

ಮಂಡ್ಯ: ನಗರದ ಹೊರವಲಯದ ಖಾಸಗಿ ಆಸ್ಪತ್ರೆ ಎದುರು ಸೋಮವಾರ ಬೆಳಗ್ಗೆ ಅತಿ ವೇಗದಿಂದ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಕಂಟೈನರ್‌ಗೆ ಡಿಕ್ಕಿ ಹೊಡೆದು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಪಲ್ಟಿ ಹೊಡೆದಿದೆ. ಪರಿಣಾಮ 25ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಪಾಯವಾಗಿಲ್ಲ. ಜತೆಗೆ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ 70 ಜನರ ಪಾಲಿಗೆ ಕಂಟೈನರ್ ಆಪದ್ಭಾಂಧವ ಆಗಿದೆ.
ಚಾಲಕ ಶಶಿಕುಮಾರ್, ಪ್ರಯಾಣಿಕರಾದ ಪುತ್ತೂರಿನ ನಿವಾಸಿ ಮಾದಪ್ಪ, ಮೈಸೂರಿನ ಚಿಕ್ಕಮಾದು, ಮಮತಾ, ರಮ್ಮನಹಳ್ಳಿ ಲೀಲಾವತಿ, ಹುಲಿಯೂರು ದುರ್ಗದ ಅರ್ಪಿತಾ, ಮದ್ದೂರಿನ ಮೋಹಿತ, ಬೆಂಗಳೂರಿನ ವರಲಕ್ಷ್ಮೀ, ನಂಜನಗೂಡಿನ ಮಹದೇವಮ್ಮ, ನಿಡಸಾಲೆ ನಾಗೇಶ್, ಪಾವಗಡದ ಶಶಿಕುಮಾರ್, ಆತಗೂರಿನ ಮಂಗಳಮ್ಮ, ಚಿಂದಗಿರಿದೊಡ್ಡಿಯ ರಾಮಚಂದ್ರ, ಹುಲಿಯೂರು ದುರ್ಗದ ಗಿರೀಗೌಡ, ಮಲ್ಲಿಕಾರ್ಜುನ, ಗೋಪಾಲ ಹಾಗೂ ವಿದ್ಯಾರ್ಥಿಗಳಾದ ವಿನಯ್, ಸಚ್ಚಿನ್, ಬೀರೇಶ್, ಯೋಗೇಶ್, ಮೋನಿಕಾ, ಶಿವರಾಜ್, ಕೃಷ್ಣ, ಸೌಮ್ಯಾ, ಶಿಲ್ಪಾ, ಅನಿತಾ, ಕಿರಣ್‌ಕುಮಾರ್, ದಯಾನಂದ, ಹೇಮಾದ್ರಿ, ರೇಷ್ಮಾ ಗಾಯಗೊಂಡು ಚಿಕಿತ್ಸೆ ಪಡೆದಿದ್ದಾರೆ.
ತುಮಕೂರು ಜಿಲ್ಲೆ ಕುಣಿಗಲ್ ಡಿಪೋಗೆ ಸೇರಿದ ಕೆಎಸ್‌ಆರ್‌ಟಿಸಿ ಬಸ್ ಮೈಸೂರಿಗೆ ತೆರಳುತ್ತಿತ್ತು. ಬಸ್‌ನಲ್ಲಿ 70ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಈ ಪೈಕಿ ಬಹುತೇಕ ವಿದ್ಯಾರ್ಥಿಗಳು. ಬೆಳಗ್ಗೆ 9.50ರ ಸುಮಾರಿಗೆ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಬರುತ್ತಿದ್ದ ಬಸ್, ಮಂಡ್ಯ ನಗರಕ್ಕೆ ಬರಲು ಖಾಸಗಿ ಆಸ್ಪತ್ರೆ ಎದುರು ಸರ್ವೀಸ್ ರಸ್ತೆ ಕಡೆಗೆ ತಿರುಗಿಸಲಾಗಿದೆ. ಆದರೆ ಅತಿ ವೇಗವಿದ್ದ ಕಾರಣ ನಿಯಂತ್ರಣ ತಪ್ಪಿ ರಸ್ತೆ ಬದಿ ನಿಲ್ಲಿಸಿದ ಕಂಟೈನರ್‌ಗೆ ಡಿಕ್ಕಿ ಹೊಡೆದು ಪಲ್ಟಿ ಹೊಡೆದಿದೆ. ಕೂಡಲೇ ಸ್ಥಳೀಯರು ಧಾವಿಸಿ ಬಸ್‌ನೊಳಗಿದ್ದವರನ್ನು ಹೊರಗೆ ಎಳೆದುಕೊಂಡಿದ್ದಾರೆ. ಬಳಿಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೇರಿದ ಆಂಬ್ಯುಲೆನ್ಸ್ ಕರೆಸಿಕೊಂಡು ಖಾಸಗಿ ಆಸ್ಪತ್ರೆ ಹಾಗೂ ಮಿಮ್ಸ್‌ಗೆ ಗಾಯಾಳುಗಳನ್ನು ರವಾನಿಸಲಾಗಿದ್ದು, ಎಲ್ಲರೂ ಚಿಕಿತ್ಸೆ ಪಡೆದಿದ್ದಾರೆ. ಅಪಘಾತದ ಸಮಯದಲ್ಲಿ ವ್ಯಕ್ತಿಯೊಬ್ಬರು ಬೈಕ್‌ನಲ್ಲಿ ಹೋಗುತ್ತಿದ್ದು, ಇವರ ಮುಂದೆಯೇ ಬಸ್ ಬಿದ್ದಿದ್ದು, ಆತ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಕೆಲವೊತ್ತಿನ ಬಳಿಕ ಕೆಎಸ್‌ಆರ್‌ಟಿಸಿ ಹಾಗೂ ಪೊಲೀಸ್ ಅಧಿಕಾರಿ, ಸಿಬ್ಬಂದಿ ಸ್ಥಳಕ್ಕಾಗಮಿಸಿ ರಸ್ತೆಯಲ್ಲಿ ಬಿದ್ದಿದ್ದ ಬಸ್ ಅನ್ನು ಕ್ರೇನ್ ಸಹಾಯದಿಂದ ಮೇಲೆತ್ತಿದರು. ಅಂತೆಯೇ ಅಸ್ತವ್ಯಸ್ತಗೊಂಡಿದ್ದ ಸಂಚಾರವನ್ನು ಸುಗಮಗೊಳಿಸಿದರು. ಶಾಸಕ ರವಿಕುಮಾರ್ ಗಣಿಗ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಪದ್ಭಾಂಧವ ಕಂಟೈನರ್
ಅಪಘಾತ ಪ್ರಕರಣವನ್ನು ನೋಡಿದರೆ ಕಂಟೈನರ್ ಆಪದ್ಭಾಂಧವನಂತಾಗಿದೆ. ವೇಗದಿಂದ ಬರುತ್ತಿದ್ದ ಬಸ್ ನಿಯಂತ್ರಣ ತಪ್ಪಿ ಕಂಟೈನರ್‌ಗೆ ಡಿಕ್ಕಿ ಹೊಡೆದಿದ್ದರಿಂದ ಎದುರಾಗಬಹುದಾದ ದೊಡ್ಡ ಅನಾಹುತ ತಪ್ಪಿದೆ. ಒಂದು ವೇಳೆ ಸ್ಥಳದಲ್ಲಿ ಕಂಟೈನರ್ ಇಲ್ಲದಿದ್ದರೆ ವಿದ್ಯುತ್ ಕಂಬ ಹಾಗೂ ಕಾಂಪೌಂಡ್‌ಗೆ ಬಸ್ ಡಿಕ್ಕಿ ಹೊಡೆಯಬೇಕಿತ್ತು.
ಇನ್ನು ಚಾಲಕನ ನಿರ್ಲಕ್ಷೃವೇ ಅಪಘಾತಕ್ಕೆ ಕಾರಣ ಎನ್ನುವ ಆರೋಪವನ್ನು ಪ್ರಯಾಣಿಕರು ಮಾಡಿದ್ದಾರೆ. ಒಂದು ಕೈಯಲ್ಲಿ ಮೊಬೈಲ್ ಹಿಡಿದು, ವೇಗವಾಗಿ ಚಾಲನೆ ಮಾಡಿದರಿಂದ ಅವಘಡ ಸಂಭವಿಸಿದೆ ಎಂದಿದ್ದಾರೆ. ಆದರೆ ಆರೋಪವನ್ನು ತಳ್ಳಿ ಹಾಕಿರುವ ಚಾಲಕ, ಬ್ರೇಕ್ ಲೈನರ್ ಜಾಮ್ ಆಗಿದರಿಂದ ಅಪಘಾತ ಸಂಭವಿಸಿದೆ. ಬಸ್ 40 ಕಿ.ಮೀ ವೇಗದಲ್ಲಿತ್ತು. ನಾನು ಮೊಬೈಲ್ ಬಳಕೆ ಮಾಡುತ್ತಿರಲಿಲ್ಲ ಎಂದಿದ್ದಾರೆ. ಅಪಘಾತದ ದೃಶ್ಯ ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.