಮ ಊರುಗಳಿಗೆ ತೆರಳಬೇಕಾದರೆ ಇಲ್ಲಿರುವ ಬಸ್ ನಿಲ್ದಾಣಗಳಲ್ಲಿ ಹಗಲಿನ ಎಲ್ಲಾ ಸಮಯದಲ್ಲೂ ನೂರಾರು ಪ್ರಯಾಣಿಕರು ಕಾಯುತ್ತಿರುತ್ತಾರೆ. ಪ್ರತಿಭಟನೆ, ಸಂಭ್ರಮಾಚರಣೆ, ನಗರಕ್ಕೆ ಆಗಮಿಸುವ ಗಣ್ಯರಿಗೆ ಸ್ವಾಗತ… ಹೀಗೆ ಹಲವು ಕಾರಣಗಳಿಗೆ ಸಾರ್ವಜನಿಕರು ಈ ವೃತ್ತದಲ್ಲೇ ಸೇರುತ್ತಾರೆ. ಹಾಗಾಗಿಯೇ ಜಿಲ್ಲೆಯಲ್ಲಿ ಜನರಿಗೆ ಜ. ತಿಮ್ಮಯ್ಯ ವೃತ್ತದ ಜತೆಗೆ ಭಾವನಾತ್ಮಕ ನಂಟು ಹುಟ್ಟಿಕೊಂಡಿದೆ. ಒಂದು ವೇಳೆ ಇದೇ ಅಪಘಾತ ಹಗಲಿನಲ್ಲಿ ಇಲ್ಲಿ ಸಂಭವಿಸಿದ್ದರೆ ದೊಡ್ಡ ಅನಾಹುತವೇ ಆಗುತ್ತಿತ್ತು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಸೋಮವಾರದ ಕೆಎಸ್‌ಆರ್‌ಟಿಸಿ ಬಸ್ ಅಪಘಾತಕ್ಕೆ ಚಾಲಕನ ನಿರ್ಲಕ್ಷ್ಯದ ಚಾಲನೆಯೇ ಕಾರಣ ಎನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಈ ಬೆನ್ನಲ್ಲೇ ನಿರ್ಲಕ್ಷ್ಯದ ವಾಹನ ಚಾಲನೆ ಬಗ್ಗೆ ಜಿಲ್ಲೆಯಾದ್ಯಂತ ಚರ್ಚೆಗಳು ನಡೆಯುತ್ತಿದೆ. ಅದರಲ್ಲೂ ಬಸ್ ಚಾಲಕರ ವರ್ತನೆ ಬಗ್ಗೆ ಸಾರ್ವಜನಿಕರಲ್ಲಿ ಆಕ್ಷೇಪಗಳಿವೆ. ಕೊಡಗಿನ ಜೀವನಾಡಿಗಳೆಂದೇ ಪರಿಗಣಿಸಿರುವ ಖಾಸಗಿ ಬಸ್‌ಗಳ ಪೈಕಿ ಕೆಲವೊಂದು ಬಸ್‌ಗಳು ಚಾಲಕರ ನಿರ್ಲಕ್ಷ್ಯದಿಂದ ಜನರ ಜೀವಕ್ಕೆ ಕುತ್ತು ತಂದಿರುವುದೂ ಇದೆ.
ಕೆಎಸ್‌ಆರ್‌ಟಿಸಿ ಬಸ್‌ಗಳ ಕೆಲವು ಚಾಲಕರ ಉದ್ಧಟತನದ ವರ್ತನೆಯೇನೂ ಕಡಿಮೆ ಇಲ್ಲ. ಬೆಟ್ಟ-ಗುಡ್ಡಗಳ ಮೂಲಕ ನಿರ್ಮಾಣ ಆಗಿರುವ ಎತ್ತರ, ತಗ್ಗು, ತಿರುವುಗಳಿಂದ ಕೂಡಿರುವ ಕೊಡಗಿನ ರಸ್ತೆಗಳಲ್ಲಿ ಎಷ್ಟು ಎಚ್ಚರಿಕೆಯಿಂದ ಚಾಲನೆ ಮಾಡಿದರೂ ಅದು ಕಡಿಮೆಯೇ ಆಗಿರುತ್ತದೆ. ಅನುಭವಿ ಹಿರಿಯ ಚಾಲಕರು ಹೇಳುವ ಪ್ರಕಾರ ಮೈಯೆಲ್ಲಾ ಕಣ್ಣಾಗಿ ಇಲ್ಲಿ ವಾಹನಗಳನ್ನು ಓಡಿಸಬೇಕಾಗುತ್ತದೆ. ಜಿಲ್ಲೆಯ ಹಲವೆಡೆ ಕಂಡುಬರುವ ಮಂಜು ಮುಸುಕಿದ ವಾತಾವರಣವೂ ಅಪಘಾತಗಳ ಸಂಖ್ಯೆ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಮೊದಲು ಕೊಡಗಿನಲ್ಲಿ ೧೫೦ ಖಾಸಗಿ ಬಸ್‌ಗಳು ಓಡಾಡುತ್ತಿದ್ದವು. ಕೋವಿಡ್ ನಂತರ ೨೦ ಬಸ್‌ಗಳ ಸಂಚಾರ ಸ್ಥಗಿತವಾಗಿದ್ದು ೧೩೦ ಖಾಸಗಿ ಬಸ್‌ಗಳು ಓಡಾಡುತ್ತಿವೆ. ೯೪ ಮಾರ್ಗಗಳಲ್ಲಿ ಮಡಿಕೇರಿ ಡಿಪೋದ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸುತ್ತಿವೆ. ಆದರೆ ಖಾಸಗಿ ಬಸ್‌ಗಳ ಸಂಖ್ಯೆಗೆ ಹೋಲಿಸಿದರೆ ಕೊಡಗಿನೊಳಗೆ ಓಡಾಡುವ ಸರ್ಕಾರಿ ಬಸ್‌ಗಳ ಸಂಖ್ಯೆ ಕಡಿಮೆ ಇದೆ. ಕೆಲವೊಂದು ಮಾರ್ಗಗಳಲ್ಲಿ ಖಾಸಗಿ ಬಸ್‌ಗಳ ಮಧ್ಯೆ ನಡೆಯುವ ಅಹಿತಕರ ಪೈಪೋಟಿಯಿಂದಲೂ ಆಗಾಗ್ಗೆ ಅಪಘಾತಗಳು ಸಂಭವಿಸುತ್ತಿರುತ್ತದೆ.
ಕೆಎಸ್‌ಆರ್‌ಟಿಸಿಯಲ್ಲಿ ಹಳೆಯ ಬಸ್‌ಗಳ ಬಳಕೆಯೂ ಅಪಘಾತಗಳು ನಡೆಯುವುದಕ್ಕೆ ಪ್ರಮುಖ ಕಾರಣಗಳಲ್ಲಿ ಒಂದು ಎಂದು ಹೇಳಲಾಗುತ್ತಿದೆ. ಕೆಲವು ಬಸ್‌ಗಳು ರಸ್ತೆಯಲ್ಲಿ ಓಡುವ ಅರ್ಹತೆಯನ್ನು ಕಳೆದುಕೊಂಡಿದ್ದರೂ ಮತ್ತೆ ಮತ್ತೆ ಬಳಸಲಾಗುತ್ತಿದೆ. ಹಳೆಯ ಟೈರ್‌ಗಳ ಬಳಕೆ, ಹಳೆಯ ಬಿಡಿಭಾಗಗಳ ಮರುಬಳಕೆ ಸಾಮಾನ್ಯವಾಗಿದೆ. ಬಸ್‌ಗಳ ನಿರ್ವಹಣೆಯೂ ಸರಿಯಾಗಿ ನಡೆಯುವುದಿಲ್ಲ. ಬಸ್‌ಗಳಲ್ಲಿನ ಸಮಸ್ಯೆಗಳ ಬಗ್ಗೆ ಹೇಳಿದರೆ ಡಿಪೋದಲ್ಲಿ ಸ್ಪಂದಿಸುವುದಿಲ್ಲ ಎಂದು ಕೆಲವು ಚಾಲಕರು ಅಳಲು ತೋಡಿಕೊಳ್ಳುತ್ತಾರೆ.
ಕೊಡಗಿನಲ್ಲಿ ಅಪಘಾತಗಳ ಸಂಖ್ಯೆ ಜಾಸ್ತಿ ಆಗುವಲ್ಲಿ ಇಲ್ಲಿಗೆ ಆಗಮಿಸುವ ಪ್ರವಾಸಿಗರ ಕೊಡುಗೆಯೂ ಸಾಕಷ್ಟಿದೆ. ಇಲ್ಲಿನ ತಿರುವು ರಸ್ತೆಗಳು, ಅಪಾಯಕಾರಿ ಜಾಗದ ಅರಿವು ಇರದ ಪ್ರವಾಸಿಗರು ವಿಸ್ತಾರವಾದ ಹೆದ್ದಾರಿಗಳಲ್ಲಿ ಓಡಿಸಿದಂತೆ ವಾಹನ ಚಾಲಿಸಿ ಅಪಘಾತಗಳಿಗೆ ಕಾರಣರಾಗುತ್ತಿದ್ದಾರೆ. ಕಳೆದ ೫ ವರ್ಷಗಳಲ್ಲಿ ಜಿಲ್ಲೆಯಲ್ಲಿ ಸಂಭವಿಸಿದ ಒಟ್ಟು ೨,೩೨೯ ಅಪಘಾತಗಳು ಮತ್ತು ಇದರಲ್ಲಿ ಮೃತಪಟ್ಟ ೩೫೪ ಜನರ ಪೈಕಿ ಶೇ. ೭೫ ಪ್ರಕರಣಗಳು ಪ್ರವಾಸಿಗರಿಗೆ ಸಂಬಂಧಿಸಿದ್ದು ಎನ್ನುವುದು ವಿಶೇಷ.
ಕೊಡಗಿನಲ್ಲಿ ೨೦೧೮ರಲ್ಲಿ ಒಟ್ಟು ೫೪೬ ಅಪಘಾತಗಳು ಸಂಭವಿಸಿದ್ದು ೭೫ ಜನ ಪ್ರಾಣ ಕಳೆದುಕೊಂಡಿದ್ದಾರೆ. ೭೨೪ ಪ್ರಯಾಣಿಕರು ಗಾಯಗೊಂಡಿದ್ದಾರೆ. ೨೦೧೯ರಲ್ಲಿ ೪೬೯ ಅಪಘಾತಗಳು ನಡೆದಿದ್ದು ೮೭ ಸಾವುಗಳಾಗಿದೆ. ೬೧೨ ಜನರಿಗೆ ಗಾಯಗಳಾಗಿದೆ. ೨೦೨೦ರಲ್ಲಿ ೩೮೬ ಅಪಘಾತಗಳು ಆಗಿದ್ದು ೬೦ ಪ್ರಯಾಣಿಕರು ಮೃತಪಟ್ಟಿದ್ದಾರೆ. ೪೮೯ ಜನರಿಗೆ ಗಾಯಗಳಾಗಿದೆ. ೨೦೨೧ರಲ್ಲಿ ೪೮೦ ಅಪಘಾತಗಳು ಸಂಭವಿಸಿದ್ದು ೬೬ ಸಾವುಗಳು ಆಗಿದೆ. ೪೮೭ ಪ್ರಯಾಣಿಕರು ಗಾಯಗೊಂಡಿದ್ದಾರೆ. ೨೦೨೨ರಲ್ಲಿ ನಡೆದ ೪೪೮ ಅಪಘಾತಗಳಲ್ಲಿ ೬೬ ಜನರು ಸಾವನ್ನಪ್ಪಿದ್ದು ೬೧೮ ಪ್ರಯಾಣಿಕರು ಗಾಯಗೊಂಡಿದ್ದಾರೆ.
ಅಪಘಾತಗಳು ಮತ್ತು ಅದರಿಂದ ಆಗುವ ಸಾವು ನೋವುಗಳಿಗೆ ಕಡಿವಾಣ ಹಾಕಬೇಕಾದರೆ ಚಾಲಕರು ಸುರಕ್ಷಿತ ವಾಹನ ಚಾಲನೆ ಕಡೆಗೆ ಗಮನ ಕೊಡಬೇಕಾಗುತ್ತದೆ. ಇದಕ್ಕಾಗಿ ಅವರಿಗೆ ಸಾಮಾನ್ಯ ತರಬೇತಿಗಳ ಜತೆಗೆ ಮನೋ-ದೈಹಿಕ ಕಾರ್ಯಗಾರಗಳನ್ನೂ ನಡೆಸಬೇಕು. ಕಾಲ ಕಾಲಕ್ಕೆ ವೈದ್ಯಕೀಯ ತಪಾಸಣೆಗೆ ಒಳಗಾಗಬೇಕು. ನಿರಂತರ ಚಾಲನೆ ಮಧ್ಯೆ ಬಿಡುವು ತೆಗೆದುಕೊಳ್ಳುವಂತಾಗಬೇಕು. ವಾರಕ್ಕೆ ಕನಿಷ್ಠ ಒಂದು ರಜೆ ತೆಗೆದುಕೊಳ್ಳಬೇಕು ಎನ್ನುವ ಸಲಹೆ ಕೊಡುತ್ತಾರೆ ವೈದ್ಯರು.
ಇತ್ತೀಚಿನ ವರ್ಷಗಳಲ್ಲಿ ರಸ್ತೆ ಅಪಘಾತಗಳು ಹೆಚ್ಚಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ರಾಜ್ಯದಲ್ಲಿ ಸುರಕ್ಷಿತ ರಸ್ತೆ ಸಂಚಾರಕ್ಕಾಗಿ ಸಾರಿಗೆ ಇಲಾಖೆ ಮೋಟಾರು ವಾಹನಗಳ ಕಾಯ್ದೆ ೧೯೮೮, ಕೇಂದ್ರ ಮೋಟಾರು ವಾಹನ ನಿಯಮಗಳು ೧೯೮೯, ಕರ್ನಾಟಕ ಮೋಟಾರು ವಾಹನಗಳ ನಿಯಮಗಳು ೧೯೮೯ ಹಾಗೂ ರಸ್ತೆ ಸುರಕ್ಷತಾ ಪ್ರಾಧಿಕಾರ ಕಾಯ್ದೆ ೨೦೧೭ ಮತ್ತು ರಸ್ತೆ ನಿಯಂತ್ರಣ ಕಾಯ್ದೆ ೧೯೮೯ ಗಳನ್ನು ಪಾಲಿಸಲಾಗುತ್ತಿದೆ. ಜಿಲ್ಲಾ ರಸ್ತೆ ಸುರಕ್ಷಾ ಸಮಿತಿಯಿಂದ ಖಾಸಗಿ ಬಸ್ ಚಾಲಕರು ಸೇರಿದಂತೆ ಎಲ್ಲಾ ವರ್ಗದ ವಾಹನ ಚಾಲಕರಿಗೆ ರಸ್ತೆ ಸುರಕ್ಷತಾ ಕಾರ್ಯಕ್ರಮಗಳಲ್ಲಿ ಅರಿವು ಮೂಡಿಸುವ ಕ್ರಮ ವಹಿಸಲಾಗುತ್ತಿರುತ್ತದೆ.
ರಾಮಲಿಂಗ ರೆಡ್ಡಿ, ಸಾರಿಗೆ ಮತ್ತು ಮುಜರಾಯಿ ಸಚಿವ
ಜ. ತಿಮ್ಮಯ್ಯ ವೃತ್ತ ಯಾವಾಗಲೂ ಜನಸಂದಣಿಯಿಂದ ಕೂಡಿರುತ್ತದೆ. ಮಡಿಕೇರಿಯಲ್ಲಿ ಸೋಮವಾರ ಮುಂಜಾನೆ ಸಂಭವಿಸಿದ ಅಪಘಾತ ಒಂದು ವೇಳೆ ಹಗಲಿನಲ್ಲಿ ಆಗಿದ್ದರೆ ದೊಡ್ಡ ಅನಾಹುತವೇ ನಡೆದುಹೋಗುತ್ತಿತ್ತು. ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿದರೆ ಚಾಲಕನ ನಿರ್ಲಕ್ಷ್ಯವೇ ಕಾರಣ ಎನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಚಾಲಕರ ನಿರ್ಲಕ್ಷ್ಯದ ಚಾಲನೆಗೆ ಕಡಿವಾಣ ಹಾಕಿದರೆ ಭವಿಷ್ಯದಲ್ಲಿ ಸಂಭವಿಸಬಹುದಾದ ಅಪಘಾತಗಳನ್ನು ನಿಯಂತ್ರಿಸಬಹುದು.
ಎನ್.ಕೆ. ಮೋಹನ್‌ಕುಮಾರ್, ಉದ್ಯಮಿ, ಕುಶಾಲನಗರ