

ಪಾಂಡವಪುರ: ತಾಲೂಕಿನ ಜಕ್ಕನಹಳ್ಳಿ ಸಮೀಪ ಚಲಿಸುತ್ತಿದ್ದ ಬಸ್‌ನಿಂದ ಪ್ರಯಾಣಿಕನೊಬ್ಬ ಆಯತಪ್ಪಿ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ತಾಲೂಕಿನ ಅರಕನಕೆರೆ ನಿವಾಸಿ ಚೆಲುವೇಗೌಡ(75) ಮೃತರು. ಜಕ್ಕನಹಳ್ಳಿಯಿಂದ ದುದ್ದ, ಶಿವಳ್ಳಿ ಮಾರ್ಗವಾಗಿ ಮಂಡ್ಯಕ್ಕೆ ತೆರಳುತ್ತಿದ್ದ ಬಸ್ ಪ್ರಯಾಣಿಕರಿಂದ ತುಂಬಿತ್ತು. ಸ್ವಗ್ರಾಮಕ್ಕೆ ತೆರಳುತ್ತಿದ್ದ ಚೆಲುವೇಗೌಡ ಬಾಗಿಲು ಇಲ್ಲದ ಬಸ್‌ನಲ್ಲಿ ಫುಟ್‌ಬೋರ್ಡ್‌ನಲ್ಲಿ ನಿಂತು ನೇತು ಹಾಕಿಕೊಂಡು ಪ್ರಯಾಣಿಸುತ್ತಿದ್ದ. ಮಾರ್ಗಮಧ್ಯೆದಲ್ಲಿ ಬಸ್ಸಿನ ಗಾಲಿಗಳು ಹಳ್ಳಕ್ಕೆ ಬಿದ್ದ ಪರಿಣಾಮ ಬಾಗಿಲಲ್ಲಿ ನೇತುಹಾಕಿಕೊಂಡಿದ್ದ ವೃದ್ಧ ಕೆಳಗೆ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ತಲೆಗೆ ತೀವ್ರ ಪೆಟ್ಟು ಬಿದ್ದು ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸಾರ್ವಜನಿಕರ ಆಕ್ರೋಶ: ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆ ಜಾರಿಗೊಂಡ ಬಳಿಕ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ. ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ವೃದ್ಧರು, ಅಂಗವಿಕಲರಾದಿಯಾಗಿ ಯಾರೊಬ್ಬರಿಗೂ ಸೀಟ್‌ಗಳಲ್ಲಿ ಆಸೀನರಾಗಲು ಅವಕಾಶ ಸಿಗುತ್ತಿಲ್ಲ. ಸರ್ಕಾರಿ ಬಸ್‌ಗಳು ತುಂಬಿ ತುಳುಕುತ್ತಿವೆ. ಘಟನೆಗೆ ಈ ಶಕ್ತಿ ಯೋಜನೆಯೂ ಕಾರಣವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ರಸ್ತೆ ಸಂಚಾರ ತಡೆದು ಪ್ರತಿಭಟನೆ: ಘಟನೆಯ ಸುದ್ದಿ ವ್ಯಾಪಿಸುತ್ತಿದ್ದಂತೆ ಸ್ಥಳದಲ್ಲಿ ಜಮಾವಣೆಗೊಂಡ ಸ್ಥಳೀಯರು ಕೆಎಸ್‌ಆರ್‌ಟಿಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಘಟನೆ ಸಮಭವಿಸಲು ಬಸ್ಸಿನಲ್ಲಿ ಬಾಗಿಲು ವ್ಯವಸ್ಥೆ ಇಲ್ಲದಿರುವುದೇ ಕಾರಣವಾಗಿದೆ. ಮೃತ ವ್ಯಕ್ತಿಯ ಕುಟುಂಬಕ್ಕೆ ಸ್ಥಳದಲ್ಲೇ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿ ರಸ್ತೆ ಸಂಚಾರ ತಡೆ ನಡೆಸಿ ಪ್ರತಿಭಟಿಸಿದರು.
ಸ್ಥಳಕ್ಕಾಗಮಿಸಿದ ಕೆಎಸ್‌ಆರ್‌ಟಿಸಿ ಅಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡ ಪ್ರತಿಭಟನಾಕಾರರು ಪರಿಹಾರಕ್ಕೆ ಒತ್ತಾಯಿಸಿದರು. ಸ್ಥಳದಲ್ಲೇ 25 ಸಾವಿರ ರೂ.ಪರಿಹಾರ ನೀಡಿ ಹೆಚ್ಚಿನ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ ಬಳಿಕ ಪ್ರತಿಭಟನೆ ಕೈಬಿಡಲಾಯಿತು.
ಘಟನೆಗೆ ಕಾರಣವಾದ ಬಸ್ಸನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಾಲಕ ತಲೆಮರೆಸಿಕೊಂಡಿದ್ದು, ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.